ಬಹುಸಂಖ್ಯಾತರ ಆಶಯದಂತೆ ಭಾರತ ಕೆಲಸ ಮಾಡಲಿದೆ; 'ಕಠ್‌ಮುಲ್ಲಾಗಳು' ದೇಶವಿರೋಧಿಗಳು:‌ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ

ಅಲಾಹಾಬಾದ್ ಹೈಕೋರ್ಟ್ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಕಾನೂನು ಕೋಶ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ನ್ಯಾ. ಯಾದವ್ ಮಾತನಾಡಿದರು.
Justice Shekhar Kumar Yadav with Allahabad High Court
Justice Shekhar Kumar Yadav with Allahabad High Court
Published on

ಬಲಪಂಥೀಯ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾನೂನು ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸುವ ಮೂಲಕ ಅಲಾಹಾಬಾದ್ ಹೈಕೋರ್ಟ್‌ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ವಿವಾದವೊಂದಕ್ಕೆ ನಾಂದಿ ಹಾಡಿದ್ದಾರೆ.

ಮುಸ್ಲಿಂ ಸಮುದಾಯದ ವಿರುದ್ಧ ವಿವಾದಾಸ್ಪದ ಹೇಳಿಕೆ ನೀಡಿದ ನ್ಯಾಯಮೂರ್ತಿಗಳು ಬಹುಸಂಖ್ಯಾತ ಸಮುದಾಯದ ಆಶಯದಂತೆ ಭಾರತ ಕಾರ್ಯ ನಿರ್ವಹಿಸಲಿದೆ. ಬಹುಸಂಖ್ಯಾತರ ಕ್ಷೇಮ ಮತ್ತು ಸಂತೋಷ ಉಳಿದವರಿಗಿಂತ ಮೇಲುಗೈ ಸಾಧಿಸುತ್ತದೆ ಎಂದರು.

Also Read
ವಿಎಚ್‌ಪಿ ಕಾರ್ಯಕ್ರಮದಲ್ಲಿ ಯುಸಿಸಿ, ಮತಾಂತರ ಕುರಿತು ಉಪನ್ಯಾಸ ನೀಡಿದ ಅಲಾಹಾಬಾದ್ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ

"ಇದು ಹಿಂದೂಸ್ಥಾನ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ, ಈ ದೇಶ ಇಲ್ಲಿ ವಾಸಿಸುವ ಬಹುಸಂಖ್ಯಾತರ ಇಚ್ಛೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕಾನೂನು. ಇದನ್ನು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಮಾತನಾಡುತ್ತಿಲ್ಲ ಬದಲಿಗೆ, ಬಹುಸಂಖ್ಯಾತರಿಗೆ ಅನುಗುಣವಾಗಿ ಕಾನೂನು ಕಾರ್ಯನಿರ್ವಹಿಸುತ್ತದೆ. ಇದನ್ನು ಕುಟುಂಬ ಅಥವಾ ಸಮಾಜದಂತೆ ಪರಿಗಣಿಸಿ - ಬಹುಸಂಖ್ಯಾತರ ಯೋಗಕ್ಷೇಮ ಮತ್ತು ಸಂತೋಷವನ್ನು ಯಾವುದು ಖಾತ್ರಿ ಪಡಿಸುತ್ತದೋ ಅದನ್ನು ಒಪ್ಪಲಾಗುತ್ತದೆ " ಎಂದು ನ್ಯಾಯಮೂರ್ತಿ ಯಾದವ್ ಹೇಳಿದರು.

ನ್ಯಾಯಮೂರ್ತಿಗಳು ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಮಾನ್ಯವಾಗಿ ಮುಸ್ಲಿಮರ ವಿರುದ್ಧ ಬಳಸಲಾಗುವ "ಕಠ್‌ಮುಲ್ಲಾ" ಎಂಬ ಪದ  ಬಳಕೆಯೂ ಸೇರಿದಂತೆ ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದರು. ಉಗ್ರರನ್ನು ಕಠ್‌ಮುಲ್ಲಾಗಳೆಂದು ಕರೆದ ಅವರು ದೇಶವು ಅವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

“ಇದು (ಕಠ್‌ಮುಲ್ಲಾ) ಸರಿಯಾದ ಪದ ಅಲ್ಲದಿರಬಹುದು. ಆದರೆ ಅದನ್ನು ಹೇಳಲು ನಾನು ಹಿಂಜರಿಯಲಾರೆ. ಏಕೆಂದರೆ ಅವರು ದೇಶಕ್ಕೆ ಮಾರಕ ಅವರು ಹಾನಿಕಾರಕ. ಅವರು ರಾಷ್ಟ್ರ ವಿರೋಧಿಗಳು ಮತ್ತು ಜನರಿಗೆ ಕುಮ್ಮಕ್ಕು ನೀಡುವವರು. ಅವರು ದೇಶದ ಪ್ರಗತಿ ಬಯಸದಂತಹ ಜನ. ಅವರ ಬಗ್ಗೆ ನಮಗೆ ಎಚ್ಚರಿಕೆ ಇರಬೇಕು ಎಂದು ಅವರು ನುಡಿದರು.

ಒಂದು ಸಮುದಾಯದ ಮಕ್ಕಳಿಗೆ ದಯೆ ಮತ್ತು ಅಹಿಂಸೆಯ ಮೌಲ್ಯಗಳನ್ನು ಕಲಿಸಿ ಅವರನ್ನು ಸಹಿಷ್ಣುಗಳನ್ನಾಗಿ ಬೆಳೆಸಲಾಗುತ್ತದೆ. ಆದರೆ ಇನ್ನೊಂದು ಸಮುದಾಯದ ಮಕ್ಕಳಿಂದ ಅದರಲ್ಲಿಯೂ ಪ್ರಾಣಿ ಹತ್ಯೆಯ ವಿಚಾರದಲ್ಲಿ ಸಹಿಷ್ಣುತೆ ನಿರೀಕ್ಷಿಸುವುದು ಅಸಾಧ್ಯ. ಎಂದು ಅವರು ಹೇಳಿದರು.

'ಏಕರೂಪ ನಾಗರಿಕ ಸಂಹಿತೆ: ಸಾಂವಿಧಾನಿಕ ಅವಶ್ಯಕತೆ' ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. ವಕ್ಫ್ ಮಂಡಳಿ ಕಾಯಿದೆ, ಮತಾಂತರಕ್ಕೆ ಕಾರಣಗಳು ಮತ್ತು ಸಂಭಾವ್ಯ ಪರಿಹಾರಗಳು ಎಂಬಂತಹ ವಿಚಾರವಾಗಿಯೂ ಅವರು ಚರ್ಚಿಸಿದರು.

ಏಕರೂಪ ನಾಗರಿಕ ಸಂಹಿತೆ ಕುರಿತು ಮಾತನಾಡುತ್ತಾ ಹಿಂದೂ ಧರ್ಮಗ್ರಂಥಗಳಲ್ಲಿ ಮಹಿಳೆಯರನ್ನು ದೇವತೆಗಳೆಂದು ಪೂಜಿಸಲಾಗುತ್ತದೆಯಾದರೂ ನಿರ್ದಿಷ್ಟ ಸಮುದಾಯದ ಸದಸ್ಯರು (ಮುಸ್ಲಿಮರು) ಬಹುಪತ್ನಿತ್ವ, ಹಲಾಲ್, ತ್ರಿವಳಿ ತಲಾಖ್‌ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು. ದೇಶದಲ್ಲಿ ಕೂಡಲೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಲಿದೆ ಎಂದು ಅವರು ಭವಿಷ್ಯ ನುಡಿದರು.

ಗಂಗಾಸ್ನಾನ ಮಾಡುವವರು ಅಥವಾ ಗಂಧ ಹಚ್ಚುವವರಿಗಷ್ಟೇ ಹಿಂದೂ ಧರ್ಮ ಸೀಮಿತವಲ್ಲ. ತಮ್ಮ ಧರ್ಮವನ್ನೂ ಮೀರಿ ನೆಲವನ್ನು ತಾಯಿಯಂತೆ ಕಾಣುವವರು ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ತ್ಯಾಗಕ್ಕೆ ಸಿದ್ಧರಿರುವವರು ಕುರಾನ್‌ ಅಥವಾ ಬೈಬಲನ್ನೇ ಪಾಲಿಸುತ್ತಿರಲಿ ಅವರು ಹಿಂದೂಗಳಾಗಿರುತ್ತಾರೆ ಎಂದರು.

Also Read
ವಿಎಚ್‌ಪಿ ಆಯೋಜಿಸಿದ್ದ ನ್ಯಾಯಮೂರ್ತಿಗಳ ಸಭೆಯನ್ನು ಟ್ವೀಟ್‌ ಮಾಡಿದ್ದು ಕಾನೂನು ಸಚಿವಾಲಯದ ಪ್ರಮಾದ: ವಿಎಚ್‌ಪಿ

ನ್ಯಾ. ಶೇಖರ್ ಅವರು ಸುಪ್ರೀಂ ಕೋರ್ಟ್‌ನ ಅಯೋಧ್ಯೆ ತೀರ್ಪಿನ ಬಗ್ಗೆಯೂ ಮಾತನಾಡಿದರು. ರಾಮಲಲ್ಲಾನನ್ನು ವಿಮೋಚನೆಗೊಳಿಸಲು ಮತ್ತು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುವುದನ್ನು ಕಾಣಲು ನಮ್ಮ ಪೂರ್ವಜರು ಅನೇಕ ತ್ಯಾಗ ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದರು.

ಹಿಂದೂಗಳು ತಮ್ಮ ಅಹಿಂಸೆ ಮತ್ತು ದಯೆಗೆ ಹೆಸರುವಾಸಿಯಾಗಿದ್ದು ಅದನ್ನು ಹೇಡಿತನ ಎಂದು ತಪ್ಪಾಗಿ ಭಾವಿಸಬಾರದು ಎಂದ ಅವರು ನಮ್ಮ ಧಾರ್ಮಿಕ ಆಚರಣೆಗಳು ಮತ್ತು ನಮ್ಮ ಪೂಜ್ಯ ವ್ಯಕ್ತಿಗಳು ಯಾವಾಗಲೂ ಮೊದಲ ಸ್ಥಾನದಲ್ಲಿರಬೇಕು ಎಂದು ಮಕ್ಕಳಿಗೆ ಕಲಿಸುವ ಮಹತ್ವವನ್ನು ಒತ್ತಿ ಹೇಳಿದರು.

Kannada Bar & Bench
kannada.barandbench.com