ವ್ಯಕ್ತಿಗೆ ಎಚ್ಐವಿ ದೃಢಪಟ್ಟಿದೆ ಎಂದ ಮಾತ್ರಕ್ಕೆ ಬಡ್ತಿ ನಿರಾಕರಿಸುವಂತಿಲ್ಲ: ಅಲಾಹಾಬಾದ್ ಹೈಕೋರ್ಟ್

ಕೇವಲ ಎಚ್ಐವಿ ದೃಢಪಟ್ಟಿದೆ ಎಂದ ಮಾತ್ರಕ್ಕೆ ದೈಹಿಕವಾಗಿ ಸದೃಢರಾಗಿರುವ ವ್ಯಕ್ತಿಗೆ ಉದ್ಯೋಗ ಅಥವಾ ಬಡ್ತಿ ನಿರಾಕರಿಸಲು ಸಾಧ್ಯವಿಲ್ಲ ಎಂದು ಸಿಆರ್‌ಪಿಎಫ್‌ ಅಧಿಕಾರಿಗೆ ಪರಿಹಾರ ನೀಡುವ ವೇಳೆ ನ್ಯಾಯಾಲಯ ಹೇಳಿದೆ.
ವ್ಯಕ್ತಿಗೆ ಎಚ್ಐವಿ ದೃಢಪಟ್ಟಿದೆ ಎಂದ ಮಾತ್ರಕ್ಕೆ ಬಡ್ತಿ ನಿರಾಕರಿಸುವಂತಿಲ್ಲ: ಅಲಾಹಾಬಾದ್ ಹೈಕೋರ್ಟ್

ಏಡ್ಸ್‌ ರೋಗ ದೃಢಪಟ್ಟ ವ್ಯಕ್ತಿಗಳು ಕೆಲಸ ಮಾಡಲು ಯೋಗ್ಯರಾಗಿದ್ದರೆ ಅವರಿಗೆ ಎಚ್‌ಐವಿ ಸೋಂಕು ಇದೆ ಎಂದು ಉದ್ಯೋಗ ಅಥವಾ ಬಡ್ತಿ ನಿರಾಕರಿಸುವಂತಿಲ್ಲ ಎಂದು ಅಲಾಹಾಬಾದ್‌ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಎಕ್ಸ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

“ಎಲ್ಲೆಡೆ ಸಾಮಾನ್ಯರಂತೆ ಪರಿಗಣಿತರಾಗುವ ಹಕ್ಕು ಎಚ್‌ಐವಿ ವ್ಯಕ್ತಿಗಳಿಗೆ ಇದ್ದು ಎಚ್‌ಐವಿ ಇಲ್ಲವೇ ಏಡ್ಸ್‌ ಸ್ಥಿತಿ ಆಧರಿಸಿ ಅವರಿಗೆ ಉದ್ಯೋಗಾವಕಾಶ ನಿರಾಕರಿಸುವಂತಿಲ್ಲ ಇಲ್ಲವೇ ನೌಕರಿ ಸಂಬಂಧಿತ ವಿಷಯಗಳಲ್ಲಿ ತಾರತಮ್ಯ ಮಾಡುವಂತಿಲ್ಲ” ಎಂದು ನ್ಯಾಯಮೂರ್ತಿಗಳಾದ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ಓಂ ಪ್ರಕಾಶ್ ಶುಕ್ಲಾ ಅವರಿದ್ದ ಪೀಠ ಹೇಳಿದೆ.

ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್‌) ಉದ್ಯೋಗಿಯೊಬ್ಬರಿಗೆ ಪರಿಹಾರ ನೀಡುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಎಚ್‌ಐವಿ ದೃಢಪಟ್ಟ ಹಿನ್ನೆಲೆಯಲ್ಲಿ ಅವರಿಗೆ ಬಡ್ತಿ ನಿರಾಕರಿಸಲಾಗಿತ್ತು.

ವಿಚಾರಣೆ ವೇಳೆ ನ್ಯಾಯಮೂರ್ತಿಗಳು “ಒಬ್ಬ ಉದ್ಯೋಗಿ ಹೆಚ್ಚು ಹಿರಿಯ ಸ್ಥಾನಗಳಿಗೆ ಬಡ್ತಿ ಪಡೆಯುವುದರಿಂದ ಆತನ ದೈಹಿಕ ಸಹಿಷ್ಣುತೆಯ ಅಗತ್ಯತೆ ಸಾಮಾನ್ಯವಾಗಿ ಕಡಿಮೆಯಾಗುತ್ತದೆ ಎಂಬುದು ಸರಳ ಜ್ಞಾನ" ಎಂಬುದಾಗಿ ಹೇಳಿದರು.

Also Read
ಅತ್ಯಾಚಾರ ಎಂಬುದು ಕಾನೂನು ಪದ; ವೈದ್ಯಾಧಿಕಾರಿ ಮಾಡುವ ರೋಗ ನಿರ್ಣಯವಲ್ಲ: ಬಾಂಬೆ ಹೈಕೋರ್ಟ್

ಮುಂದುವರೆದು, “ಈ ಅರ್ಥದಲ್ಲಿ ಪ್ರಸುತ ಕಾರ್ಯನಿರ್ವಹಿಸುತ್ತಿರುವ, ಕಾನ್‌ಸ್ಟೇಬಲ್‌ ಹುದ್ದೆಗೆ ದೈಹಿಕವಾಗಿ ಅರ್ಹರಾಗಿರುವ ಮೇಲ್ಮನವಿದಾರ (ಸಿಆರ್‌ಪಿಎಫ್‌ ಅಧಿಕಾರಿ) ದೈಹಿಕವಾಗಿ ಕಡಿಮೆ ಸಾಮರ್ಥ್ಯ ಬೇಡುವ ಹೆಡ್‌ಕಾನ್‌ಸ್ಟೇಬಲ್‌ನ ಕರ್ತವ್ಯಗಳಿಗೆ ಸದಾ ಯೋಗ್ಯನಾಗಿರುತ್ತಾನೆ ಎಂದು ಚೆನ್ನಾಗಿ ಅರ್ಥೈಸಿಕೊಳ್ಳಬಹುದು” ಎಂಬುದಾಗಿ ನ್ಯಾಯಾಲಯ ತರ್ಕಿಸಿತು.

ಎಚ್‌ಐವಿ ಸೋಂಕಿತರ ಬಗ್ಗೆ ತರತಮ ಧೋರಣೆ ಅನುಸರಿಸಬಾರದು ಎಂಬ ಅಂಶಕ್ಕೆ ಸಿಆರ್‌ಪಿಎಫ್ ಸ್ವತಃ ಸಂವೇದನಾಶೀಲವಾಗಿದ್ದು, ಅರಿವು ಹೊಂದಿದೆ ಎಂದು ನ್ಯಾಯಾಲಯ ತಿಳಿಸಿದೆ.

ಈ ನಿಟ್ಟಿನಲ್ಲಿ ಕಷ್ಟಕರ ಮತ್ತು ಏಕಾಂತ ಸ್ಥಳಗಳನ್ನು ಹೊರತುಪಡಿಸಿ ಎಚ್‌ಐವಿ ಸೋಂಕಿತರನ್ನು ಎಲ್ಲಿ ಬೇಕಾದರೂ ನೇಮಕ ಮಾಡಬಹುದು ಎಂದು ನೀಡಲಾದ ಸ್ಥಾಯಿ ಆದೇಶಗಳನ್ನು ಪೀಠ ಪ್ರಸ್ತಾಪಿಸಿತು. ಜೊತೆಗೆ ಎಚ್‌ಐವಿ ಪೀಡಿತರ ನೆರವಿಗೆ ಸಿಆರ್‌ಪಿಎಫ್‌ ಪ್ರಸ್ತಾಪಿಸಿದ ಕ್ರಿಯಾ ಯೋಜನೆಗಳನ್ನು ಕೂಡ ಅದು ಉಲ್ಲೇಖಿಸಿತು.

ಎಚ್‌ಐವಿ ಏಡ್ಸ್‌ನಿಂದ ಬಳಲದೇ ಇರುವವರಿಗೆ ದೊರೆಯುವ ಎಲ್ಲಾ ಬಡ್ತಿ ಸೌಲಭ್ಯಗಳಿಗೆ ಮೇಲ್ಮನವಿದಾರ ಅರ್ಹರು ಎಂದು ಅಂತಿಮವಾಗಿ ಘೋಷಿಸಿದ ನ್ಯಾಯಾಲಯ ಮೇಲ್ಮನವಿಯನ್ನು ಪುರಸ್ಕರಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
X_vs__Union_Of_India___Ors.pdf
Preview

Related Stories

No stories found.
Kannada Bar & Bench
kannada.barandbench.com