

ಅಪ್ರಾಪ್ತ ವಯಸ್ಕರೊಬ್ಬರ ಕೈ ಹಿಡಿದು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಕ್ಕಾಗಿ ಹಣ ನೀಡುವುದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಅಡಿ ಲೈಂಗಿಕ ದೌರ್ಜನ್ಯ ಎಂದು ಬಾಂಬೆ ಹೈಕೋರ್ಟ್ ನಾಗಪುರ ಪೀಠ ಈಚೆಗೆ ತೀರ್ಪು ನೀಡಿದೆ [ಶೇಖ್ ರಫೀಕ್ ಸ್ಕ್ ಗುಲಾಬ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಪೋಕ್ಸೊ ಕಾಯಿದೆಯಡಿಯಲ್ಲಿ ವ್ಯಕ್ತಿಯೊಬ್ಬನಿಗೆ ವಿಧಿಸಲಾಗಿದ್ದ ಮೂರು ವರ್ಷ ಸಜೆ ಎತ್ತಿ ಹಿಡಿದ ನ್ಯಾ. ನಿವೇದಿತಾ ಪಿ ಮೆಹ್ತಾ ಅವರು ಈ ವಿಚಾರ ತಿಳಿಸಿದರು.
ಹಣದ ಆಮಿಷ ಮತ್ತು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಆಹ್ವಾನಿಸಿ ಅಪ್ರಾಪ್ತ ವಯಸ್ಕ ಮಗುವಿನ ಕೈ ಹಿಡಿಯುವುದು ಸ್ಪಷ್ಟಪವಾಗಿ ಲೈಂಗಿಕ ಉದ್ದೇಶವನ್ನು ಹೇಳುತ್ತದೆ ಎಂದು ಡಿಸೆಂಬರ್ 4ರಂದು ನೀಡಿದ ತೀರ್ಪು ಹೇಳಿದೆ.
ಯವತ್ಮಲ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ತನಗೆ ಶಿಕ್ಷೆ ವಿಧಿಸಿದ್ದನ್ನು ವಿರುದ್ಧ ಆರೋಪಿ ಶೇಖ್ ರಫೀಕ್ ಮೇಲ್ಮನವಿ ಸಲ್ಲಿಸಿದ್ದ.
ಘಟನೆ ನಡೆದ ವೇಳೆ ಬಾಲಕಿಗೆ 13 ವರ್ಷ ಪ್ರಾಯವಾಗಿತ್ತು. ನೆರೆಯವನಾದ ಆರೋಪಿ ಪೋಷಕರು ಇಲ್ಲದ ಹೊತ್ತಿನಲ್ಲಿ ಸಂತ್ರಸ್ತೆಯ ಮನೆಗೆ ಬಂದು ₹50 ಕೊಡುತ್ತೇನೆ ʼಆಟ ಆಡಲು ಬಿಡುʼ ಎಂದಿದ್ದ. ವಾಕ್ಯದ ಅರ್ಥ ತಿಳಿಯದ ಬಾಲಕಿ ಮೌನ ವಹಿಸಿದ್ದಳು. ಮರುದಿನವೂ ಆತ ಇಂಥದ್ದೇ ಪ್ರಲೋಭನೆಯ ಮಾತನಾಡಿದ್ದ. ಆತನಿಂದ ತನ್ನ ಕೈ ಬಿಡಿಸಿಕೊಂಡ ಆಕೆ ವಿಷಯವನ್ನು ತನ್ನ ಸೋದರ ಮಾವನಿಗೆ ತಿಳಿಸಿದ್ದಳು. ನಂತರ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಸೆಷನ್ಸ್ ನ್ಯಾಯಾಲಯ ಆತನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೆಟ್ಟಿಲೇರಿದ್ದ.
ಸಂತ್ರಸ್ತೆಯ ಹೇಳಿಕೆ ಸ್ಪಷ್ಟ, ಸ್ಥಿರ ಮತ್ತು ಸಹಜವಾಗಿದೆ ಎಂದ ನ್ಯಾಯಾಲಯ ಕೇವಲ ಕೈ ಹಿಡಿಯುವುದರಿಂದ ಮಾತ್ರ ಅಪರಾಧ ಆಗುವುದಿಲ್ಲ ಎಂಬ ವಾದ ಮಾನ್ಯವಲ್ಲ. ಮಕ್ಕಳನ್ನು ಎಲ್ಲಾ ರೀತಿಯ ಲೈಂಗಿಕ ಕೃತ್ಯಗಳು ಅದರಲ್ಲಿಯೂ ಯತ್ನ ಇಲ್ಲವೇ ಪ್ರಲೋಭನೆಯಂತಹ ಕೃತ್ಯಗಳಿಂದ ರಕ್ಷಿಸಲು ಪೋಕ್ಸೊ ಕಾಯಿದೆಯನ್ನು ರೂಪಿಸಲಾಗಿದೆ ಎಂದಿತು.
ಹೀಗಾಗಿ ಆರೋಪಿಗೆ ವಿಧಿಸಲಾಗಿದ್ದ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ಅದು ಎತ್ತಿ ಹಿಡಿಯಿತು. ಇಂತಹ ಸಂದರ್ಭಗಳಲ್ಲಿ ಆರೋಪಿಯನ್ನು ಮನ್ನಿಸುವುದು ಇಂತಹ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವುದರ ಉದ್ದೇಶ ಮತ್ತು ಗುರಿಗೆ ವ್ಯತಿರಿಕ್ತವಾಗಿರುತ್ತದೆ ಎಂದು ಅದು ಅಭಿಪ್ರಾಯಪಟ್ಟಿತು.