ಜೈಲಿನಲ್ಲಿರುವ ಕೈದಿಗಳಿಗೆ ಮನೆ ಊಟ: ಮಾರ್ಗಸೂಚಿ ರೂಪಿಸಲು ಹೈಕೋರ್ಟ್‌ ನಿರ್ಧಾರ; ನಾಳೆ ವಿಚಾರಣೆ

ಮನೆಯೂಟ ಕೋರಿ ನಟ ದರ್ಶನ್‌ ಅರ್ಜಿ ಸಲ್ಲಿಸಿದ್ದರು. ವಿಶೇಷ ಆತಿಥ್ಯ ಪ್ರಕರಣದಲ್ಲಿ ದರ್ಶನ್‌ ಬಳ್ಳಾರಿಗೆ ಸ್ಥಳಾಂತರಿಸಿದ್ದರಿಂದ ಅವರ ಅರ್ಜಿ ಅಪ್ರಸ್ತುತವಾಗಿದೆ.
Parappana Agrahara Central Prison and Karnataka HC
Parappana Agrahara Central Prison and Karnataka HC
Published on

ಜೈಲಿನಲ್ಲಿರುವ ಕೈದಿಗಳಿಗೆ ಮನೆ ಊಟ ಹಾಗೂ ಇತರ ಅಗತ್ಯ ವಸ್ತುಗಳನ್ನು ಪೂರೈಸುವ ಕುರಿತು ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಕರ್ನಾಟಕ ಹೈಕೋರ್ಟ್ ಸೋಮವಾರ ಹೇಳಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ತಮಗೆ ಮನೆ ಊಟಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ನಟ ದರ್ಶನ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಅರ್ಜಿದಾರರನ್ನು ಬಳ್ಳಾರಿಗೆ ಜೈಲಿಗೆ ಸ್ಥಳಾಂತರ ಮಾಡಿರುವುದರಿಂದ ಈಗ ಆ ಮನವಿ ಅಪ್ರಸ್ತುತವಾಗಿದೆ. ಆದರೆ, ನ್ಯಾಯಾಲಯವೇ ಇದಕ್ಕೆಲ್ಲ ಮಾರ್ಗಸೂಚಿಗಳನ್ನು ರೂಪಿಸಬೇಕು. ಆ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ನೆರವು ನೀಡಲು ತಾವು ಸಿದ್ಧ” ಎಂದು ಹೇಳಿದರು.

ಆಗ ಪೀಠವು “ಹೌದು ಮಾರ್ಗಸೂಚಿ ರೂಪಿಸಲಾಗುವುದು” ಎಂದಿತು. ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ 11ಕ್ಕೆ ಮುಂದೂಡಿದ ಪೀಠ, ಅಂದು ಈ ವಿಚಾರ ಪರಿಗಣಿಸಲಾಗುವುದು ಎಂದು ಹೇಳಿದರು.

ಈ ಮಧ್ಯೆ ಇಂತಹದ್ದೇ ಮನವಿ ಮಾಡಿ ಸಲ್ಲಿಸಲಾಗಿರುವ ಅರ್ಜಿದಾರರ ಪರ ವಕೀಲರೊಬ್ಬರು, ಊಟ ಬಿಟ್ಟು, ಇನ್ನೆಲ್ಲ ನಿಷೇಧಿತ ವಸ್ತುಗಳು ಜೈಲುಗಳಲ್ಲಿ ಸಿಗುತ್ತವೆ. ನಮ್ಮ ಮನೆ ಊಟ ನಾವು ತಿನ್ನಲ್ಲು ಸಮಸ್ಯೆ ಮಾಡಲಾಗುತ್ತದೆ ಎಂದರು. ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪೀಠವು “ನಿಮ್ಮ ಮನೆ ಊಟ ತಿನ್ನಲು ಯಾರೂ ಸಮಸ್ಯೆ ಮಾಡುವುದಿಲ್ಲ, ಇಲ್ಲಿ ಪ್ರಶ್ನೆ ಇರುವುದು ಜೈಲಿನಲ್ಲಿ ಮನೆ ಊಟ ಕೊಡಬೇಕಾ ಅನ್ನುವುದು” ಎಂದು ಹೇಳಿತು.

Also Read
ಜೈಲಿನಲ್ಲಿ ನಟ ದರ್ಶನ್‌ಗೆ ವಿಶೇಷ ಆತಿಥ್ಯ: ಒಂಭತ್ತು ಸಿಬ್ಬಂದಿ ಅಮಾನತುಗೊಳಿಸಿದ ರಾಜ್ಯ ಸರ್ಕಾರ

ವಾದ ಮುಂದುವರಿಸಿದ ವಕೀಲರು, ಮನೆ ಊಟ ಅಷ್ಟೇ ಅಲ್ಲ, ಬೇರೆ ಸಮಸ್ಯೆಗಳೂ ಇವೆ. ಕೈದಿಗಳಿಗೆ ಹೊಟ್ಟೆ ನೋವು, ಕಿಡ್ನಿ ಸಮಸ್ಯೆ, ಹರ್ನಿಯಾ ಮತ್ತಿತರ ಸಮಸ್ಯೆಗಳಿವೆ. ಅವರಿಗೆ ಸೂಕ್ತ ಚಿಕಿತ್ಸೆ ಬೇಕು. 90 ವರ್ಷ ವೃದ್ಧೆಯೊಬ್ಬಳ್ಳಿಗೆ ಸರಿಯಾದ ಊಟ, ವೈದ್ಯಕೀಯ ಉಪಚಾರ ಸಿಗುತ್ತಿಲ್ಲ. ಕೈದಿಗಳಿಗೆ ಜೈಲುಗಳಲ್ಲಿ ಶಿಕ್ಷಣದ ವ್ಯವಸ್ಥೆ ಮಾಡುವ ಅವಶ್ಯಕತೆಯೂ ಇದೆ ಎಂದರು. ಇದಕ್ಕೆ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಆಕ್ಷೇಪಿಸಿದರು. ಅಂತಿಮವಾಗಿ ಪೀಠವು ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com