ಜೈಲಿನಲ್ಲಿ ನಟ ದರ್ಶನ್‌ಗೆ ವಿಶೇಷ ಆತಿಥ್ಯ: ಒಂಭತ್ತು ಸಿಬ್ಬಂದಿ ಅಮಾನತುಗೊಳಿಸಿದ ರಾಜ್ಯ ಸರ್ಕಾರ

“ಜೈಲಿನಲ್ಲಿ ಮೊಬೈಲ್‌, ಗಾಂಜಾ, ಬುಲೆಟ್ಸ್‌ ಮತ್ತು ಗನ್‌ಗಳನ್ನು ಪೂರೈಸಲಾಗುತ್ತಿದೆ. ಸುಪಾರಿ ಸಹ ನೀಡಲಾಗುತ್ತಿದೆ” ಎಂದು ದರ್ಶನ್‌ ಮನೆಯೂಟ ಕೋರಿಕೆ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ವಕೀಲರೊಬ್ಬರು ಪೀಠದ ಗಮನಸೆಳೆದಿದ್ದರು.
Darshan
DarshanTwitter
Published on

ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಆರೋಪಿ ನಟ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಒಂಭತ್ತು ಸಿಬ್ಬಂದಿಯನ್ನು ಸೋಮವಾರ ರಾಜ್ಯ ಸರ್ಕಾರ ಅಮಾನತು ಮಾಡಿದೆ.

ಕೇಂದ್ರ ಕಾರಾಗೃಹದ ಮುಖ್ಯ ಮೇಲ್ವಿಚಾರಕ ಶೇಷಮೂರ್ತಿ, ಮೇಲ್ವಿಚಾರಕ ಮಲ್ಲಿಕಾರ್ಜುನ ಸ್ವಾಮಿ, ಜೈಲರ್‌ ಶರಣಬಸವ ಅಮೀನಗಡ, ಸಹಾಯಕ ಜೈಲರ್‌ ಪುಟ್ಟಸ್ವಾಮಿ, ಜೈಲರ್‌ ಹೆಡ್‌ ವಾರ್ಡರ್‌ಗಳಾದ ವೆಂಕಪ್ಪ, ಸಂಪತ್‌, ವಾರ್ಡರ್‌ ಬಸಪ್ಪ, ಪ್ರಭು ಮತ್ತು ಶ್ರೀಕಾಂತ್‌ ಅಮಾನತುಗೊಂಡವರು.

"ಕರ್ನಾಟಕ ಬಂಧೀಖಾನೆ ಕಾಯಿದೆ ಮತ್ತು ಜೈಲು ಕೈಪಿಡಿ ಉಲ್ಲಂಘಿಸಿರುವ ಆರೋಪಿಗಳ ವಿರುದ್ಧ ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಐಪಿಎಸ್‌ ಅಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ" ಎಂದು ಗೃಹ ಸಚಿವ ಜಿ ಪರಮೇಶ್ವರ್‌ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿರುವುದರಲ್ಲಿ ಅಧಿಕಾರಿಗಳಿಂದ ಲೋಪವಾಗಿದೆ. ಈಗಾಗಲೇ 7 ಮಂದಿಯನ್ನು ಅಮಾನತು ಮಾಡಲಾಗಿದೆ. ಇನ್ನೂ ಕೆಲವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಗೃಹ ಸಚಿವ ಜಿ ಪರಮೇಶ್ವರ್‌ಗೆ ಸೂಚಿಸಿದ್ದು, ಅವರ ವರದಿ ಆಧಾರದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ದರ್ಶನ್‌ರನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವ ಕುರಿತೂ ನಿರ್ಧಾರ ಕೈಗೊಳ್ಳಲಾಗುವುದು” ಎಂದಿದ್ದಾರೆ.

ರೌಡಿ ಶೀಟರ್‌ ನಾಗ ಎಂಬಾತನ ಜೊತೆ ಕಾಫಿ ಹೀರಿತ್ತು, ಸಿಗರೇಟು ಸೇದುತ್ತ ಕುಳಿತಿರುವ ಚಿತ್ರ ಹಾಗೂ ವಿಡಿಯೊ ಕಾಲ್‌ ಮಾಡುತ್ತಿರುವ ದರ್ಶನ್‌ ಚಿತ್ರಗಳು ಎರಡು ದಿನಗಳ ಹಿಂದೆ ವೈರಲ್‌ ಆಗಿದ್ದವು. ಮನೆಯೂಟ ಪಡೆಯಲು ಅನುಮತಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ದರ್ಶನ್‌ ಸಲ್ಲಿಸಿರುವ ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿರುವುದು ಮಹತ್ವ ಪಡೆದಿದೆ.

ದರ್ಶನ್‌ ಮನೆಯೂಟ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಆಗಸ್ಟ್‌ 20ರಂದು ನಡೆದಿತ್ತು. ಅಂದು ಬೆಂಗಳೂರಿನ ಫಾಜಿಲ್‌ ಖಾನ್‌ ಎಂಬ ವಿಚಾರಣಾಧೀನ ಕೈದಿಯು ಮನೆಯೂಟ ಪೂರೈಕೆಗೆ ಅನುಮತಿ ಕೋರಿರುವ ಅರ್ಜಿಯನ್ನು ವಿಚಾರಣೆಗೆ ಉಲ್ಲೇಖಿಸಲಾಗಿತ್ತು.

Also Read
ಪೌಷ್ಠಿಕಾಂಶ ಕೊರತೆ, ವಿಷಾಹಾರ ಪತ್ತೆಯಾಗಿಲ್ಲ; ಕೊಲೆ ಆರೋಪಿ ದರ್ಶನ್‌ಗೆ ಮನೆ ಊಟಕ್ಕೆ ಅನುಮತಿಸಲಾಗದು: ಕಾರಾಗೃಹ ಇಲಾಖೆ

ಫಾಜಿಲ್‌ ಪರ ವಕೀಲರು “ಮೊಬೈಲ್‌, ಗಾಂಜಾ, ಬುಲೆಟ್ಸ್‌ ಮತ್ತು ಗನ್‌ಗಳನ್ನು ಜೈಲಿನಲ್ಲಿ ಪೂರೈಸಲಾಗುತ್ತಿದೆ. ಸುಪಾರಿ ಸಹ ನೀಡಲಾಗುತ್ತಿದೆ” ಎಂದು ಆಕ್ಷೇಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿ ಎಂದು ಘೋಷಿತವಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಗೆಳತಿ ವಿ ಕೆ ಶಶಿಕಲಾ ಮತ್ತು ತಮಿಳರಸಿ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ವಿಶೇಷ ಆತಿಥ್ಯ ನೀಡಲಾಗುತ್ತಿದೆ ಎಂಬ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣದಲ್ಲೂ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಆನಂತರ ಅವರೆಲ್ಲರ ಅಮಾನತು ಆದೇಶವನ್ನು ಹೈಕೋರ್ಟ್‌ ಕಾನೂನುಬಾಹಿರ ಎಂದು ಆದೇಶಿಸಿತ್ತು.

Kannada Bar & Bench
kannada.barandbench.com