“ಮುಚ್ಚಿದ ಲಕೋಟೆಯಲ್ಲಿರುವ ವರದಿ ಏನದು? ಇದು ಪರಮಾಣು ರಹಸ್ಯವೇನಲ್ಲ: ಗುಜರಾತ್‌ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ

“ಆಸ್ಪತ್ರೆಗಳು ಈಗ ಮಾನವ ಸಂಕಟದ ಆಧಾರದ ಮೇಲೆ ದೊಡ್ಡ ಉದ್ಯಮವಾಗಿ ಮಾರ್ಪಟ್ಟಿವೆ. ಜೀವಗಳನ್ನು ಪಣಕ್ಕಿಟ್ಟು ಅವುಗಳನ್ನು ಏಳಿಗೆ ಹೊಂದುವಂತೆ ಮಾಡಲಾಗದು. ಅಂಥ ಆಸ್ಪತ್ರೆಗಳನ್ನು ಮುಚ್ಚಬೇಕು” ಎಂದು ನ್ಯಾಯಾಲಯ ಹೇಳಿದೆ.
Justice DY Chandrachud
Justice DY Chandrachud
Published on

ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತೆಗೆ ಸಂಬಂಧಿಸಿದಂತೆ ತನ್ನ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಫಲವಾದ ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಚಾಟಿ ಬೀಸಿದೆ.

ಜೂನ್‌ 2022ರ ವರೆಗೆ ಆಸ್ಪತ್ರೆಗಳು ನಿಯಮಗಳನ್ನು ಪಾಲಿಸಬೇಕಿಲ್ಲ ಎಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಉಲ್ಲಖಿಸಿರುವ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಎಂ ಆರ್‌ ಶಾ ಅವರು “ನ್ಯಾಯಿಕ ಪರಮಾದೇಶ ಇದ್ದಾಗ, ಈ ರೀತಿಯಾಗಿ ಕಾರ್ಯನಿರ್ವಾಹಕ ಅಧಿಸೂಚನೆಯಿಂದ ಅದನ್ನು ಅತಿಕ್ರಮಿಸಲಾಗದು! ನೀವು ಈಗ ಪೂರ್ಣಾಧಿಕಾರ ನೀಡಿ 2022ರ ವರೆಗೆ ಆಸ್ಪತ್ರೆಗಳು ನಿಯಮಗಳನ್ನು ಪಾಲಿಸುವಂತಿಲ್ಲ ಎಂದು ಹೇಳುತ್ತೀರಿ. ಜನರ ಸಾವಿನ ಸರಣಿ ಮುಂದುವರಿಯಬೇಕೆ ಮತ್ತು ಅವರ ಆಹುತಿ ನಡೆಯಬೇಕೆ…” ಎಂದು ಪೀಠ ಖಾರವಾಗಿ ಪ್ರಶ್ನಿಸಿದೆ.

ಆಸ್ಪತ್ರೆಗಳಲ್ಲಿ ಅಗ್ನಿ ಅವಘಡ ಸುರಕ್ಷತೆ ಬಗ್ಗೆ ತನಿಖಾ ಆಯೋಗವು ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದ್ದಕ್ಕೂ ನ್ಯಾಯಪೀಠ ಆಕ್ಷೇಪಿಸಿತು. “ಆಯೋಗವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ವರದಿ ಏನಿದು? ಇದು ಪರಮಾಣು ರಹಸ್ಯವಲ್ಲ” ಎಂದು ನ್ಯಾ. ಚಂದ್ರಚೂಡ್‌ ಹೇಳಿದರು.

ರಾಜ್‌ಕೋಟ್ ಮತ್ತು ಅಹಮದಾಬಾದ್‌ನಲ್ಲಿ ಎರಡು ಘಟನೆಗಳ ಹಿನ್ನೆಲೆಯಲ್ಲಿ ದೇಶಾದ್ಯಂತ ಕೋವಿಡ್‌ ಆಸ್ಪತ್ರೆಗಳಲ್ಲಿ ಸಂಭವಿಸಿದ ಅಗ್ನಿ ದುರಂತಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ನಡೆಸಿತು.

ಮುಂದಿನ ವರ್ಷದ ಜೂನ್‌ವರೆಗೆ ಅಗ್ನಿ ದುರಂತ ಆಡಿಟ್‌ ಮಾಡದಿರುವ ಸಂಬಂಧ ಅಧಿಸೂಚನೆ ಹೊರಡಿಸಿರುವುದಕ್ಕೂ ನ್ಯಾಯಾಲಯ ಆಕ್ಷೇಪಿಸಿದೆ. “ಗುಜರಾತ್‌ನ 40 ಆಸ್ಪತ್ರೆಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದ್ದು, ಅವು ಹೈಕೋರ್ಟ್‌ ಮೆಟ್ಟಿಲೇರಿವೆ. ಬಳಿಕ, ಅಗ್ನಿ ಸುರಕ್ಷತೆ ಉಲ್ಲಂಘಿಸಿದ ಆಸ್ಪತ್ರೆಗಳ ಕುರಿತು ಕ್ರಮಕೈಗೊಳ್ಳದಂತೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಅಂಥ ಆದೇಶವು ನ್ಯಾಯಾಂಗ ನಿಂದನೆಯಾಗಿದೆ” ಎಂದು ನ್ಯಾ. ಶಾ ಹೇಳಿದರು.

ಪ್ರಕರಣದ ಕುರಿತು ಪರಿಶೀಲಿಸುವಂತೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ನಿರ್ದೇಶಿಸಿರುವ ನ್ಯಾಯಾಲಯವು “ಆಸ್ಪತ್ರೆಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳಬಾರದು ಎಂಬ ಆದೇಶವನ್ನು ಸರ್ಕಾರ ಹೊರಡಿಸುವುದಾದರೂ ಹೇಗೆ?” ಎಂದು ಪ್ರಶ್ನಿಸಿತು.

Also Read
“ಆರೋಗ್ಯ ತುರ್ತು ಪರಿಸ್ಥಿತಿಯೆಡೆಗೆ ಗುಜರಾತ್‌:” ಕೋವಿಡ್‌ ಹೆಚ್ಚಳ - ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಹೈಕೋರ್ಟ್‌

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ನಡೆಸಲಾದ ಅಗ್ನಿ ಸುರಕ್ಷತೆ ಕುರಿತು ಸಮಗ್ರ ಹೇಳಿಕೆಯನ್ನು ಒಳಗೊಂಡ ವಿವರ ಸಲ್ಲಿಸುವಂತೆ ಗುಜರಾತ್‌ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ. “ಆಸ್ಪತ್ರೆಗಳು ಈಗ ಮಾನವ ಸಂಕಟದ ಆಧಾರದ ಮೇಲೆ ದೊಡ್ಡ ಉದ್ಯಮವಾಗಿ ಮಾರ್ಪಟ್ಟಿವೆ. ಜೀವಗಳನ್ನು ಪಣಕ್ಕಿಟ್ಟು ಅವುಗಳನ್ನು ಏಳ್ಗೆ ಹೊಂದುವಂತೆ ಮಾಡಲಾಗದು. ಅಂಥ ಆಸ್ಪತ್ರೆಗಳನ್ನು ಮುಚ್ಚಬೇಕು” ಎಂದು ನ್ಯಾ. ಚಂದ್ರಚೂಡ್‌ ಹೇಳಿದರು.

“ಸರ್ಕಾರವು ಅಂತಹ ಆಸ್ಪತ್ರೆಗಳನ್ನು ರಕ್ಷಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಬಾರದು” ಎಂದು ನ್ಯಾ. ಶಾ ಹೇಳಿದರು. ಎರಡು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ಪ್ರಕರಣವನ್ನು ಮುಂದೂಡಲಾಗಿದೆ.

Kannada Bar & Bench
kannada.barandbench.com