
ಕೋಚಿಂಗ್ ಕೇಂದ್ರಗಳು ಇಲ್ಲವೇ ಶಿಕ್ಷಣ ಸಂಸ್ಥೆಗಳು ಒದಗಿಸುವ ಸ್ವತಂತ್ರ ಹಾಸ್ಟೆಲ್ ವಸತಿ ಸೇವೆಗಳಿಗೆ ಸೇವಾ ತೆರಿಗೆಯಿಂದ ವಿನಾಯಿತಿ ಇದ್ದು ಕೋಚಿಂಗ್ ಸಂಸ್ಥೆಗಳು ಮತ್ತು ಫ್ರಾಂಚೈಸರ್‌ಗಳ ನಡುವಿನ ಆದಾಯ ಹಂಚಿಕೆ ವ್ಯವಸ್ಥೆಗಳು ತೆರಿಗೆ ವಿಧಿಸಬಹುದಾದ ಸೇವೆಗಳಲ್ಲ ಎಂದು ಕಸ್ಟಮ್ಸ್, ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಈಚೆಗೆ ತೀರ್ಪು ನೀಡಿದೆ [ರಾಯ್ಸ್ ಇನ್ಸ್ಟಿಟ್ಯೂಟ್ ಆಫ್ ಕಾಂಪಿಟಿಟಿವ್ ಎಕ್ಸಾಮಿನೇಷನ್ ಪ್ರೈವೇಟ್ ಲಿಮಿಟೆಡ್. ಮತ್ತು ಕೋಲ್ಕತ್ತಾದ ಸೇವಾ ತೆರಿಗೆ ಪ್ರಧಾನ ಆಯುಕ್ತರ ನಡುವಣ ಪ್ರಕರಣ] .
ರಾಯ್ಸ್ ಇನ್ಸ್ಟಿಟ್ಯೂಟ್ ಆಫ್ ಕಾಂಪಿಟಿಟಿವ್ ಎಕ್ಸಾಮಿನೇಷನ್ ಪ್ರೈವೇಟ್ ಲಿಮಿಟೆಡ್ ಒಟ್ಟು ₹1.22 ಕೋಟಿ ಸೇವಾ ತೆರಿಗೆ ಪಾವತಿಸಬೇಕು ಎಂಬ ಆದೇಶವನ್ನು ಈ ಮುಖೇನ ನ್ಯಾಯಮಂಡಳಿ ರದ್ದುಗೊಳಿಸಿತು.
ಕೋಲ್ಕತ್ತಾ ಮೂಲದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆ ರಾಯ್ಸ್ 2011-12 ರಿಂದ 2015-16ರ ಅವಧಿಗೆ ಬಡ್ಡಿ ಮತ್ತು ದಂಡದೊಂದಿಗೆ ಒಟ್ಟು ₹1,25,29,172 ರಷ್ಟು ಸೇವಾ ತೆರಿಗೆ ನೀಡಬೇಕು ಎಂದು ತೆರಿಗೆ ಇಲಾಖೆ ಆದೇಶಿಸಿತ್ತು. ತರಬೇತಿ ಸಂಸ್ಥೆಯ ಪರವಾಗಿ ಚಾರ್ಟರ್ಡ್ ಅಕೌಂಟೆಂಟ್ ರಾಜರ್ಷಿ ದಾಸ್‌ಗುಪ್ತ ವಾದಿಸಿದ್ದರೆ, ತೆರಿಗೆ ಇಲಾಖೆಯನ್ನು ಆರ್‌ಕೆ ಅಗರ್‌ವಾಲ್ ಪ್ರತಿನಿಧಿಸಿದ್ದರು.
ವಸತಿ ರಹಿತ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ವಿಧಿಸಲಾಗುವ ಹಾಸ್ಟೆಲ್ ಶುಲ್ಕಕ್ಕೆ ಸಂಬಂಧಿಸಿದ ವಿಸ್ತೃತ ವಿವಾದವಿತ್ತು. ಸನಿವಾಸ ಕೋರ್ಸ್ ವಿದ್ಯಾರ್ಥಿಗಳು ಸೇವಾ ತೆರಿಗೆಯೊಂದಿಗೆ ಅಂತರ್ಗತ ಶುಲ್ಕವನ್ನು ಪಾವತಿಸಿದರೆ, ವಸತಿ ರಹಿತ ವಿದ್ಯಾರ್ಥಿಗಳಿಗೆ ಐಚ್ಛಿಕ ವಸತಿಗಾಗಿ ಪ್ರತ್ಯೇಕವಾಗಿ ಶುಲ್ಕ ವಿಧಿಸಲಾಗುತ್ತಿತ್ತು.
" ವಸತಿ ರಹಿತವಾಗಿ ಕೋರ್ಸ್‌ಗಳಿಗೆ ಸಂಗ್ರಹಿಸಲಾಗುವ ಸ್ವತಂತ್ರ ಹಾಸ್ಟೆಲ್ ಶುಲ್ಕಗಳಿಗೂ ವಾಣಿಜ್ಯ ತರಬೇತಿ ಮತ್ತು ಕೋಚಿಂಗ್ ಸೇವೆಗಳಿಗೂ ಯಾವುದೇ ಸಂಬಂಧ ಇಲ್ಲ " ಎಂದು ನ್ಯಾಯಾಂಗ ಸದಸ್ಯ ಅಶೋಕ್ ಜಿಂದಾಲ್ ಮತ್ತು ತಾಂತ್ರಿಕ ಸದಸ್ಯ ಕೆ. ಅನ್ಪಝಕನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ತೀರ್ಪು ನೀಡಿತು.