ಕುಟುಂಬವನ್ನು ಪೋಷಿಸುವ ಗೃಹಿಣಿಯ ಆದಾಯವನ್ನು ಸಾಮಾನ್ಯ ವ್ಯಕ್ತಿಯ ಆದಾಯಕ್ಕೆ ಹೋಲಿಸಲಾಗದು: ಕಲ್ಕತ್ತಾ ಹೈಕೋರ್ಟ್

ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗೃಹಿಣಿ ಪ್ರತಿಮಾ ಸಾಹೂ ಅವರಿಗೆ ಸಲ್ಲಬೇಕಿದ್ದ ಪರಿಹಾರ ಮೊತ್ತವನ್ನು ನ್ಯಾ. ಅಜಯ್ ಕುಮಾರ್ ಗುಪ್ತಾ ಅವರಿದ್ದ ಏಕಸದಸ್ಯ ಪೀಠ ಹೆಚ್ಚಳಮಾಡಿತು.
Calcutta High Court
Calcutta High Court

ಗೃಹಿಣಿ ಮನೆಗೆಲಸ ಮಾಡುವುದಲ್ಲದೆ ಕುಟುಂಬವನ್ನೂ ಸಲಹುವುದರಿಂದ ಆಕೆಯ ಗಳಿಕೆಯನ್ನು ಸಾಮಾನ್ಯ ವ್ಯಕ್ತಿಯ ಆದಾಯದ ರೀತಿ ಲೆಕ್ಕಹಾಕಲು ಸಾಧ್ಯವಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ [ಪ್ರತಿಮಾ ಸಾಹೂ ಮತ್ತು ಚೋಳಮಂಡಲಂ ಎಂಎಸ್ ಜನರಲ್ ಇನ್ಶುರೆನ್ಸ್ ಕಂಪೆನಿ ಲಿಮಿಟೆಡ್ ನಡುವಣ ಪ್ರಕರಣ].

ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2013ರಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗೃಹಿಣಿ ಪ್ರತಿಮಾ ಸಾಹೂ ಅವರಿಗೆ ಸಲ್ಲಬೇಕಿದ್ದ ಪರಿಹಾರ ಮೊತ್ತವನ್ನು ನ್ಯಾ. ಅಜಯ್ ಕುಮಾರ್ ಗುಪ್ತಾ ಅವರಿದ್ದ ಏಕಸದಸ್ಯ ಪೀಠ ಹೆಚ್ಚಿಸಿತು.

ತಾವು ₹ 4,000 ಆದಾಯ ಗಳಿಸುತ್ತಿದ್ದುದಾಗಿ ಮೇಲ್ಮನವಿದಾರರಾದ ಪ್ರತಿಮಾ ಸಾಹೂ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಗೆ (ಎಂಎಸಿಟಿ) ತಿಳಿಸಿದ್ದರು. ಆದರೆ ಆಕೆಯ ಆದಾಯ ₹ 3,000 ಎಂದು ನ್ಯಾಯಮಂಡಳಿ ತೀರ್ಮಾನಿಸಿತ್ತು.

ಇದನ್ನು ಗಮನಿಸಿದ ಹೈಕೋರ್ಟ್ ಗೃಹಿಣಿ ತನ್ನ ಆದಾಯ ಸಾಬೀತುಪಡಿಸಬೇಕು ಎಂದು ನಿರೀಕ್ಷಿಸಬಾರದು ಎಂದಿದೆ.

“ಒಬ್ಬ ಗೃಹಿಣಿ ತನ್ನ ನೈಜ ಆದಾಯವನ್ನು ದಾಖಲೆ ಅಥವಾ ಸಂಬಳದ ಪ್ರಮಾಣಪತ್ರ ನೀಡುವ ಮೂಲಕ ಸಾಬೀತುಪಡಿಸಬೇಕು ಎಂದು ನಿರೀಕ್ಷಿಸಲಾಗದು. ಒಬ್ಬ ಗೃಹಿಣಿಯ ಕೆಲಸ ಸಾಮಾನ್ಯ ಕೆಲಸ ಅಥವಾ ಆದಾಯ ಗಳಿಸುವ ವ್ಯಕ್ತಿಯ ಸೇವೆಗಿಂತ ಹೆಚ್ಚಿನ ಕೊಡುಗೆ ನೀಡುತ್ತದೆ.  ಆಕೆ ತನ್ನ ಪತಿ, ಮಕ್ಕಳು ಪೋಷಕರು ಮತ್ತಿತರ ಕುಟುಂಬ ಸದಸ್ಯರನ್ನು ಪಾಲನೆ- ಪೋಷಣೆ, ಶುಚಿಗೊಳಿಸುವುದು, ಅಡುಗೆ ಕೆಲಸ ಮತ್ತಿತರ ಕಾರ್ಯಗಳಿಂದ ಇಡೀ ದಿನ ಸಲಹುತ್ತಾಳೆ. ಆಕೆಯ ಆದಾಯವನ್ನು ಸಾಮಾನ್ಯ ವ್ಯಕ್ತಿಯ ಗಳಿಕೆಯೊಂದಿಗೆ ಹೋಲಿಸಲಾಗದು. ಆಕೆಯ ಆದಾಯವನ್ನು ಮಾಸಿಕ ವೇತನ ಅಥವಾ ಸಂಬಳದ ರೂಪದಲ್ಲಿ ಲೆಕ್ಕಹಾಕಲಾಗದು”ಎಂದು ಪೀಠ ಹೇಳಿದೆ.

ಪ್ರತಿಮಾ ಅವರು ಫೆಬ್ರವರಿ 20, 2020 ರಂದು ಪುರ್ಬಾ ಮೇದಿನಿಪುರದ ತಮ್ಲುಕ್ ಎಂಎಸಿಟಿ ನೀಡಿದ್ದ ತೀರ್ಪನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ತೀರ್ಪಿನಂತೆ ಮೇಲ್ಮನವಿದಾರರಿಗೆ ₹ 2,09,746 ಪರಿಹಾರ ವಿಮಾ ಕಂಪನಿಗೆ ಎಂಎಸಿಟಿ ಆದೇಶಿಸಿತ್ತು.

ಅರ್ಜಿದಾರರು ಅನುಭವಿಸಿದ ಮಾನಸಿಕ ನೋವು ಮತ್ತು ಸಂಕಟಕ್ಕಾಗಿ ಎಂಎಸಿಟಿ ಕೇವಲ ₹ 5,000 ಪರಿಹಾರ ನೀಡಿದ್ದು ಇದು ತುಂಬಾ ಕಡಿಮೆ ಮೊತ್ತ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಗೃಹಿಣಿ ಸಾಕಷ್ಟು ನೋವು ಸಂಕಟ ಅನುಭವಿಸಿದ್ದು ಹಲವು ಆಸ್ಪತ್ರೆಗಳಲ್ಲಿ ಆಕೆಗೆ ಗಂಭೀರ ಚಿಕಿತ್ಸೆ ನೀಡಲಾಗಿದೆ. ಅಲ್ಲದೆ ನೋವು ಮತ್ತು ಸಂಕಟವನ್ನು ಅಳೆಯುವ ಸಿದ್ಧ ಮಾಪಕ ಇಲ್ಲ. ಹೀಗಾಗಿ ನಿರ್ದಿಷ್ಟ ವರ್ಗದಡಿ ಆಕೆಗೆ ₹ 50,000 ಪಾವತಿಸಬೇಕು. ಎಂಎಸಿಟಿ ಆದೇಶಿಸಿದ್ದ ಮೊತ್ತದ ಹೊರತಾಗಿ ₹ 2,14,000 ಹೆಚ್ಚುವರಿ ಪರಿಹಾರ ಮೊತ್ತವನ್ನು ಮೇಲ್ಮನವಿದಾರರಿಗೆ ನೀಡುವಂತೆ ಪೀಠ ವಿಮಾ ಕಂಪೆನಿಗೆ ಆದೇಶಿಸಿದೆ.

Related Stories

No stories found.
Kannada Bar & Bench
kannada.barandbench.com