

ಪತಂಜಲಿ ಆಯುರ್ವೇದ ತನ್ನ ಹೊಸ ಜಾಹೀರಾತಿನಲ್ಲಿ ಉಳಿದೆಲ್ಲಾ ಚ್ಯವನ್‌ಪ್ರಾಶ್ ತಯಾರಕರು ವಂಚಕರು ಎಂದು ಕರೆದಿದ್ದನ್ನು ಪ್ರಶ್ನಿಸಿ ಮತ್ತೊಂದು ಚ್ಯವನ್‌ಪ್ರಾಶ್ ತಯಾರಿಕಾ ಕಂಪೆನಿ ಡಾಬರ್ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ದೆಹಲಿ ಹೈಕೋರ್ಟ್ ಗುರುವಾರ ಕಾಯ್ದಿರಿಸಿದೆ. [ಡಾಬರ್ ಲಿಮಿಟೆಡ್ ಮತ್ತು ಪತಂಜಲಿ ಆಯುರ್ವೇದ ನಡುವಣ ಪ್ರಕರಣ].
ಉಳಿದ ಚ್ಯವನ್‌ಪ್ರಾಶ್ ತಯಾರಕರನ್ನು ಮೋಸಗಾರರು ಎಂದು ಪತಂಜಲಿ ಕರೆಯಬಹುದೇ ಎಂಬುದಾಗಿ ಪತಂಜಲಿ ಕಂಪೆನಿಯನ್ನು ನ್ಯಾಯಮೂರ್ತಿ ತೇಜಸ್ ಕರಿಯಾ ಪ್ರಶ್ನಿಸಿದರು. ಪತಂಜಲಿ ತಾನು ಅತ್ಯುತ್ತಮ ಎಂದು ಹೇಳಿಕೊಳ್ಳಬಹುದೇ ವಿನಾ ಉಳಿದವರು ಮೋಸಗಾರರು ಎನ್ನುವಂತಿಲ್ಲ ಎಂದರು.
ಕೀಳರಿಮೆಯ ಪದ ಬಳಸಿದರೆ ಸಮಸ್ಯೆ ಏನು? ನಾನೇ ಸತ್ಯಸಂಧ ಉಳಿದವರೆಲ್ಲರೂ ವಂಚಕರು ಎಂದು ಪತಂಜಲಿ ಹೇಳುತ್ತಿದೆ. ಬೇರೆಯವರನ್ನು ಮೋಸಗಾರರು ಎಂದು ಪತಂಜಲಿ ಕರೆಯಲು ಸಾಧ್ಯವೇ? ಅವರನ್ನು ಕೀಳು ಎಂದು ಕರೆಯಬಹುದು. ಆದರೆ ವಂಚಕರು ಎನ್ನುವಂತಿಲ್ಲ. ವಂಚಕ ಎಂಬ ಪದ ಹೊರತುಪಡಿಸಿ ನಿಘಂಟಿನಲ್ಲಿ ಇನ್ನಾವುದಾದರೂ ಪದ ಇದೆಯೇ. ವಂಚಕ ಎಂಬುದು ನಕಾರಾತ್ಮಕ ಎಂದು ನ್ಯಾಯಾಲಯ ಹೇಳಿತು.
"ಧೋಕಾ ಎಂಬುದು ನಕಾರಾತ್ಮಕ ಪದ, ಅವಹೇಳನಕಾರಿ. ಆ ಉತ್ಪನ್ನಗಳು ವಂಚನೆಯಿಂದ ಕೂಡಿವೆ ಮತ್ತುಜನರು ವಂಚನೆಯನ್ನೇ ಸೇವಿಸುತ್ತಿದ್ದಾರೆ ಎನ್ನುತ್ತಿದ್ದೀರಿ" ಎಂದು ಪೀಠ ಟೀಕಿಸಿತು.
ಪತಂಜಲಿಯ ಹೊಸ “ಸ್ಪೆಷಲ್ ಚ್ಯವನ್‌ಪ್ರಾಶ್”ಜಾಹೀರಾತಿನಲ್ಲಿ ಉಳಿದೆಲ್ಲಾ ಚ್ಯವನ್‌ಪ್ರಾಶ್ ಬ್ಯಾಂಡ್‌ಗಳನ್ನು ವಂಚಕರು ಎಂದು ಕರೆಯುತ್ತಿದ್ದಾರೆ ಎಂದು ದೂರಿ ಡಾಬರ್ ಕಂಪೆನಿ ಪತಂಕಲಿ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿತ್ತು.
ನಮ್ಮದು 1949ರಿಂದ ಮಾರುಕಟ್ಟೆಯಲ್ಲಿ ಮುಂಚೂಣಿ ಬ್ರ್ಯಾಂಡ್. ಹಾಗಿದ್ದರೂ ಪತಂಜಲಿ ಎಲ್ಲರನ್ನೂ ವಂಚಕರೆಂದು ಬಿಂಬಿಸಲು ಹೊರಟಿದೆ. ಇದೊಂದು ಸಾಮಾನ್ಯೀಕೃತ ಅವಹೇಳನವಾಗಿದ್ದು ಇದರಿಂದ ಗ್ರಾಹಕರಲ್ಲಿ ಇಡೀ ಆಯುರ್ವೇದ ಚ್ಯವನ್‌ಪ್ರಾಶ್ ಮೇಲೆ ಅವಿಶ್ವಾಸ ಮೂಡುತ್ತದೆ ಎಂದು ಅರ್ಜಿಯಲ್ಲಿ ತಿಳಿಸಿತ್ತು.
ತನ್ನ ಚ್ಯವನ್ ಪ್ರಾಶ್ ಉತ್ಪನ್ನದ ಮೇಲೆ ಪತಂಜಲಿ 51 ಔಷಧೀಯ ಸಸ್ಯಗಳನ್ನು ಬಳಕೆ ಮಾಡಿರುವುದಾಗಿ ಹೇಳಿಕೊಂಡಿದ್ದು ಇದಕ್ಕೆ ಪ್ರಮಾಣಿತ ಸಾಕ್ಷ್ಯ ಇಲ್ಲ. ವಿಶೇಷ ಎನ್ನುವ ಪದವನ್ನು ಔಷಧದ ಮೇಲೆ ಬಳಸುವುದು ಔಷಧ ನಿಯಮಾವಳಿ ನಿಯಮ 157(1-B)ಕ್ಕೆ ವ್ಯತಿರಿಕ್ತ ಎಂದು ಡಾಬರ್ ಪರವಾಗಿ ಹಿರಿಯ ವಕೀಲ ಸಂದೀಪ್ ಸೇಥಿ ವಾದ ಮಂಡಿಸಿದರು.
ಆದರೆ ಈ ವಾದವನ್ನು ಪತಂಜಲಿ ಒಪ್ಪಲಿಲ್ಲ. ಇದೊಂದು ಸಾಮಾನ್ಯ ಮಾರ್ಕೆಟಿಂಗ್ ಭಾಷೆ. ತಾನು ಯಾವುದೇ ಕಂಪೆನಿಯ ನಿರ್ದಿಷ್ಟ ಹೆಸರನ್ನು ನಮೂದಿಸಿಲ್ಲ. ನಮ್ಮ ಉತ್ಪನ್ನ ಉತ್ಕೃಷ್ಟವಾದುದು ಎಂಬ ಅತಿಶಯೋಕ್ತಿ ಬಳಸುವುದಕ್ಕೆ ಕಾನೂನಿನಲ್ಲಿ ಸಮ್ಮತಿ ಇದೆ. ಡಾಬರ್ ಅತಿಸೂಕ್ಷ್ಮತೆಯಿಂದ ವರ್ತಿಸುತ್ತಿದೆ. ಈ ಹಿಂದೆಯೂ ಅದು ಪತಂಜಲಿ ವಿರುದ್ಧ ಪ್ರಕರಣ ದಾಖಲಿಸಿತ್ತು ಎಂದು ಪತಂಜಲಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ರಾಜೀವ್ ನಾಯರ್ ಹೇಳಿದರು. ವಾದ ಆಲಿಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತು.