
ಪತಂಜಲಿಯ ಚ್ಯವನ್‌ಪ್ರಾಶ್ ಜಾಹೀರಾತಿನಲ್ಲಿ ʼ40 ಗಿಡಮೂಲಿಕೆಗಳಿಂದ ತಯಾರಿಸಿದ ಸಾಮಾನ್ಯ ಚ್ಯವನ್ಪ್ರಾಶ್ ಏಕೆ ಒಪ್ಪಿಕೊಳ್ಳಬೇಕು?" ಎಂಬ ಘೋಷವಾಕ್ಯದಲ್ಲಿ ನಂತರದ ಅರ್ಧಭಾಗವನ್ನಷ್ಟೇ ಬಳಸಲು ದೆಹಲಿ ಹೈಕೋರ್ಟ್ ಮಂಗಳವಾರ ಅನುಮತಿಸಿದೆ [ಪತಂಜಲಿ ಆಯುರ್ವೇದ ಮತ್ತು ಡಾಬರ್ ಲಿಮಿಟೆಡ್ ನಡುವಣ ಪ್ರಕರಣ].
ಪತಂಜಲಿ ತನ್ನ ಜಾಹೀರಾತುಗಳಲ್ಲಿ "ಸಾಮಾನ್ಯ ಚ್ಯವನ್ಪ್ರಾಶ್ ಏಕೆ ಒಪ್ಪಬೇಕು" ಎಂದು ಬಳಸಬಹುದಾದರೂ ಡಾಬರ್ ಉತ್ಪನ್ನವನ್ನು ಸೂಚಿಸುವ ʼ40 ಗಿಡಮೂಲಿಕೆಗಳೊಂದಿಗೆʼ ಎಂಬ ಪದ ಬಳಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಹರಿಶಂಕರ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರಿದ್ದ ಪೀಠ ಮಧ್ಯಂತರ ಪ್ರತಿಬಂಧಕಾಜ್ಞೆಯಲ್ಲಿ ತಿಳಿಸಿದೆ.
ಜಾಹೀರಾತುಗಳಲ್ಲಿ ಸಾಮಾನ್ಯವಾಗಿ ತಮ್ಮ ಉತ್ಪನ್ನವನ್ನು ಶ್ಲಾಘಿಸುವ ಅತಿರಂಜಕತೆ ಇದೆಯಾದರೂ ʼ40 ಗಿಡಮೂಲಿಕೆಗಳೊಂದಿಗೆʼ ಎಂದು ಪತಂಜಲಿ ನಿರ್ದಿಷ್ಟವಾಗಿ ಉಲ್ಲೇಖಿಸಿರುವುದು ಡಾಬರ್ ಉತ್ಪನ್ನದತ್ತ ನೇರವಾಗಿ ಬೆರಳು ಮಾಡುವುದರಿಂದ ಅದನ್ನು ಅನುಮತಿಸಲಾಗದು ಎಂದಿತು.
ʼ40 ಗಿಡಮೂಲಿಕೆಗಳೊಂದಿಗೆʼ ಎಂಬ ಹೇಳಿಕೆ ತೆಗೆದು ಹಾಕಿದಾಗ ʼಸಾಮಾನ್ಯ ಚ್ಯವನ್ಪ್ರಾಶ್ʼ ಏಕೆ ಒಪ್ಪಬೇಕುʼ ಎಂಬ ಹೇಳಿಕೆ ಮಾತ್ರ ಉಳಿಯಲಿದ್ದು ಆಗ ಅದು ಹೆಚ್ಚೆಂದರೆ ಶ್ಲಾಘನೆಯಾಗಿ ಉಳಿಯುತ್ತದೆ ಎಂದು ನ್ಯಾಯಾಲಯ ವಿವರಿಸಿತು.
ತಾನು ಉತ್ತಮ ಇತರರು ಅಷ್ಟು ಉತ್ತಮರಲ್ಲ ಎನ್ನವುದು ಅನುಮತಿಸಬಹುದಾದ ಜಾಹೀರಾತು ಹೇಳಿಕೆಯಾಗಿದೆ. ಆದರೆ ತನ್ನ ಪ್ರತಿಸ್ಪರ್ಧಿಯ ನಿರ್ದಿಷ್ಟ ಉತ್ಪನ್ನವನ್ನು ನೇರವಾಗಿ ಹೀಯಾಳಿಸುವಂತಿಲ್ಲ ಎಂದು ಪೀಠ ವಿವರಿಸಿತು.
ಪತಂಜಲಿಯ ಕೆಲವು ಜಾಹೀರಾತುಗಳು ಅತಿರಂಜನೆಯ ಶ್ಲಾಘನೆಯ ಶೈಲಿಯನ್ನು ಮೀರಿದ್ದು, ಡಾಬರ್ ಉತ್ಪನ್ನವನ್ನು ಹೀನಾಯವಾಗಿ ತೋರಿಸುತ್ತವೆ ಎಂದು ನ್ಯಾಯಮೂರ್ತಿ ಮಿನಿ ಪುಷ್ಕರ್ಣಾ ಅವರಿದ್ದ ಏಕಸದಸ್ಯ ಪೀಠ ಕಳೆದ ಜುಲೈನಲ್ಲಿ ತೀರ್ಪು ನೀಡಿದ್ದರು. ಅಂತೆಯೇ ಅವರು ʼ40 ಗಿಡಮೂಲಿಕೆಗಳಿಂದ ತಯಾರಿಸಿದ ಸಾಮಾನ್ಯ ಚ್ಯವನ್ಪ್ರಾಶ್ ಏಕೆ ಒಪ್ಪಿಕೊಳ್ಳಬೇಕು?" ಎಂಬ ಸಾಲು ಮತ್ತು ಟಿವಿ ಜಾಹೀರಾತಿನ ಕೆಲವು ದೃಶ್ಯಗಳನ್ನು ತೆಗೆದುಹಾಕುವಂತೆ ಸೂಚಿಸಿದ್ದರು. ಇದನ್ನು ಪ್ರಶ್ನಿಸಿ ಪತಂಜಲಿಯು ವಾಣಿಜ್ಯ ಮೇಲ್ಮನವಿ ವಿಭಾಗೀಯ ಪೀಠದ ಮೊರೆ ಹೋಗಿತ್ತು.
ಈ ಹಿಂದೆ ವಿಚಾರಣೆಯ ವೇಳೆ ವಿಭಾಗೀಯ ಪೀಠವು ಏಕಸದಸ್ಯ ಪೀಠ ಸಂಪೂರ್ಣ ಜಾಹೀರಾತನ್ನು ನಿಷೇಧಿಸದೆ ಕೆಲ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿಕೊಳ್ಳುವಂತೆ ಹೇಳಿತ್ತು. ಮೇಲ್ಮನವಿ ಮುಂದುವರೆಸಿದರೆ ದಂಡ ವಿಧಿಸಬೇಕಾದೀತು ಎಂದಿತ್ತು. ಆದಾಗ್ಯೂ ಇಂದಿನ ವಿಚಾರಣೆ ವೇಳೆ ಏಕಸದಸ್ಯ ಪೀಠದ ಆದೇಶ ಮಾರ್ಪಡಿಸಿರುವ ವಿಭಾಗೀಯ ಪೀಠವು ಪತಂಜಲಿಗೆ ಭಾಗಶಃ ಪರಿಹಾರ ನೀಡಿದೆ.