ಲೋಕಸಭಾ ಚುನಾವಣೆ: ಇಲ್ಲಿದೆ ವಿವಿಧ ರಾಜಕೀಯ ಪ್ರಕರಣಗಳನ್ನು ದೇಶದ ನ್ಯಾಯಾಲಯಗಳು ಶುಕ್ರವಾರ ನಿರ್ವಹಿಸಿದ ಬಗೆ

ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಅವರಿಂದ ಹಿಡಿದು ಬಿಜೆಪಿ ಸಂಸದ ತೇಜಸ್ವಿ ಸೂರ್ಯವರೆಗೆ ಅನೇಕ ಪ್ರಮುಖ ರಾಜಕಾರಣಿಗಳು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಅರವಿಂದ್ ಕೇಜ್ರಿವಾಲ್, ಕವಿತಾ, ಕಾಂಗ್ರೆಸ್  ಲಾಂಛನ, ಪೊನ್ಮುಡಿ, ರವಿ, ಶೋಭಾ ಹಾಗೂ ತೇಜಸ್ವಿ ಸೂರ್ಯ
ಅರವಿಂದ್ ಕೇಜ್ರಿವಾಲ್, ಕವಿತಾ, ಕಾಂಗ್ರೆಸ್ ಲಾಂಛನ, ಪೊನ್ಮುಡಿ, ರವಿ, ಶೋಭಾ ಹಾಗೂ ತೇಜಸ್ವಿ ಸೂರ್ಯ

ನಿನ್ನೆ ಅಂದರೆ ಮಾರ್ಚ್‌ 22 ದೇಶದ ವಿವಿಧ ನ್ಯಾಯಾಲಯಗಳೆದುರು ಕಾನೂನು ಹೋರಾಟ ನಡೆಸುತ್ತಿರುವ ರಾಜಕಾರಣಿಗಳು ಮತ್ತು ಪಕ್ಷಗಳಿಗೆ ಪ್ರಮುಖ ದಿನವಾಗಿತ್ತು ಎನ್ನಬಹುದು. ಅಷ್ಟು ಪ್ರಮಾಣದಲ್ಲಿ ರಾಜಕಾರಣಿಗಳು ನ್ಯಾಯಾಲಯದೆದುರು ವಿಚಾರಣೆಗೆ ಹಾಜರಾದರು.

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಂದ ಹಿಡಿದು ಬಿಜೆಪಿ ಸಂಸದ ತೇಜಸ್ವಿ ಸೂರ್ಯರವರೆಗೆ ಹಿರಿಕಿರಿಯ ರಾಜಕಾರಣಿಗಳು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕೆಲವರು ನ್ಯಾಯಾಲಯದಿಂದ ಪರಿಹಾರ ಪಡೆಯುವಲ್ಲಿ ಯಶಸ್ವಿಯಾದರೆ, ಉಳಿದವರಿಗೆ ನಿರಾಶೆ ಕಾದಿತ್ತು.

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಇ ಡಿ ವಶಕ್ಕೆ ಒಪ್ಪಿಸಿದ್ದು ದಿನದ ಪ್ರಮುಖ ಬೆಳವಣಿಗೆಯಾಗಿತ್ತು. ಆ ಮೂಲಕ ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಕಂಡುಕೇಳರಿಯದ ರೀತಿಯಲ್ಲಿ ಹಾಲಿ ಮುಖ್ಯಮಂತ್ರಿಯೊಬ್ಬರು ಜೈಲಿನಿಂದ ಆಡಳಿತ ನಡೆಸುವ ಪರಿಸ್ಥಿತಿ ಉದ್ಭವಸಿದೆ.

ರಾಜಕಾರಣಿಗಳು ಮತ್ತು ಪಕ್ಷಗಳ ವಿರುದ್ಧ ನಿನ್ನೆ ನ್ಯಾಯಾಲಯಗಳಲ್ಲಿ ನಡೆದ ಆರು ಪ್ರಮುಖ ಪ್ರಕರಣಗಳ ವಿವರ ಇಲ್ಲಿದೆ:

ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್, ರವೂಜ್‌ ಅವೆನ್ಯೂ ನ್ಯಾಯಾಲಯ ಹಾಗೂ ಕರ್ನಾಟಕ ಹೈಕೋರ್ಟ್
ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್, ರವೂಜ್‌ ಅವೆನ್ಯೂ ನ್ಯಾಯಾಲಯ ಹಾಗೂ ಕರ್ನಾಟಕ ಹೈಕೋರ್ಟ್

ರೌಸ್‌ ಅವೆನ್ಯೂ ನ್ಯಾಯಾಲಯ: ಎಎಪಿಯ ಕೇಜ್ರಿವಾಲ್‌ಗೆ ಇಲ್ಲ ಪರಿಹಾರ

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಮಾರ್ಚ್‌ 28ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಶುಕ್ರವಾರ ದೆಹಲಿಯ ವಿಶೇಷ ನ್ಯಾಯಾಲಯ ನೀಡಿದೆ.

ಕೇಜ್ರಿವಾಲ್ ಅವರನ್ನು ವಶಕ್ಕೆ ಒಪ್ಪಿಸುವಂತೆ ಜಾರಿ ನಿರ್ದೇಶನಾಲಯ ಮಾಡಿದ ಮನವಿಯನ್ನು ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಭಾಗಶಃ ಒಪ್ಪಿದರು. ಹತ್ತು ದಿನಗಳ ಬದಲಿಗೆ ಆರು ದಿನಗಳ ಕಾಲ ವಶಕ್ಕೆ ನೀಡಿ ಆದೇಶಿಸಿತು.

ಗುರುವಾರ ರಾತ್ರಿ ತನ್ನ ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಂತಿಮವಾಗಿ ಮನವಿ ಹಿಂಪಡೆಯಲು ನಿರ್ಧರಿಸಿದ್ದರು.

ಸುಪ್ರೀಂ ಕೋರ್ಟ್: ಖಾಲಿ ಕೈಯಲ್ಲಿ ಮರಳಿದ ಬಿಆರ್‌ಎಸ್‌ ಪಕ್ಷದ ಕೆ ಕವಿತಾ

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇತ್ತೀಚೆಗೆ ಜಾರಿ ನಿರ್ದೇಶನಾಲಯ (ಇ ಡಿ) ಬಂಧಿಸಿರುವ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ನಾಯಕಿ ಕೆ ಕವಿತಾ ಅವರಿಗೆ ತುರ್ತು ಪರಿಹಾರ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು.

ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾಎಂ ಎಂ ಸುಂದರೇಶ್ ಹಾಗೂ ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ತಿಳಿಸಿತು.

ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್, ಸಂಜೀವ್ ಖನ್ನಾ ಹಾಗೂ ಬೇಲಾ ತ್ರಿವೇದಿ
ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್, ಸಂಜೀವ್ ಖನ್ನಾ ಹಾಗೂ ಬೇಲಾ ತ್ರಿವೇದಿ

ದೆಹಲಿ ಹೈಕೋರ್ಟ್‌: ಕಾಂಗ್ರೆಸ್‌ ಮೇಲೆ ಐ ಟಿ ಇಲಾಖೆ ತೂಗುಗತ್ತಿ

ಆದಾಯ ತೆರಿಗೆ ಕಾಯಿದೆಯಡಿ 2014-15 ರಿಂದ 2020-21ರವರೆಗೆ ಕಾಂಗ್ರೆಸ್‌ನ ಆದಾಯವನ್ನು ಮತ್ತಷ್ಟು ಪರಿಶೀಲನೆ ನಡೆಸುವುದಕ್ಕೆ ಆದಾಯ ತೆರಿಗೆ ಇಲಾಖೆಯ ಬಳಿ ಯಥೇಚ್ಛ ಹಾಗೂ ದೃಢವಾದ ಪುರಾವೆಗಳಿವೆ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ನುಡಿಯಿತು. ಆ ಮೂಲಕ ಕಾಂಗ್ರೆಸ್‌ ಸಲ್ಲಿಸಿದ್ದ ಮೂರು ಅರ್ಜಿಗಳನ್ನು ಅದು ತಿರಸ್ಕರಿಸಿತು.

2014-15, 2015-16 ಮತ್ತು 2016-17ನೇ ಸಾಲಿನಲ್ಲಿ ಐಟಿ ಇಲಾಖೆ ತನ್ನ ವಿರುದ್ಧ ಆರಂಭಿಸಿದ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಶ್ನಿಸಿ ಕಾಂಗ್ರೆಸ್‌ ಅರ್ಜಿ ಸಲ್ಲಿಸಿತ್ತು.

ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೀಂದ್ರ ಕುಮಾರ್ ಕೌರವ್
ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೀಂದ್ರ ಕುಮಾರ್ ಕೌರವ್

ಪ್ರಕರಣದಿಂದಾಗಿ, ತನ್ನ ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಣದ ಕೊರತೆಯಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಸುಪ್ರೀಂ ಕೋರ್ಟ್‌: ಡಿಎಂಕೆಯ ಕೆ ಪೊನ್ಮುಡಿ ನಿರಾಳ

ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖಂಡ ಕೆ ಪೊನ್ಮುಡಿ ಅವರನ್ನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದ್ದಾರೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಯಿತು.

ಕ್ರಿಮಿನಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶಿಕ್ಷೆ ತಡೆಹಿಡಿದಿದ್ದರೂ ಪೊನ್ಮುಡಿ ಅವರನ್ನು ಮತ್ತೆ ಸಚಿವರಾಗಿ ಸೇರಿಸಲು ನಿರಾಕರಿಸಿದ್ದಕ್ಕಾಗಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಮಾರ್ಚ್ 21ರಂದು ರಾಜ್ಯಪಾಲರನ್ನು ತೀವ್ರ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡಿತ್ತು. ಪೊನ್ಮುಡಿ ಶುಕ್ರವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದರು.

ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ
ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ

ಕರ್ನಾಟಕ ಹೈಕೋರ್ಟ್‌: ಬಿಜೆಪಿಯ ಕರಂದ್ಲಾಜೆ ಎಫ್‌ಐಆರ್‌ಗೆ ತಡೆ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಶಂಕಿತನಿಗೆ ತಮಿಳುನಾಡಿನೊಂದಿಗೆ ನಂಟಿದೆ ಎಂದು ಹೇಳಿದ್ದ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ವಿರುದ್ಧದ ಎಫ್ಐಆರ್ ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿತು.

ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 123 (ಭ್ರಷ್ಟಾಚಾರ) ಮತ್ತು 125 (ಚುನಾವಣೆಗೆ ಸಂಬಂಧಿಸಿದಂತೆ ವರ್ಗಗಳ ನಡುವೆ ದ್ವೇಷ ಬಿತ್ತುವುದು) ಅಡಿಯಲ್ಲಿ ಕರಂದ್ಲಾಜೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.

ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್
ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್

ವಿಧಿಸಲಾದ ಸೆಕ್ಷನ್‌ಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾ. ಕೃಷ್ಣ ಎಸ್‌ ದೀಕ್ಷಿತ್‌ ದೇಶ ನಾಜಿ ಆಡಳಿತದಲಿಲ್ಲ ಎಂದರು.

ಕರ್ನಾಟಕ ಹೈಕೋರ್ಟ್‌: ತೇಜಸ್ವಿ ಸೂರ್ಯ ವಿರುದ್ಧದ ಎಫ್‌ಐಆರ್‌ಗೆ ತಡೆ

ಬೆಂಗಳೂರಿನ ನಗರ್ತಪೇಟೆಯ ಮೊಬೈಲ್ ಅಂಗಡಿ ಮಾಲೀಕ ಮುಖೇಶ ಎಂಬಾತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿ, ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಭಂಗ ತಂದ ಆರೋಪದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಶುಕ್ರವಾರ ತಡೆ ನೀಡಿದರು.

ತೇಜಸ್ವಿ ಸೂರ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಎರಡು ಸಮುದಾಯಗಳ ನಡುವೆ ದ್ವೇಷವನ್ನು ಹರಡಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದೂರು ನೀಡಿದ್ದವು.

Related Stories

No stories found.
Kannada Bar & Bench
kannada.barandbench.com