ಕೇಂದ್ರ ಕಾನೂನು ಸಚಿವಾಲಯದ ವಿರುದ್ಧ ಕೊಲಿಜಿಯಂ ಕಳೆದ ಬುಧವಾರ ಟೀಕೆಗಳ ಸುರಿಮಳೆಗೈಯುವ ಮೂಲಕ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದ ಸರ್ಕಾರ ಮತ್ತು ನ್ಯಾಯಾಂಗದ ನಡುವಿನ ಸಂಘರ್ಷ ತಾರಕಕ್ಕೇರಿತು.
ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ತಾನು ಶಿಫಾರಸು ಮಾಡಿದವರ ಬಗ್ಗೆ ಕೇಂದ್ರ ಸರ್ಕಾರ ಎತ್ತಿರುವ ಆಕ್ಷೇಪಗಳೇನು ಎಂಬುದನ್ನು ಸರ್ವೋಚ್ಚ ನ್ಯಾಯಾಲಯದ ಜಾಲತಾಣದಲ್ಲಿ ಕೊಲಿಜಿಯಂ ವಿವರವಾಗಿ ಬಹಿರಂಗಪಡಿಸಿದೆ. ಹೀಗೆ ಆಕ್ಷೇಪಗಳನ್ನು ಬಹಿರಂಗಪಡಿಸಿರುವುದು ಕಾನೂನು ಸಚಿವಾಲಯದ ವ್ಯಕ್ತಿತ್ವಕ್ಕೆ ಶೋಭೆ ತರುವಂಥದ್ದೇನೂ ಅಲ್ಲ.
ವಿವಿಧ ನ್ಯಾಯಮೂರ್ತಿಗಳ ನೇಮಕಾತಿಗೆ ಸರ್ಕಾರ ಎತ್ತಿದ ಆಕ್ಷೇಪ ಅದಕ್ಕೆ ಕೊಲಿಜಿಯಂ ನೀಡಿದ ಶಿಫಾರಸುಗಳನ್ನು ಇಲ್ಲಿ ವಿವರಿಸಲಾಗಿದೆ:
ಹೆಸರು ತಿರಸ್ಕರಿಸಲು ಸರ್ಕಾರದ ಆಕ್ಷೇಪ: ತಮ್ಮದು ಸಲಿಂಗ ಮನೋಧರ್ಮದ ವ್ಯಕ್ತಿತ್ವ ಎಂದು ಹೇಳಿಕೊಂಡಿದ್ದು ಪಕ್ಷಪಾತಕ್ಕೆ ಕಾರಣವಾಗಬಹುದು. ಅವರ ಸಂಗಾತಿ ಸ್ವಿಸ್ ಪ್ರಜೆಯಾಗಿದ್ದಾರೆ.
ಕೊಲಿಜಿಯಂ ಪ್ರತಿಕ್ರಿಯೆ: ಸಂವಿಧಾನವು ವ್ಯಕ್ತಿಗಳ ಆಯ್ಕೆಯ ಲೈಂಗಿಕತೆಯ ಹಕ್ಕನ್ನು ಮಾನ್ಯ ಮಾಡಿದೆ. ಕಿರ್ಪಾಲ್ ಅವರನ್ನು ನ್ಯಾಯಮೂರ್ತಿಯಾಗಿ ಸೇರ್ಪಡೆ ಮಾಡಿಕೊಳ್ಳುವುದು ನ್ಯಾಯಾಂಗ ನೇಮಕಾತಿಯಲ್ಲಿ ವೈವಿಧ್ಯ ತರಲಿದೆ. ವಿದೇಶಿ ಪ್ರಜೆ ಸಂಗಾತಿಯಾಗಿದ್ದರೆ ಅದು ಅನರ್ಹತೆಯಾಗದು.
ಸರ್ಕಾರದ ನಿಲುವು: ಬಾಕಿ ಇರುವ ಪ್ರಕರಣಗಳ ಕುರಿತು ಸುಂದರೇಶನ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ನೀಡಿದ್ದರು.
ಕೊಲಿಜಿಯಂ ಪ್ರತಿಕ್ರಿಯೆ: ಅಭ್ಯರ್ಥಿ ತನ್ನ ಅಭಿಪ್ರಾಯ ವ್ಯಕ್ತಪಡಿಸುವುದು ಅನರ್ಹತೆ ಆಗದು.
ಸರ್ಕಾರದ ಆಕ್ಷೇಪ: ಸತ್ಯನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ವಿಮರ್ಶಿಸುವ ಲೇಖನ ಹಂಚಿಕೊಂಡಿದ್ದಾರೆ. ಜೊತೆಗೆ ವೈದ್ಯಕೀಯ ವಿದ್ಯಾರ್ಥನಿಯೊಬ್ಬರ ಆತ್ಮಹತ್ಯೆ ಕುರಿತಾದ ಇನ್ನೊಂದು ಲೇಖನವನ್ನು ಶೇರ್ ಮಾಡಿದ್ದಾರೆ.
ಕೊಲಿಜಿಯಂ ಪ್ರತಿಕ್ರಿಯೆ: ಲೇಖನವನ್ನು ಹಂಚಿಕೊಳ್ಳುವುದು ಅಭ್ಯರ್ಥಿಯ ಅರ್ಹತೆ, ವ್ಯಕ್ತಿತ್ವ ಅಥವಾ ಪ್ರಾಮಾಣಿಕತೆ ಮೇಲೆ ಪರಿಣಾಮ ಬೀರದು.
ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ವಕೀಲರಾದ ಅಮಿತೇಶ್ ಬ್ಯಾನರ್ಜಿ ಮತ್ತು ಸಾಕ್ಯ ಸೇನ್ ಹೆಸರುಗಳನ್ನು ಶಿಫಾರಸ್ಸು ಮಾಡಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಎತ್ತಿರುವ ಆಕ್ಷೇಪಗಳಿಗೆ ಕೂಡ ಕೊಲಿಜಿಯಂ ಅಸಮಾಧಾನ ಸೂಚಿಸಿದೆ.
ಈ ನಿರ್ಣಯಗಳಲ್ಲಿ ಎದ್ದುಕಾಣುವ ಅಂಶವೆಂದರೆ, ಕೊಲಿಜಿಯಂ ತನ್ನ ವಿರುದ್ಧ ನಿರಂತರವಾಗಿ ಎದ್ದಿರುವ ಪ್ರಮುಖ ಟೀಕೆಗಳನ್ನು ಹೇಗೆ ʼಪಾರದರ್ಶಕವಾಗಿʼ ಎದುರಿಸಿದೆ ಎಂಬುದು.
ಕಾನೂನು ಸಚಿವಾಲಯ ಆಕ್ಷೇಪ ಎತ್ತಿರುವ ಪ್ರಕರಣಗಳ ಮಟ್ಟಿಗೆ ಕೊಲಿಜಿಯಂ ತನ್ನ ನಿಲುವುಗಳನ್ನು ಬಹಿರಂಗಪಡಿಸುವ ಮೂಲಕ ʼನೇಮಕಾತಿ ಪಾರದರ್ಶಕವಾಗಿಲ್ಲʼ ಎಂಬ ಟೀಕೆಗಳಿಗೆ ಉತ್ತರಿಸಿದೆ.
ಕೊಲಿಜಿಯಂ ಹೂಡಿದ ಅಸ್ತ್ರಕ್ಕೆ ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರ ಪ್ರತ್ಯಸ್ತ್ರ ಪ್ರಯೋಗಿಸಬಹುದು. ಆದರೆ, ಸದ್ಯದ ಮಟ್ಟಿಗಂತೂ ಸಿಜೆಐ ಚಂದ್ರಚೂಡ್ ಅವರು ಜಾಣ್ಮೆಯಿಂದ ಹೆಜ್ಜೆ ಇರಿಸಿದ್ದಾರೆ ಎಂದು ಸುರಕ್ಷಿತವಾಗಿ ಹೇಳಬಹುದು.