ಜನ ತಮ್ಮೊಳಗೆ ಕಾದಾಡಿದರೆ ದೇಶ ಪ್ರಗತಿ ಸಾಧಿಸುವುದಾದರೂ ಹೇಗೆ? ಸಿಜೆಐ ಚಂದ್ರಚೂಡ್

ವೃತ್ತಿಪರವಾಗಿ ಅಥವಾ ವೈಯಕ್ತಿಕವಾಗಿ ತಮಗಿಂತ ಕೆಳಗಿನ ವ್ಯಕ್ತಿಗಳನ್ನು ಘನತೆಯಿಂದ ಪರಿಗಣಿಸಬೇಕು ಎಂಬ ಅಂಶವನ್ನು ಜನ ಅರಿಯಬೇಕು ಎಂದು ಸಿಜೆಐ ತಮ್ಮ ಭಾಷಣದಲ್ಲಿ ಹೇಳಿದರು.
ಸಿಜೆಐ ಡಿ ವೈ ಚಂದ್ರಚೂಡ್
ಸಿಜೆಐ ಡಿ ವೈ ಚಂದ್ರಚೂಡ್

ದೇಶದ ಪ್ರಗತಿಗೆ ಸಹೋದರತ್ವ ಮತ್ತು ಭ್ರಾತೃತ್ವ ಅತ್ಯಗತ್ಯವಾಗಿದ್ದು ಒಳಜಗಳ ದೇಶದ ಪ್ರಗತಿಯನ್ನು ತಡೆಯುತ್ತದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ತಿಳಿಸಿದರು.

ಕೇಂದ್ರ ಸರ್ಕಾರದ ವತಿಯಿಂದ ರಾಜಸ್ಥಾನದ ಬಿಕಾನೇರ್‌ನಲ್ಲಿ ಶನಿವಾರ ಆಯೋಜಿಸಲಾಗಿದ್ದ ʼನಮ್ಮ ಸಂವಿಧಾನ ನಮ್ಮ ಹೆಮ್ಮೆʼ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಜನ ತಮ್ಮ ವೈಯಕ್ತಿಕ ಜೀವನದಲ್ಲಿ ಸಹೋದರತೆ ಮೆರೆಯಬೇಕು ಎಂದರು.

ಉಪರಾಷ್ಟ್ರಪತಿ ಜಗದೀಪ್ ಧನಕರ್‌ ಅವರು ಉದ್ಘಾಟಿಸಿರುವ; ಇಡೀ ವರ್ಷ ನಡೆಯಲಿರುವ ಅಭಿಯಾನ ಸಂವಿಧಾನ, ಜನರ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲಿದೆ.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ಜನ ಪರಸ್ಪರ ಕಾದಾಡಿದರೆ ದೇಶ ಹೇಗೆ ಪ್ರಗತಿ ಸಾಧಿಸಬಲ್ಲದು?

  • ʼಹಮಾರಾ ಸಂವಿಧಾನ್, ಹಮಾರಾ ಸಮ್ಮಾನ್' ಎಂದು ಹೇಳುವಾಗ, ನಾವು ದೇಶದಲ್ಲಿ ಭ್ರಾತೃತ್ವ ಮತ್ತು ಸಹೋದರತ್ವಕ್ಕೆ ಉತ್ತೇಜನ ನೀಡಬೇಕು. ಜೊತೆಗೆ ಈ ಆದರ್ಶಗಳನ್ನು ನಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

  • ವೃತ್ತಿಪರವಾಗಿ ಅಥವಾ ವೈಯಕ್ತಿಕವಾಗಿ ತಮಗಿಂತ ಕೆಳಗಿನ ವ್ಯಕ್ತಿಗಳನ್ನು ಘನತೆಯಿಂದ ಪರಿಗಣಿಸಬೇಕು ಎಂಬ ಅಂಶವನ್ನು ಜನ ಅರಿಯಬೇಕು.

  • ಜನರು ಚಾಲಕರನ್ನು ಗೌರವಿಸುವುದಿಲ್ಲ. ಅವರು ಮಾಡುವ ಕೆಲಸ ಸಣ್ಣದು ಎಂದು ಭಾವಿಸುತ್ತಾರೆ. ಅಂತೆಯೇ, ಸ್ವಚ್ಛತಾ ಕೆಲಸ ಮಾಡುವ ಜನರನ್ನು ಕೀಳರಿಮೆಯಿಂದ ನೋಡುತ್ತೇವೆ ಮತ್ತು ಕಚೇರಿ ಜವಾನರೊಂದಿಗೆ ಕೆಟ್ಟದಾಗಿ ವರ್ತಿಸುತ್ತೇವೆ.

  • ಈ ಹಿನ್ನೆಲೆಯಲ್ಲಿ, ಈ ಹಿಂದೆ ಜಮಾದಾರ್ (ನ್ಯಾಯಾಧೀಶರ ಕಾರಿನ ಬಾಗಿಲು ತೆರೆಯುವ ಮತ್ತು ನ್ಯಾಯಾಧೀಶರು ಕುಳಿತುಕೊಳ್ಳಲು ನ್ಯಾಯಾಲಯಗಳಲ್ಲಿ ಕುರ್ಚಿಯನ್ನು ಎಳೆಯುವ ನೌಕರ) ಎಂದು ಕರೆಯಲಾಗುತ್ತಿದ್ದ ಹುದ್ದೆಯ ಹೆಸರನ್ನು ಬದಲಾಯಿಸಲು ಸುಪ್ರೀಂ ಕೋರ್ಟ್‌ ಕಳೆದ ವರ್ಷ ನಿರ್ಧರಿಸಿತು.

  • ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳಿಗೆ ಸಮಾನ ಪ್ರಾಮುಖ್ಯತೆ ನೀಡುವ ಈ ಬೃಹತ್ ಗಣರಾಜ್ಯದ ಭಾಗವಾಗಿದ್ದೇವೆ ಎಂಬುದನ್ನು ನಾವು ಅರಿಯುವಂತೆ ಸಂವಿಧಾನ ಮಾಡುತ್ತದೆ.

  • ಹಕ್ಕುಗಳ ಜೊತೆಗೆ ಜನ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತೆ ಸಂವಿಧಾನ ನಿರೀಕ್ಷಿಸುತ್ತದೆ ಎಂಬುದನ್ನು ಜನ ಅರಿತುಕೊಳ್ಳಬೇಕು.

  • ಸಂವಿಧಾನವನ್ನು ಗೌರವಿಸುವುದು, ಸಾಮರಸ್ಯವನ್ನು ಉತ್ತೇಜಿಸುವುದು, ಪರಿಸರ ಸಂರಕ್ಷಣೆ ಹಾಗೂ ವೈಜ್ಞಾನಿಕ ಮನೋಭಾವದ ಬೆಳೆಸುವಂತಹ ಕರ್ತವ್ಯಗಳನ್ನು ತಾವು ನಿರ್ವಹಿಸಬೇಕು.

Related Stories

No stories found.
Kannada Bar & Bench
kannada.barandbench.com