ರೋಹಿಣಿ ಕೋರ್ಟ್‌ನಲ್ಲಿ ಶುಕ್ರವಾರ ಪಾತಕಿಗಳ ನಡುವೆ ಘಾತಕ ಶೂಟೌಟ್ ನಡೆದ ಬೆನ್ನಿಗೇ ನ್ಯಾಯಾಂಗದ ಅಧಿಕಾರಿಗಳು, ವಕೀಲರು ಹಾಗೂ ಕಾನೂನು ಸಮುದಾಯದ ರಕ್ಷಣೆಗೆ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ನ್ಯಾಯಾಧೀಶರೊಬ್ಬರನ್ನು ಮುಂಜಾನೆಯ ವಾಯುವಿಹಾರದ ವೇಳೆ ಕೊಲೆಗೈದ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಣಾ ಅರ್ಜಿ ವಿಚಾರಣೆಯಲ್ಲಿ ಮದ್ಯಪ್ರವೇಶ ಕೋರಿ ವಕೀಲ ವಿಶಾಲ್ ತಿವಾರಿ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ.
ತಿವಾರಿಯವರು ತಮ್ಮ ಅರ್ಜಿಯಲ್ಲಿ, ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಳ್ಳುವ ಕಠಿಣ ಅಪರಾಧಿಗಳನ್ನು ಭೌತಿಕವಾಗಿ ನ್ಯಾಯಾಲಯಗಳಿಗೆ ವಿಚಾರಣೆಗಾಗಿ ಕರೆತರದೆ ವರ್ಚುವಲ್ ಹಾಜರಿಗೆ ಅನುಮತಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಕೆಳ ಹಂತದ ನ್ಯಾಯಾಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ವ್ಯಾಪಕ ಅಳವಡಿಕೆಗೆ ಮತ್ತಷ್ಟು ವೇಗ ನೀಡುವಂತೆ ಕೋರಿದ್ದಾರೆ. ಮುಂದುವರೆದು, ವಿವಿಧ ಪ್ರಕರಣಗಳಲ್ಲಿ ವ್ಯಾಜ್ಯಕಾರರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕೋರ್ಟ್ ಆವರಣದಲ್ಲಿ ಜನರು ಗುಂಪು ಗುಂಪಾಗಿ ನೆರೆಯುವುದಕ್ಕೂ ಸಹ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದಾರೆ.
ತಮ್ಮ ಮನವಿಯಲ್ಲಿ ರೋಹಿಣಿ ಕೋರ್ಟ್‌ನಲ್ಲಿ ನಡೆದಿರುವ ಘಟನೆಯನ್ನು ಉಲ್ಲೇಖಿಸಿರುವ ಅರ್ಜಿದಾರರು ದೇಶಾದ್ಯಂತ ಕೆಳಹಂತದ ನ್ಯಾಯಾಲಯಗಳಲ್ಲಿ ಅಂತಹ ಘಟನೆಗಳು ನಡೆದಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಬಿಜನೂರ್, ಬರ್ವಾನಿ, ಅಮೃತಸರ ಮತ್ತು ಹಿಸ್ಸಾರ್‌ಗಳ ನ್ಯಾಯಾಲಯದ ಆವರಣಗಳಲ್ಲಿ ಹಿಂಸಾ ಸ್ವರೂಪಿ ಘಟನೆಗಳು ನಡೆದಿರುವ ಉದಾಹರಣೆಯನ್ನು ನೀಡಿದ್ದಾರೆ.
“ಅಂತಹ ಘಟನೆಗಳು ನ್ಯಾಯಾಂಗದ ಅಧಿಕಾರಿಗಳು, ವಕೀಲರು ಮತ್ತು ನ್ಯಾಯಾಲಯದ ಆವರಣದಲ್ಲಿ ನೆರೆದಿರುವ ಜನರ ಜೀವಕ್ಕೆ ಅಪಾಯವನ್ನುಂಟು ಮಾಡುವುದು ಮಾತ್ರವೇ ಅಲ್ಲದೆ ನ್ಯಾಯಾಂಗ ವ್ಯವಸ್ಥೆಗೂ ಬೆದರಿಕೆಯಾಗಿವೆ. ನ್ಯಾಯಾಲಯವೆನ್ನುವುದು ಜನರು ಕಾನೂನಿನ ರಕ್ಷಣೆಯಲ್ಲಿ ಇರುವ ತಾಣವಾಗಿದೆ. ಅದರೆ, ಇಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಜನತೆಯು ಬಲಿಯಾಗುವಂತಾಗಿದೆ,” ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.