
ಕೇರಳ ಸಾರ್ವಜನಿಕ ಆರೋಗ್ಯ ಕಾಯಿದೆ 2023ರ ಅಡಿಯಲ್ಲಿ ಹಾವು ಕಡಿತ ಪ್ರಕರಣ ಮತ್ತು ಅದರಿಂದ ಉಂಟಾಗುವ ಸಾವುಗಳನ್ನು ಎರಡು ತಿಂಗಳೊಳಗೆ ಅಧಿಸೂಚಿತ ರೋಗವೆಂದು ಘೋಷಿಸುವಂತೆ ಕೇರಳ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ಕುಲತ್ತೂರ್ ಜೈಸಿಂಗ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಭಾರತದ ಅನೇಕ ರಾಜ್ಯಗಳು ಹಾವು ಕಡಿತವನ್ನು ಅಧಿಸೂಚಿತ ರೋಗವೆಂದು ಘೋಷಿಸಿವೆ. ಕೇರಳದಲ್ಲಿಯೂ ಸೂಕ್ತ ಮಾಹಿತಿ ಸಂಗ್ರಹ ಮತ್ತು ನೀತಿ ನಿರೂಪಣೆಗಾಗಿ ಇದು ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಮತ್ತು ನ್ಯಾಯಮೂರ್ತಿ ಶೋಭಾ ಅನ್ನಮ್ಮ ಈಪೆನ್ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
ಹಾವು ಕಡಿತದ ಸಮಸ್ಯೆಯನ್ನು ಪರಿಹರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳುವುದಕ್ಕಾಗಿ ಕೇರಳ ಸರ್ಕಾರ ಹಾವು ಕಡಿತದ ನಿಖರ ಮಾಹಿತಿ ಹೊಂದಿರಬೇಕು. ಜೊತೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಹಾವು ಕಡಿತ ಪ್ರಕರಣಗಳನ್ನು ಕಡ್ಡಾಯವಾಗಿ ವರದಿ ಮಾಡುವಂತೆ ಸೂಚಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಅಂತೆಯೇ ಹಾವು ಕಡಿತ ಮತ್ತು ಸಾವುಗಳನ್ನು ಅಧಿಸೂಚಿತ ರೋಗವೆಂದು ಪರಿಗಣಿಸಲು ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆಯುವುದಕ್ಕಾಗಿ ಹಾವು ಕಚ್ಚುವಿಕೆ ತಡೆಯುವಿಕೆ ಮತ್ತು ತುರ್ತು ಚಿಕಿತ್ಸೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಕಟಿಸಬೇಕು ಎಂದಿರುವ ನ್ಯಾಯಾಲಯ ವಿವಿಧ ಇಲಾಖೆಗಳು ನಿರ್ವಹಿಸಬೇಕಾದ ಕರ್ತವ್ಯಗಳನ್ನು ಸ್ಪಷ್ಟವಾಗಿ ಹಂಚಿಕೆ ಮಾಡುವಂತೆ ಸೂಚಿಸಿದೆ.
ಹಾವು ಕಡಿತಕ್ಕೆ ಔಷಧ ಲಭ್ಯ ಇದೆಯೇ ಎಂದು ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯೇ ವಿನಾ ಶಾಲೆಗಳದ್ದಲ್ಲ ಎಂತಲೂ ಅದು ತಿಳಿಸಿದೆ. ಸರ್ಕಾರ ಈಗಾಗಲೇ ರಚಿಸಿರುವ ಕಾರ್ಯಕಾರಿ ಸಮಿತಿ ಮುಂದುವರಿಯಬೇಕು ಮತ್ತು ರಾಜ್ಯ ಹಾಗೂ ಜಿಲ್ಲಾ ಸ್ಥಾಯಿ ಸಮಿತಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಪ್ರಕರಣಗಳ ಮಾಹಿತಿ ಸಂಗ್ರಹ ಮತ್ತು ಮೇಲ್ವಿಚಾರಣೆ ಮಾಡಲು ಪೀಠ ಆದೇಶಿಸಿದೆ.
ಹಾವು ಕಚ್ಚಿದ ಕಾರಣಕ್ಕೆ 2019ರಲ್ಲಿ ವಯನಾಡಿನ ತಾಲ್ಲೂಕು ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ 10 ವರ್ಷದ ಬಾಲಕಿ ಶೆಹಲಾ ಶೆರಿನ್ ಸೂಕ್ತ ಸೌಲಭ್ಯಗಳಿಲ್ಲದೆ ಮೃತಪಟ್ಟಿದ್ದಳು. ಸಕಾಲಿಕವಾಗಿ ಔಷಧ ಮತ್ತು ವೆಂಟಿಲೇಟರ್ ಸೌಲಭ್ಯ ಒದಗಿಸದೇ ಇದ್ದುದೇ ಆಕೆಯ ಸಾವಿಗೆ ಕಾರಣ ಎಂದು ದೂರಿ ಅರ್ಜಿ ಸಲ್ಲಿಸಲಾಗಿತ್ತು.