ಮುಸ್ಲಿಮ್‌ ಮಹಿಳೆಯರ ಅವಹೇಳನ: ಕಲ್ಲಡ್ಕ ಪ್ರಭಾಕರ್‌ ಭಟ್‌ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಶ್ರೀರಂಗಪಟ್ಟಣ ನ್ಯಾಯಾಲಯ

ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಸವಾರಿ ಮಾಡಲು ಅವಕಾಶ ಮಾಡಿಕೊಡಲಾಗದು ಎಂದು ವಾದಿಸಿದ ವಕೀಲ ಬಾಲನ್.‌
RSS Leader Kalladka Prabhakar Bhat
RSS Leader Kalladka Prabhakar Bhat

ಮುಸ್ಲಿಮ್‌ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಗುರಿಯಾಗಿರುವ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಅವರ ಜಾಮೀನು ಅರ್ಜಿಯ ಆದೇಶವನ್ನು ಶ್ರೀರಂಗಪಟ್ಟಣ ನ್ಯಾಯಾಲಯವು ಜನವರಿ 17ಕ್ಕೆ ಕಾಯ್ದಿರಿಸಿದೆ.

ಪ್ರಭಾಕರ್‌ ಭಟ್‌ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಶ್ರೀರಂಗಪಟ್ಟಣದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೋಪಾಲ ಕೃಷ್ಣ ರೈ ಟಿ ಅವರು ಬುಧವಾರ ನಡೆಸಿದರು.

Judge Gopal Krishna Rai T
Judge Gopal Krishna Rai T

ದೂರುದಾರೆ ನಜ್ಮಾ ನಜೀರ್‌ ಅವರ ಪರವಾಗಿ ಹಾಜರಾಗಿದ್ದ ವಕೀಲ ಎಸ್‌ ಬಾಲನ್‌ ಅವರು “ಪ್ರಕರಣದ ವಾಸ್ತವಿಕ ಅಂಶಗಳನ್ನು ಪರಿಗಣಿಸಿದರೆ ಮೇಲ್ನೋಟಕ್ಕೆ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಸೆಕ್ಷನ್‌ 13 ಮತ್ತು ಕೋಕಾ ಕಾಯಿದೆಯ ನಿಬಂಧನೆಗಳು ಅನ್ವಯಿಸುತ್ತವೆ. ಯಾವುದೇ ಕೋನದಿಂದ ನೋಡಿದರೂ ಅರ್ಜಿದಾರ ಭಟ್‌ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಬೇಕಿದೆ. ಅಲ್ಲದೇ, ದೇಶದ ಸಮಗ್ರತೆ, ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಮಾಡುವ ವಸ್ತುಗಳನ್ನು ಅರ್ಜಿದಾರರಿಂದ ವಶಕ್ಕೆ ಪಡೆಯಬೇಕಿದೆ. ಇದೆಲ್ಲದರ ಜೊತೆಗೆ ಮೇಲ್ನೋಟಕ್ಕೆ ಮಧ್ಯಂತರ ಜಾಮೀನು ಪಡೆಯಲು ಅವರು ಅರ್ಹರಲ್ಲ” ಎಂದು ಜಾಮೀನಿಗೆ ತೀವ್ರ ವಿರೋಧ ದಾಖಲಿಸಿದರು.

“ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಸವಾರಿ ಮಾಡಲು ಅವಕಾಶ ಮಾಡಿಕೊಡಲಾಗದು. ಜನರ ಕಲ್ಯಾಣಕ್ಕೆ ಅನುವು ಮಾಡಿಕೊಡಲು ರಾಜ್ಯ ಸರ್ಕಾರವು ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಇದಕ್ಕಾಗಿ ಕಾನೂನು ಉಲ್ಲಂಘಿಸುವವರನ್ನು ಕಾನೂನಿನ ಅಡಿ ತರಬೇಕು” ಎಂದರು.

ಸದ್ಯದ ಇಸ್ಲಾಮೋಫೋಬಿಕ್ ವಾತಾವರಣದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದ ಆಧಾರದ ಮೇಲೆ ರಾಷ್ಟ್ರೀಯ ಅಭಿಪ್ರಾಯ ರೂಪಿಸಲು ಅರ್ಜಿದಾರರು ಬಯಸಿದ್ದಾರೆ. ಮುಸ್ಲಿಮರನ್ನು ಅತಿಮಾನುಷವಾಗಿ ಬಿಂಬಿಸುವ ಉದ್ದೇಶವನ್ನು ಹೊಂದಿದ್ದಾರೆ. ಭಟ್‌ ಅವರ ಭಾಷಣವು ಮುಸ್ಲಿಂ ಸಮುದಾಯವನ್ನು ನಿಂದಿಸುವ ಅವರ ಪ್ರಾಥಮಿಕ ಉದ್ದೇಶವನ್ನು ಸೂಚಿಸುತ್ತದೆ ಎಂದು ಆಕ್ಷೇಪಿಸಿದರು.

ಪ್ರಭಾಕರ್‌ ಭಟ್‌ ಪರವಾಗಿ ವಾದಿಸಿದ ವಕೀಲ ಚಂದ್ರೇಗೌಡ ಅವರು ತಮ್ಮ ಕಕ್ಷಿದಾರರ ವಿರುದ್ಧ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಸೆಕ್ಷನ್‌ಗಳು ಅನ್ವಯಿಸುವುದಿಲ್ಲ. ದೂರುದಾರೆಯು ನೊಂದ ಮಹಿಳೆಯಲ್ಲ. ಭಟ್‌ ಅವರಿಗೆ 82 ವರ್ಷ ವಯಸ್ಸಾಗಿದ್ದು, ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ಭಟ್‌ ಅವರು ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿದ್ದು, ಅವರ ವಿರುದ್ಧ ದೂರು ನೀಡಿದರೆ ಪ್ರಚಾರ ಪಡೆಯಬಹುದು ಎಂಬ ದುರುದ್ದೇಶವಿದೆ. ಭಟ್‌ ಅವರ ಭಾಷಣದಲ್ಲಿ ಕೋಮು ದ್ವೇಷ ಹರಡುವ ಅಥವಾ ಸೃಷ್ಟಿಸುವ ಉದ್ದೇಶವಿಲ್ಲ. ಘಟನೆ ನಡೆದ ಹಲವು ದಿನಗಳ ಬಳಿಕ ದೂರು ನೀಡಲಾಗಿದೆ ಎಂದು ಸಮರ್ಥಿಸಿದರು.

Also Read
ಕಲ್ಲಡ್ಕ ಪ್ರಭಾಕರ್‌ ಭಟ್‌ ಜಾಮೀನಿಗೆ ವಿರೋಧ: ಶ್ರೀರಂಗಪಟ್ಟಣ ನ್ಯಾಯಾಲಯಕ್ಕೆ ನಜ್ಮಾ ನಜೀರ್‌ ಅರ್ಜಿ ಸಲ್ಲಿಕೆ

ಶ್ರೀರಂಗಪಟ್ಟ ಪೊಲೀಸರ ಪರವಾಗಿ ವಾದಿಸಿದ ಸರ್ಕಾರಿ ಅಭಿಯೋಜಕರು ಆರೋಪಿಯ ವಿರುದ್ಧ ಅನ್ವಯಿಸಿರುವ ಸೆಕ್ಷನ್‌ಗಳು ಗಂಭೀರ ಸ್ವರೂಪದ್ದಾಗಿವೆ. ಜಾಮೀನು ಪಡೆಯಲು ಅವರು ಅರ್ಹರಲ್ಲ ಎಂದು ವಾದಿಸಿದರು.

ಪ್ರಕರಣದ ಹಿನ್ನೆಲೆ: ಹನುಮ ಜಯಂತ್ಯುತ್ಸವದ ಅಂಗವಾಗಿ ಡಿಸೆಂಬರ್‌ 24ರಂದು ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆಯು ಆಯೋಜಿಸಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಪ್ರಭಾಕರ್‌ ಭಟ್‌ ಮುಸ್ಲಿಮರ ವಿರುದ್ಧ ಧಾರ್ಮಿಕ ದ್ವೇಷಕಾರಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್‌ ನೀಡಿದ್ದ ದೂರಿನ ಅನ್ವಯ ಶ್ರೀರಂಗಪಟ್ಟಣ ಟೌನ್‌ ಠಾಣೆಯ ಪೊಲೀಸರು ಪ್ರಭಾಕರ್‌ ಭಟ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಮಾತುಗಳನ್ನು ಆಡುವುದು), 509 (ಮಹಿಳೆಯ ಖಾಸಗಿತನಕ್ಕೆ ಸಂಬಂಧಿಸಿದ ಮಾತುಗಳನ್ನಾಡುವುದು), 153ಎ (ಧರ್ಮದ ಆಧಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಹರಡುವುದು) ಮತ್ತು 298 (ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com