ನಿರುದ್ಯೋಗದ ನೆಪ ಹೇಳಿ ಜೀವನಾಂಶ ಪಾವತಿಯಿಂದ ಪತಿ ಹಿಂದೆ ಸರಿಯಲಾಗದು: ಹೈಕೋರ್ಟ್‌

ಪ್ರಸ್ತುತ ಹಣದುಬ್ಬರದಿಂದಾಗಿ ಜನಸಮೂಹ ತತ್ತರಿಸಿದೆ. ಇದೇ ಕಾರಣದಿಂದ ಖರ್ಚುವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ ಎಂದು ಹೇಳಿದ ನ್ಯಾಯಾಲಯ.
Karnataka HC and Justice Sachin Shankar Magadum
Karnataka HC and Justice Sachin Shankar Magadum
Published on

ನಿರುದ್ಯೋಗ ನೆಪ ಹೇಳಿ ಪತಿಯು ತನ್ನ ವಿಚ್ಛೇದಿತ ಪತ್ನಿ ಹಾಗೂ ಮಗುವಿಗೆ ಜೀವನಾಂಶ ನೀಡುವ ಜವಾಬ್ದಾರಿಯಿಂದ ಹಿಂದೆ ಸರಿಯುವಂತಿಲ್ಲ ಎಂದಿರುವ ಕರ್ನಾಟಕ ಹೈಕೋರ್ಟ್, ಪತ್ನಿಗೆ ಮಾಸಿಕ 7 ಸಾವಿರ, ಅಪ್ರಾಪ್ತ ಮಗುವಿಗೆ 3 ಸಾವಿರ ಪಾವತಿಸುವಂತೆ ನಿರ್ದೇಶಿಸಿ ಕೌಟುಂಬಿಕ ನ್ಯಾಯಾಲಯ ಮಾಡಿದ್ದ ಮಧ್ಯಂತರ ಆದೇಶವನ್ನು ಎತ್ತಿಹಿಡಿದಿದೆ.

ಬೆಳಗಾವಿ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಗೊಳಿಸುವಂತೆ ಕೋರಿ ನವೀನ್‌ (ಹೆಸರು ಬದಲಿಸಲಾಗಿದೆ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿದ್ದಾರೆ. ಹೀಗಾಗಿ, ಜೀವನಾಂಶ ಪಾವತಿಸುವ ಸ್ಥಿತಿಯಲ್ಲಿ ಇಲ್ಲ. ಆದ್ದರಿಂದ, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಗೊಳಿಸಬೇಕು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ದಂಪತಿಗಳು ಪರಸ್ಪರ ಬೇರೆಯಾಗಿದ್ದಾರೆ. ಇದೀಗ ಪತಿ ತಾನು ಕೆಲಸ ಮಾಡುತ್ತಿಲ್ಲ ಎಂದು ಪತ್ನಿ ಹಾಗೂ ಅಪ್ರಾಪ್ತ ಮಗವಿಗೆ ಜೀವನಾಂಶ ನೀಡುವ ಜವಾಬ್ದಾರಿಯಿಂದ ಹಿಂದೆ ಸರಿಯುವುದು ಒಪ್ಪುವಂತದಲ್ಲ ಎಂದಿದೆ.

ಪ್ರಸ್ತುತ ಹಣದುಬ್ಬರದಿಂದಾಗಿ ಜನಸಮೂಹ ತತ್ತರಿಸಿದೆ. ಇದೇ ಕಾರಣದಿಂದ ಖಚ್ಚು- ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ, ಜೀವನ ನಿರ್ವಹಣೆ ಸುಲಭದ ಮಾತಲ್ಲ. ಬೆಳಗಾವಿ ನಗರದ ಜೀವನಶೈಲಿ ಅನ್ವಯ ಪತ್ನಿಗೆ 7 ಸಾವಿರ ಹಾಗೂ ಅಪ್ರಾಪ್ತ ಮಗುವಿಗೆ 3 ಸಾವಿರ ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ ಮಧ್ಯಂತರ ಪರಿಹಾರ ಸಮಂಜಸವಾಗಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.

ಏನಿದು ಪ್ರಕರಣ: ದಂಪತಿ ವಿಚ್ಛೇದನ ಪಡೆದು ಬೇರೆಯಾದಾಗ ಅರ್ಜಿದಾರರು ಉದ್ಯೋಗ ಕಳೆದುಕೊಂಡಿದ್ದರೂ ಅರ್ಜಿದಾರರ ಕುಟುಂಬಸ್ಥರು ವಾಣಿಜ್ಯ ಮಳಿಗೆ (ಕಮರ್ಷಿಯಲ್ ಕಾಂಪ್ಲೆಕ್ಸ್) ಹೊಂದಿರುವುದನ್ನು ಗಮನಿಸಿ ಬೆಳಗಾವಿ ಕೌಟುಂಬಿಕ ನ್ಯಾಯಾಲಯವು ಪತ್ನಿಗೆ 7 ಸಾವಿರ ಹಾಗೂ ಅಪ್ರಾಪ್ತ ಮಗುವಿಗೆ 3 ಸಾವಿರ ಮಾಸಿಕ ಜೀವನಾಂಶ ಪಾವತಿಸುವಂತೆ ಮಧ್ಯಂತರ ಆದೇಶ ಮಾಡಿತ್ತು. ಇದರ ರದ್ದತಿ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com