ಪತ್ನಿ ಆಧುನಿಕ ಜೀವನ ನಡೆಸುತ್ತಿದ್ದಾಳೆಂಬ ಕಾರಣಕ್ಕೆ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಮಧ್ಯಪ್ರದೇಶ ಹೈಕೋರ್ಟ್

ಪ್ರಸ್ತುತ ಪ್ರಕರಣದಲ್ಲಿ ಪತ್ನಿ ಸಾಂಪ್ರದಾಯಿಕವಾಗಿಯೇ ಆಗಲಿ ಇಲ್ಲವೇ ಆಧುನಿಕವಾಗಿಯೇ ಆಗಲಿ ತನ್ನ ಸ್ವಂತ ಇಚ್ಛೆಯಂತೆ ಜೀವನ ನಡೆಸಲು ನಡೆಸಲು ಸ್ವತಂತ್ರಳು ಎಂದು ನ್ಯಾಯಾಲಯ ಹೇಳಿದೆ.
Madhya Pradesh High Court, Jabalpur Bench
Madhya Pradesh High Court, Jabalpur Bench

ಪತ್ನಿ ಆಧುನಿಕ ಜೀವನ ನಡೆಸುವುದು ತಪ್ಪಲ್ಲ ಮತ್ತು ಆ ಕಾರಣಕ್ಕೆ ಪತಿ ಆಕೆಗೆ ಜೀವನಾಂಶ ನಿರಾಕರಿಸುವಂತಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ.

ಪತ್ನಿಯ ಆಧುನಿಕ ಜೀವನ ಗಂಡನ ದೃಷ್ಟಿಯಲ್ಲಿ ಅನೈತಿಕ ಎಂಬ ಕಾರಣಕ್ಕಾಗಿ ಹೆಂಡತಿಯನ್ನು ನ್ಯಾಯಾಲಯ ತಪ್ಪಾಗಿ ಕಾಣಲಾಗದು ಎಂದು ನ್ಯಾ. ಜಿ ಎಸ್‌ ಅಹ್ಲುವಾಲಿಯಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

"ಅಪರಾಧ ಮಾಡದೆ ಆಧುನಿಕ ಜೀವನ ನಡೆಸುವುದನ್ನು ಟೀಕಿಸಲಾಗದು. ಯಾವುದೇ ಸಮಂಜಸ ಕಾರಣವಿಲ್ಲದೆ ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ತೀರ್ಮಾನಕ್ಕೆ ಬಾರದ ಹೊರತು, ಆಕೆಗೆ ಜೀವನಾಂಶ  ನಿರಾಕರಿಸುವಂತಿಲ್ಲ ”ಎಂದು ನ್ಯಾಯಾಲಯ ನುಡಿದಿದೆ.

ಹೀಗಾಗಿ, ತನ್ನ ಪತ್ನಿಗೆ ಮಾಸಿಕ ₹ 5,000 ಜೀವನಾಂಶ ನೀಡುವಂತೆ ಸೂಚಿಸಿರುವ ಆದೇಶ ರದ್ದುಗೊಳಿಸಬೇಕೆಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಅದು ತಿರಸ್ಕರಿಸಿತು.

ತನ್ನ ಪತ್ನಿ ಆಧುನಿಕ ಜೀವನ ನಡೆಸುವ ಅಭ್ಯಾಸ ಹೊಂದಿರುವುದು ತನಗೆ ಸ್ವೀಕಾರಾರ್ಹವಲ್ಲ ಎಂಬ ವಾದ ಹೊರತುಪಡಿಸಿ ಯಾವುದೇ ಸಮಂಜಸ ಕಾರಣ ಇಲ್ಲದೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಸಾಬೀತುಪಡಿಸುವಂತಹ ವಿಚಾರಗಳನ್ನು ಅರ್ಜಿದಾರರು ಹೇಳಿಲ್ಲ ಎಂದು ನ್ಯಾಯಾಲಯ ವಿವರಿಸಿತು.

 “ಪ್ರಕರಣದಲ್ಲಿ ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳಿದ್ದು ಹೆಂಡತಿ ಕ್ರಿಮಿನಲ್‌ ಚಟುವಟಿಕೆಯಲ್ಲಿ ತೊಡಗದೆ ಇರುವವರೆಗೆ ಆಕೆ ಸಾಂಪ್ರದಾಯಿಕವಾಗಿಯೇ ಆಗಲಿ ಇಲ್ಲವೇ ಆಧುನಿಕವಾಗಿಯೇ ಆಗಲಿ ತನ್ನ ಸ್ವಂತ ಇಚ್ಛೆಯಂತೆ ಜೀವನ ನಡೆಸಲು ಸ್ವತಂತ್ರಳು ಎಂದಷ್ಟೇ ಹೇಳಬಹುದು” ಎಂಬುದಾಗಿ ಅದು ಹೇಳಿತು.

ತನ್ನ ಮಗನಿಗೆ ಜೀವನಾಂಶ ನೀಡಲು ಯಾವುದೇ ಅಭ್ಯಂತರ ಇಲ್ಲ. ಆದರೆ ಹೆಂಡತಿಯ ಜೀವನಶೈಲಿಯ ಕಾರಣಕ್ಕೆ ಆಕೆಗೆ ನೀಡಿರುವ ಪರಿಹಾರದ ಮೊತ್ತ ರದ್ದುಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಆದರೆ ಈ ವಾದ ಪ್ರಶ್ನಿಸಿದ ನ್ಯಾಯಾಲಯ ನೈತಿಕತೆ ಆಧಾರದ ಮೇಲೆ ಕಾನೂನನ್ನು ಮೀರಿ ಹೋಗಬಹುದೆ ಎಂದು ಕೇಳಿತು. ಪತ್ನಿಯ ಆಧುನಿಕ ಜೀವನ ಆಕೆಯ ಅನೈತಿಕ ಕೃತ್ಯ ಎನ್ನಬಹುದೇ ಎಂದೂ ಅದು ಪ್ರಶ್ನಿಸಿತು.

ಪತಿ ಪರ ವಕೀಲರು ಈ ಹಂತದಲ್ಲಿ ಮಂಡಿಸಿದ ವಾದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ಪೀಠ ವಿಚಾರಣಾ ನ್ಯಾಯಾಲಯ ₹ 5,000 ಮೊತ್ತವನ್ನಷ್ಟೇ ಪಾವತಿಸುವಂತೆ ಹೇಳಿದ್ದು, ಜೀವನಾಗತ್ಯ ವಸ್ತುಗಳ ಬೆಲೆ ಏರಿಕೆ, ಜೀವನ ನಿರ್ವಹಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಅದೇನೂ ದೊಡ್ಡಮೊತ್ತವಲ್ಲ ಎಂದು ಅಭಿಪ್ರಾಯಪಟ್ಟಿತು.

ಈ ಹಿನ್ನೆಲೆಯಲ್ಲಿ ಪತಿಯ ಅರ್ಜಿಯನ್ನು ಅದು ವಜಾಗೊಳಿಸಿತು. ಆದರೆ ಜೀವನಾಂಶ ಮೊತ್ತ ಹೆಚ್ಚಿಸುವಂತೆ ಆತನ ಹೆಂಡತಿ ಮತ್ತು ಮಗ ಹೊಸದಾಗಿ ಅರ್ಜಿ ಸಲ್ಲಿಸಿದರೆ ಇದೇ ಆದೇಶ ಅನ್ವಯವಾಗುವುದಿಲ್ಲ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿತು.

Related Stories

No stories found.
Kannada Bar & Bench
kannada.barandbench.com