ವಿಚ್ಛೇದಿತ ಪತ್ನಿಯೊಂದಿಗೆ ಸಹಬಾಳ್ವೆಗೆ ಮುಂದಾದರೂ ಪತಿ ಜೀವನಾಂಶ ಪಾವತಿಸಬೇಕು: ಬಾಂಬೆ ಹೈಕೋರ್ಟ್

ತನಗೆ ಭಾರಿ ಆರ್ಥಿಕ ನಷ್ಟವಾಗಿದೆ. ಹೀಗಾಗಿ ಜೀವನಾಂಶ ಪಾವತಿಸಲು ಸಾಧ್ಯವಿಲ್ಲ ಎಂಬ ಪತಿಯ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ.
ವಿಚ್ಛೇದಿತ ಪತ್ನಿಯೊಂದಿಗೆ ಸಹಬಾಳ್ವೆಗೆ ಮುಂದಾದರೂ ಪತಿ ಜೀವನಾಂಶ ಪಾವತಿಸಬೇಕು: ಬಾಂಬೆ ಹೈಕೋರ್ಟ್

ತನ್ನ ವಿಚ್ಛೇದಿತ ಪತ್ನಿಯೊಂದಿಗೆ ಸಹಬಾಳ್ವೆ ನಡೆಸಲು ಸಿದ್ಧನಿರುವುದಾಗಿ ಪತಿ ಹೇಳಿದರೂ ಕೂಡ ಸಿಆರ್‌ಪಿಸಿ ಸೆಕ್ಷನ್ 125ರ ಪ್ರಕಾರ ಹೆಂಡತಿಗೆ ಜೀವನಾಂಶವನ್ನು ಪಾವತಿಸಲು ಅವನು ಹೊಣೆಗಾರ ಎಂದು ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ.

ಹೀಗಾಗಿ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ₹ 18,000 ಪಾವತಿಸಲು ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮನವಿಯನ್ನು ನ್ಯಾ, ಭಾರತಿ ಡಾಂಗ್ರೆ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿತು.

ವ್ಯಭಿಚಾರದಲ್ಲಿ ತೊಡಗಿದ್ದ ಅಥವಾ ಸೂಕ್ತ ಕಾರಣಗಳಿಲ್ಲದೆ ಗಂಡನೊಂದಿಗೆ ಬದುಕಲು ಒಪ್ಪದ ಪತ್ನಿಗೆ ಇಲ್ಲವೇ ದಂಪತಿ ಪರಸ್ಪರ ಸಹಮತದೊಂದಿಗೆ ದೂರ ಉಳಿದಿದ್ದಾಗ ಮಾತ್ರ ಜೀವನಾಂಶ ನೀಡುವಂತಿಲ್ಲ ಎಂಬ ಸಿಆರ್‌ಪಿಸಿ ಸೆಕ್ಷನ್‌ 125 (4) ಕಾಯಿದೆಯನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.

“ಮೇಲಿನ ಅಂಶಗಳನ್ನು ಪತಿ ಸಾಬೀತುಮಾಡದೆ ತಾನು ಸಹಬಾಳ್ವೆಗೆ ಸದಾ ಸಿದ್ಧ ಎಂದಷ್ಟೇ ಹೇಳುತ್ತಿರುವುದರಿಂದ, ವಿನಾಕಾರಣ ಹೆಂಡತಿ ತನ್ನ ಸಾಂಗತ್ಯ ತೊರೆದಿದ್ದಾಳೆ ಎಂದು ನಿರೂಪಿಸುವ ಮೂಲಕ ಜೀವನಾಂಶ ನೀಡುವ ಹೊಣೆಗಾರಿಕೆಯಂದ ತನ್ನನ್ನು ಮುಕ್ತಗೊಳಿಸಿ ಎಂದು ಕೋರಿಕೊಳ್ಳಲು ಆಧಾರವಾಗದು” ಎಂಬುದಾಗಿ ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

Also Read
ಪತ್ನಿಗೆ ಜೀವನಾಂಶ: ವಿಚ್ಛೇದಿತ ಸಹೋದರಿಗಾಗಿ ವ್ಯಕ್ತಿ ಮಾಡುತ್ತಿರುವ ಖರ್ಚನ್ನೂ ಗಮನಿಸಬೇಕು ಎಂದ ದೆಹಲಿ ಹೈಕೋರ್ಟ್

ಪತಿಯ ಮನೆಯಿಂದ ಹೆಂಡತಿ ಹಲವು ಬಾರಿ ಹೊರಹೋಗಿದ್ದು ಆಕೆಯನ್ನು ಕರೆತರಲು ಯತ್ನಿಸಿ ಸೋತಿರುವುದರಿಂದ, ಕೆಳ ನ್ಯಾಯಾಲಯದ ಆದೇಶದಂತೆ ಜೀವನಾಂಶ ನೀಡಲಾರೆ. ತಾನು ಈಗಾಗಲೇ ಆರ್ಥಿಕ ನಷ್ಟ ಅನುಭವಿಸಿದ್ದು ₹15 ಲಕ್ಷ ಸಾಲ ಮಾಡಿಕೊಂಡಿರುವುದರಿಂದ ಅದನ್ನು ಮರುಪಾವತಿಸಬೇಕಿದೆ ಎಂದು ಪತಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮನವಿಯಲ್ಲಿ ತಿಳಿಸಿದ್ದರು. ಇತ್ತ ಪತ್ನಿ ತಾನು ತನ್ನ ಪತಿಯಿಂದ ಮಾನಸಿಕ ಮತ್ತು ದೈಹಿಕ ದೌರ್ಜನ್ಯಕ್ಕೆ ಒಳಗಾಗಿದ್ದರಿಂದ ಗಂಡನ ಮನೆ ತೊರೆದು ತವರಿಗೆ ಮರಳಬೇಕಾಯಿತು ಎಂದು ಹೇಳಿಕೊಂಡಿದ್ದರು.

ಆದರೆ ನ್ಯಾಯಾಲಯ ʼಪತಿ ಆರ್ಥಿಕ ಸಂಕಷ್ಟದಲ್ಲಿದ್ದರೂ ತನ್ನ ಹೆಂಡತಿ ಮತ್ತು ಮಕ್ಕಳನ್ನು ಕಾಪಾಡಿಕೊಳದೇ ಇರಲಾಗದು. ಜೀವನಾಂಶದ ಮೊತ್ತ ಮತ್ತು ಮಕ್ಕಳ ಶೈಕ್ಷಣಿಕ ವೆಚ್ಚಗಳ ಬಗ್ಗೆ ಪತಿ ತನ್ನ ಹೊಣೆಗಾರಿಕೆಯನ್ನು ಪ್ರಶ್ನಿಸದ ಕಾರಣ ತನ್ನನ್ನು ಸ್ವತಃ ಕಾಪಾಡಿಕೊಳ್ಳಲಾಗದು ಪತ್ನಿಯನ್ನು ಕಾಪಾಡಿಕೊಳ್ಳುವುದು ಪತಿಯ ನೈತಿಕ ಮತ್ತು ಕಾನೂನು ಹೊಣೆಗಾರಿಕೆಯಾಗಿದೆ ಎಂದು ತಿಳಿಸಿ ಪತಿಯ ಅರ್ಜಿಯನ್ನು ವಜಾಗೊಳಿಸಿತು.

Kannada Bar & Bench
kannada.barandbench.com