ಜೀವನಾಂಶ ಪ್ರಕರಣದ ವಿಚಾರಣೆ ವೇಳೆ ಗಂಡನ ವೇತನದ ವಿವರ ಕೇಳುವುದು ಗೌಪ್ಯತೆಯ ಉಲ್ಲಂಘನೆಯಾಗದು: ಮಧ್ಯ ಪ್ರದೇಶ ಹೈಕೋರ್ಟ್

ಸಂವಿಧಾನದ 20ನೇ ವಿಧಿಯಡಿ ಪತಿ ರಕ್ಷಣೆ ಕೋರಿದ್ದರು, ಆದರೆ ಆರೋಪಿಯಲ್ಲದ ಕಾರಣ ಅವರಿಗೆ ಇದು ಅನ್ವಯವಾಗದು ಎಂದ ನ್ಯಾಯಾಲಯ ಆ ಮನವಿಯನ್ನೂ ತಿರಸ್ಕರಿಸಿತು.
Madhya Pradesh High Court
Madhya Pradesh High Court
Published on

ಪತಿ ತನ್ನ ಸಂಬಳದ ವಿವರವನ್ನು ಜೀವನಾಂಶ ಕುರಿತ ಪ್ರಕರಣದ ವಿಚಾರಣೆ ವೇಳೆ ಹಾಜರುಪಡಿಸುವಂತೆ ಸೂಚಿಸುವುದು ಸಂವಿಧಾನದ 21ನೇ ವಿಧಿಯಡಿ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚಿಗೆ ಹೇಳಿದೆ [ರಾಶಿ ಗುಪ್ತಾ ಮತ್ತು ಗೌರವ್ ಗುಪ್ತಾ ನಡುವಣ ಪ್ರಕರಣ].

"ಜೀವನಾಂಶ ಪ್ರಕರಣದ ಪರಿಣಾಮಕಾರಿ ತೀರ್ಪು ನೀಡುವುದಕ್ಕಾಗಿ ತನ್ನ ಸಂಬಳದ ದಾಖಲೆ ಸಲ್ಲಿಸಲು ಪತಿಗೆ ಅವಕಾಶ ನೀಡುವುದು ಆತನ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಎನ್ನಲಾಗದು" ಎಂದು ನ್ಯಾಯಮೂರ್ತಿ ಜಿ ಎಸ್‌ ಅಹ್ಲುವಾಲಿಯಾ ಅವರಿದ್ದ ಪೀಠ ಹೇಳಿದೆ.

ಹಾಗೆ ವೇತನದ ವಿವರಗಳನ್ನು ಕೇಳುವುದು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಮೂಲಭೂತ ಹಕ್ಕಿಗೆ ವಿರುದ್ಧ. ಅಲ್ಲದೆ ಸಂವಿಧಾನದ 20ನೇ ವಿಧಿಯಡಿ ತನ್ನ ವಿರುದ್ಧ ತಾನೇ ಸಾಕ್ಷ್ಯಗಳನ್ನು ಒದಗಿಸುವಂತೆ ಯಾರನ್ನೂ ಕೇಳುವಂತಿಲ್ಲ ಎಂದು ಪ್ರಕರಣದ ಪ್ರತಿವಾದಿ ಗೌರವ್‌ ಗುಪ್ತಾ ವಾದಿಸಿದ್ದರು.

ಆದರೆ ಪ್ರತಿವಾದಿ ಗೌರವ್‌ ಆರೋಪಿಯಲ್ಲದ ಕಾರಣ ಅವರಿಗೆ ಇದು ಅನ್ವಯವಾಗದು ಎಂದ ನ್ಯಾಯಾಲಯ ಆ ಮನವಿಯನ್ನೂ ತಿರಸ್ಕರಿಸಿತು. ಸಂಬಳದ ಮಾಹಿತಿ ಕೇಳುವುದು ಗೌಪ್ಯತೆಯ ಉಲ್ಲಂಘನೆಯಾಗದು ಎಂದ ನ್ಯಾಯಾಲಯ ಹಾಗೊಂದು ವೇಳೆ ಮಾಹಿತಿ ನೀಡದಿರುವುದು ಪ್ರತಿಕೂಲ ಕ್ರಮಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿತು.

Kannada Bar & Bench
kannada.barandbench.com