
ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಪರಿಸರಕ್ಕೆ ಹಾನಿ ಹೆಚ್ಚುತ್ತಿರುವುದನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಶುಕ್ರವಾರ ಪ್ರಶ್ನಿಸಿದ್ದು, ಅಭಿವೃದ್ಧಿ ಮತ್ತು ಮಾಲಿನ್ಯದ ನಿಜವಾದ ಮೌಲ್ಯದ ಬಗ್ಗೆ ಸಮಾಜ ಚಿಂತಿಸಬೇಕು ಎಂದಿದ್ದಾರೆ.
ಇಂಟರಾಕ್ಟೀವ್ ಲಾಯರ್ಸ್ ಅಸೋಸಿಯೇಷನ್ ಫಾರ್ ವಿಮೆನ್ ಸಂಘಟನೆ ಬಾಂಬೆ ಹೈಕೋರ್ಟ್‌ನಲ್ಲಿ ಈಚೆಗೆ ಆಯೋಜಿಸಿದ್ದ ಪರಿಸರ ನ್ಯಾಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಣೇಶ ಚತುರ್ಥಿ, ಛತ್ ಪೂಜೆ ಮತ್ತು ನವರಾತ್ರಿಯಂತಹ ಹಬ್ಬಗಳ ಸಮಯದಲ್ಲಿ ವಿಗ್ರಹ ವಿಸರ್ಜನೆಯ ಪದ್ಧತಿಯನ್ನು ಉಲ್ಲೇಖಿಸಿದ ಅವರು "ನಾನು ಧಾರ್ಮಿಕ ವ್ಯಕ್ತಿಯಲ್ಲ, ಆದರೆ ಯಾವುದೇ ಧರ್ಮ ಪರಿಸರಕ್ಕೆ ಹಾನಿ ಮಾಡಲು ನಿಮಗೆ ಅವಕಾಶ ನೀಡುವುದಿಲ್ಲ" ಎಂದರು.
ತಾನು ಯಾವುದೇ ಒಂದು ಧರ್ಮವನ್ನು ಉದ್ದೇಶಿಸಿ ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಆಜಾನ್ಗಾಗಿ ಧ್ವನಿವರ್ಧಕ ಬಳಸುವುದು ಧಾರ್ಮಿಕ ಸ್ವಾತಂತ್ರ್ಯದ ಭಾಗ ಎಂಬ ವಾದಗಳನ್ನು ನ್ಯಾಯಾಲಯಗಳು ತಿರಸ್ಕರಿಸಿವೆ ಎಂಬುದಾಗಿ ನೆನಪಿಸಿದರು.
ನದಿಗಳು ಮತ್ತು ಕಡಲತೀರಗಳನ್ನು ಕಲುಷಿತಗೊಳಿಸುವುದನ್ನು ಧಾರ್ಮಿಕ ಸ್ವಾತಂತ್ರ್ಯವೆಂದು ಸಮರ್ಥಿಸಬಹುದೇ ಎಂದು ನ್ಯಾಯಮೂರ್ತಿ ಓಕಾ ಕೇಳಿದರು, ಭಾರತದ ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಮಾಲಿನ್ಯಗೊಳಿಸುವ ಹಕ್ಕನ್ನು ರಕ್ಷಿಸಲಾಗಿದೆ ಎಂದು ಯಾರೂ ವಾದಿಸಲಾರರು ಎಂದು ನುಡಿದರು.
" ನಾನು ಧಾರ್ಮಿಕ ವ್ಯಕ್ತಿಯಲ್ಲ ಆದರೆ ನಾನು ಯಾವುದೇ (ಧಾರ್ಮಿಕ) ಸಾಹಿತ್ಯವನ್ನು ಪರಿಶೀಲಿಸಿದಾಗಲೂ ಪರಿಸರ ಹಾನಿ ಮಾಡಲು ಯಾವುದೇ ಧರ್ಮ ಅವಕಾಶ ನೀಡುವುದಿಲ್ಲ. ಆದರೆ ಧರ್ಮದ ಹೆಸರಿನಲ್ಲಿ, ನಾವು ಪರಿಸರ ಹಾನಿಗೊಳಿಸುತ್ತಿದ್ದೇವೆ. ಆ ಹಬ್ಬದ (ಕುಂಭಮೇಳ) ಕಾರಣದಿಂದಾಗಿ ಗಂಗಾದಲ್ಲಿ ಏನಾಯಿತು, ಅಲ್ಲಿ ಸ್ನಾನ ಮಾಡಲು ಎಷ್ಟು ಕೋಟಿ ಜನರು ಹೋದರು? ಯಾರಾದರೂ ಪ್ರಶ್ನೆ ಎತ್ತಿ: ನಾವು ನದಿ ನೀರನ್ನು ಕಲುಷಿತಗೊಳಿಸುತ್ತಿಲ್ಲವೇ?..." ಎಂದು ಅವರು ಪ್ರಶ್ನಿಸಿದರು.
ಮಾಲಿನ್ಯ ಮುಕ್ತ ಪರಿಸರದಲ್ಲಿ ವಾಸಿಸುವುದು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕು ಎಂದು ತಮ್ಮ ತೀರ್ಪುಗಳಲ್ಲಿ ದೃಢವಾಗಿ ಹೇಳಿರುವುದಾಗಿ ತಿಳಿಸಿದ ನ್ಯಾಯಮೂರ್ತಿ ಓಕಾ ಪರಿಸರ ನಾಶ ಎಂಬುದು ಗಾಳಿ, ನೀರು ಅಥವಾ ಶಬ್ದ ಮಾಲಿನ್ಯದ ರೂಪದಲ್ಲಿದ್ದರೂ, ಅದು ಈ ಹಕ್ಕನ್ನು ನೇರವಾಗಿ ಉಲ್ಲಂಘಿಸುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪರಿಸರ ಪ್ರಕರಣಗಳಲ್ಲಿ ಮಹಿಳಾ ವಕೀಲರು ವಹಿಸಿದ ಮಹತ್ವದ ಪಾತ್ರವನ್ನು ಅವರು ಶ್ಲಾಘಿಸಿದರು. ತಾನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ, ಎಂಸಿ ಮೆಹ್ತಾ ಮಾಲಿನ್ಯ ಸಂಬಂಧಿತ ಪ್ರಕರಣದಲ್ಲಿ ಹಿರಿಯ ವಕೀಲೆ ಅಪರಾಜಿತಾ ಸಿಂಗ್, ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಮತ್ತು ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಸೇರಿದಂತೆ ಮಹಿಳಾ ನ್ಯಾಯವಾದಿಗಳು ಪ್ರಮುಖ ವಾದಗಳನ್ನು ಮುನ್ನಡೆಸಿದ್ದನ್ನು ಅವರು ಇದೇ ವೇಳೆ ಸ್ಮರಿಸಿದರು
ಅಭಿವೃದ್ಧುತ ವ್ಯಾಖ್ಯಾನವನ್ನು ಪ್ರಸ್ತಾಪಿಸಿದ ಅವರು ಗೋಪುರಗಳು, ರಸ್ತೆ ಮತ್ತು ಸೇತುವೆಗಳ ನಿರ್ಮಾಣವಷ್ಟೇ ಅರ್ಥಪೂರಣ ಪ್ರಗತಿ ಎನಿಸಿಕೊಳ್ಳುವುದಿಲ್ಲ ಎಂದು ಹೇಳಿದರು.