ʼಸಿಜೆ ಅವರ ಕಾರಿನ ಮೇಲೆ ಚಲಿಸುವ ಉದ್ಯಾನ ನಿರ್ಮಿಸಿದರೆ…ʼ ಎಂಬ ಕೋರಿಕೆ ಇಟ್ಟ ಅರ್ಜಿದಾರ; ಮನವಿ ವಜಾ ಮಾಡಿದ ಹೈಕೋರ್ಟ್‌

ಬೆಂಗಳೂರು ದೆಹಲಿಯಂತಾಗಬಾರದು. ಗೌರವಾನ್ವಿತ ನ್ಯಾಯಮೂರ್ತಿಗಳು ತಮ್ಮ ಕಾರಿನ ಮೇಲೆ ಚಲಿಸುವ ಉದ್ಯಾನ ಅಳವಡಿಸಿಕೊಂಡರೆ ಆರು ತಿಂಗಳಲ್ಲಿ ಕನಿಷ್ಠ 10 ಸಾವಿರ ಕಾರುಗಳಲ್ಲಿ ಅದನ್ನು ನಾವು ಕಾಣುತ್ತೇವೆ ಎಂದು ಪಾರ್ಟಿ ಇನ್‌ ಪರ್ಸನ್‌ ವಕೀಲರಿಂದ ಮನವಿ.
Car Garden
Car GardenImage: The Indian Express

“ಗೌರವಾನ್ವಿತ ನ್ಯಾಯಮೂರ್ತಿಗಳು ತಮ್ಮ ಕಾರಿನ ಮೇಲೆ ಚಲಿಸುವ ಉದ್ಯಾನ (ಮೂವಿಂಗ್‌ ಗಾರ್ಡನ್‌) ನಿರ್ಮಿಸಿದರೆ ಆರು ತಿಂಗಳಲ್ಲಿ ಕನಿಷ್ಠ 10 ಸಾವಿರ ಕಾರುಗಳಲ್ಲಿ ಅದನ್ನು ನಾವು ಕಾಣುತ್ತೇವೆ” ಎಂದು ವಿಶಿಷ್ಟ ಕೋರಿಕೆಯನ್ನು ಅರ್ಜಿದಾರರೊಬ್ಬರು ಮಂಗಳವಾರ ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ಪೀಠದ ಮುಂದೆ ಇಟ್ಟರು.

ವಾಹನಗಳಲ್ಲಿ ಉದ್ಯಾನ ನಿರ್ಮಿಸುವ ಸಂಬಂಧ ಸಮೀಕ್ಷೆ ನಡೆಸಿ, ಅದಕ್ಕೆ ಪೂರಕವಾಗಿ ಯೋಜನೆ ರೂಪಿಸಿ, ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಕಬ್ಬನ್‌ ಪೇಟೆಯ ವಕೀಲ ಕೆ ಸುರೇಶ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ನಿಮ್ಮ ಕಾರಿನ ಮೇಲೆ ಉದ್ಯಾನ ನಿರ್ಮಿಸುವ ಮೂಲಕ ಪರಿಸರ ಸಂರಕ್ಷಣೆ ಉದ್ದೇಶ ಸರಿಯಾಗಿದೆ. ಅದನ್ನು ಮೆಚ್ಚಬೇಕು. ಎಲ್ಲರೂ ನಿಮ್ಮನ್ನು ಪಾಲಿಸಲು ಯೋಜನೆ ಹೇಗೆ ರೂಪಿಸಲಾಗುತ್ತದೆ? ಕಾರಿನಲ್ಲಿ ಎಲ್ಲರೂ ಚಲಿಸುವ ಉದ್ಯಾನ ಹೊಂದಬೇಕು ಎಂದು ನಿರ್ದೇಶಿಸಲಾಗದು. ವಾಹನದಲ್ಲಿ ಚಲಿಸುವ ಉದ್ಯಾನ ಮಾಡಬೇಕೆ ಅಥವಾ ಬೇಡವೇ ಎಂಬುದು ಪ್ರತಿಯೊಬ್ಬರ ಆಯ್ಕೆಯಾಗಿರುತ್ತದೆ. ನಿಮ್ಮ ಐಡಿಯಾವನ್ನು ಮತ್ತೊಬ್ಬರು ಪಾಲಿಸಬೇಕು ಎಂದು ನಾವು ಆದೇಶಿಸಲಾಗದು. ಚಲಿಸುವ ಉದ್ಯಾನಕ್ಕೆ ಸಂಬಂಧಿಸಿದ ಸಮೀಕ್ಷೆಗೆ ನಾವು ಒಪ್ಪಲಾಗದು. ಅದು ಜನರ ಆಯ್ಕೆ. ಚಲಿಸುವ ಉದ್ಯಾನ ಕೆಲವರಿಗೆ ಇಷ್ಟವಾದರೆ, ಮತ್ತೊಬ್ಬರಿಗೆ ಇಷ್ಟವಾಗದಿರಬಹುದು. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ, ಅದಕ್ಕೆ ಪ್ರಚಾರ ಮತ್ತಿತರರ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಪೀಠವು ಮೌಖಿಕವಾಗಿ ಹೇಳಿತು.

ಪಾರ್ಟಿ ಇನ್‌ ಪರ್ಸ್‌ನ್‌ ರೂಪದಲ್ಲಿ ವಾದ ಮಂಡಿಸಿದ ಸುರೇಶ್‌ ಅವರು “ಸರ್ಕಾರವು ನಿಯಮ ಮಾಡಿದ ನಂತರ ಜನರು ಇಂಗು ಗುಂಡಿಗಳನ್ನು ನಿರ್ಮಿಸುತ್ತಿದ್ದಾರೆ. ಇದರಿಂದ ಮಿಲಿಯನ್‌ಗಟ್ಟಲೇ ನೀರು ಭೂಮಿ ಸೇರುತ್ತಿದೆ. ಇದೇ ರೀತಿ ಚಲಿಸುವ ಉದ್ಯಾನದ ವಿಷಯದಲ್ಲಿಯೂ ಮಾಡಬಹುದು. 2019ರಲ್ಲಿ ನನ್ನ ಕಾರಿನಲ್ಲಿ ಉದ್ಯಾನ ನಿರ್ಮಿಸಿದೆ. ಪ್ರತಿದಿನ ಎಲ್ಲರೂ ಮೆಚ್ಚುಗೆ ಸೂಚಿಸುತ್ತಾರೆ. ನಾನು ಸಾಮಾನ್ಯ ವ್ಯಕ್ತಿಯಾಗಿರುವುದರಿಂದ ಯಾರೂ ಅದನ್ನು ಅಳವಡಿಸಿಕೊಳ್ಳುತ್ತಿಲ್ಲ. ಈ ಸಂಬಂಧ ಪ್ರಧಾನ ಮಂತ್ರಿಗೂ ಪತ್ರ ಬರೆದಿದ್ದೇನೆ” ಎಂದರು.

ಮುಂದುವರಿದು, “ಪ್ರತಿವಾದಿಗಳು ಸಮೀಕ್ಷೆ ನಡೆಸಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಆದೇಶಿಸಬೇಕು. ಆನಂತರ ಅದನ್ನು ಜನರಿಗೆ ತಿಳಿಸಬಹುದು. ಚಲಿಸುವ ವಾಹನದಲ್ಲಿನ ಉದ್ಯಾನವು ಹಸಿರು ಕ್ರಾಂತಿಯನ್ನು ಒಳಗೊಂಡಿದೆ. ಇದು ಜನ ಸಮೂಹಕ್ಕೆ ಅನುಕೂಲಕಾರಿಯಾಗಿದೆ. ತಮ್ಮ (ಸಿಜೆ) ಕಾರಿನಲ್ಲಿ ಚಲಿಸುವ ಉದ್ಯಾನ ಅಳವಡಿಸಿಕೊಳ್ಳುವಂತೆ ಪ್ರಧಾನಿಗೆ ಕೋರಿದ್ದೇನೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅವರನ್ನು ಅನುಸರಿಸುತ್ತಾರೆ ಎಂಬುದಾಗಿದೆ. ಲಕ್ಷಾಂತರ ರೂಪಾಯಿಯನ್ನು ಕಾರುಗಳಿಗೆ ಹೂಡಿಕೆ ಮಾಡುವಾಗ ಇಂಥ ಪ್ರಯತ್ನವನ್ನು ಸಮಾಜದಲ್ಲಿ ಮಹತ್ತರ ಸ್ಥಾನದಲ್ಲಿರುವವರು ಮಾಡಿದರೆ ಜನರು ಅದನ್ನು ಪಾಲಿಸುತ್ತಾರೆ” ಎಂದರು.

ಇದಕ್ಕೆ ಪೀಠವು “ನೀವು ಸಾಮಾನ್ಯ ವ್ಯಕ್ತಿಯಾಗಿರುವುದರಿಂದ ಜನರು ನಿಮ್ಮನ್ನು ಅನುಸರಿಸುತ್ತಿಲ್ಲ ಎಂಬುದು ಸರಿಯಲ್ಲ. ಇದು ಪ್ರತಿಯೊಬ್ಬ ವ್ಯಕ್ತಿಯ ಆಯ್ಕೆಗೆ ಸಂಬಂಧಿಸಿದ್ದಾಗಿದೆ. ಇದನ್ನು ಭೂಮಿಯಲ್ಲಿ ನೀರು ಇಂಗಿಸುವುದಕ್ಕೆ ಹೋಲಿಕೆ ಮಾಡಲಾಗದು” ಎಂದಿತು.

ಇದಕ್ಕೆ ಸಮಜಾಯಿಷಿ ನೀಡಲು ಮುಂದಾದ ಸುರೇಶ್‌ ಅವರು “10 ಕೆಜಿಯ ಆಮ್ಲಜನಕ ಸಿಲಿಂಡರ್‌ಗೆ ಎರಡು ಸಾವಿರ ರೂಪಾಯಿಯಾಗುತ್ತದೆ. ವಾಹನದ ಮೇಲಿನ ಸಣ್ಣ ಉದ್ಯಾನವು ಹತ್ತರ ಒಂದನೇ ಭಾಗದಷ್ಟು ಆಮ್ಲಜನಕ ಉತ್ಪಾದಿಸಿದರೂ ಇದು ಪ್ರತಿ ದಿನ ಎರಡು ನೂರು ರೂಪಾಯಿ ಬೆಲೆಯಾಗುತ್ತದೆ. ಇದು ಒಂದು ತಿಂಗಳಿಗೆ 3,600 ರೂಪಾಯಿಯಾಗುತ್ತದೆ. ಒಂದು ವರ್ಷಕ್ಕೆ 72 ಸಾವಿರ ರೂಪಾಯಿ ಆಗುತ್ತದೆ. ಪ್ರತಿವಾದಿಗಳು ಈ ಕುರಿತು ಸಮೀಕ್ಷೆ ನಡೆಸಲಿ. ಜನರಿಗೆ ಅರಿವು ಮೂಡಿಸಲು ಈ ರೀತಿ ಮಾಡುವಂತೆ ಕೋರುತ್ತಿದ್ದೇನೆ. ಬೆಂಗಳೂರು ದೆಹಲಿಯಾಗುವುದು ನನಗೆ ಇಷ್ಟವಿಲ್ಲ. ಗೌರವಾನ್ವಿತ ನ್ಯಾಯಮೂರ್ತಿಗಳು ತಮ್ಮ ಕಾರಿನ ಮೇಲೆ ಚಲಿಸುವ ಉದ್ಯಾನ ಅಳವಡಿಸಿಕೊಂಡರೆ ಆರು ತಿಂಗಳಲ್ಲಿ ಕನಿಷ್ಠ 10 ಸಾವಿರ ಕಾರುಗಳಲ್ಲಿ ಅದನ್ನು ನಾವು ಕಾಣುತ್ತೇವೆ” ಎಂದರು.

ಅಲ್ಲದೇ, “2018ರ ಫೆಬ್ರವರಿ 2ರಿಂದ ನಾನು ಕಾರಿನ ಮೇಲೆ ಉದ್ಯಾನ ನಿರ್ಮಿಸಿದೆ. ಎಲ್ಲರೂ ನನ್ನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸುತ್ತಾರೆ. ಆದರೆ ಅದನ್ನು ಯಾರೂ ಪಾಲಿಸುವುದಿಲ್ಲ. 43 ವರ್ಷ ವಕೀಲನಾಗಿ ಕೆಲಸ ಮಾಡಿದ್ದೇನೆ. ಪರಿಸರ ಸಂರಕ್ಷಣೆ ಮಾಡುವ ವಿಚಾರದಲ್ಲಿ ನ್ಯಾಯಾಲಯಗಳು ಮುಂಚೂಣಿಯಲ್ಲಿವೆ. ಹೀಗಾಗಿ, ನ್ಯಾಯಾಲಯ ಸಂಪರ್ಕಿಸುವುದು ಅತ್ಯಂತ ಪರಿಣಾಮಕಾರಿ ವಿಧಾನ ಎಂದು ನಾನು ಭಾವಿಸಿದ್ದೇನೆ.” ಎಂದೂ ಪೀಠಕ್ಕೆ ವಿವರಿಸಿದರು.

ಆಗ ನ್ಯಾಯಾಲಯವು “ಇದು ವೈಯಕ್ತಿಕ ಆಯ್ಕೆ. ಈ ಅಭಿಯಾನವನ್ನು ನೀವು ವಿಭಿನ್ನ ರೀತಿಯಲ್ಲಿ ಮಾಡಿ. ಇದಕ್ಕೆ ಸಾಕಷ್ಟು ವಿಧಾನಗಳು ಲಭ್ಯವಿದೆ. ಈ ಮೂಲಕ ಹೆಚ್ಚು ಜನರನ್ನು ನೀವು ತಲುಪಬಹುದು” ಎಂದಿತು.

ಅಂತಿಮವಾಗಿ ಪೀಠವು “ತಮ್ಮ ವಾಹನದ ಮೇಲೆ ಪಾರ್ಟಿ ಇನ್‌ ಪರ್ಸನ್‌ ಅವರು ಚಲಿಸುವ ಉದ್ಯಾನ ನಿರ್ಮಿಸಿದ್ದಾರೆ. ಇದರಿಂದ ಆಮ್ಲಜನಕದ ಪ್ರಮಾಣ ಹೆಚ್ಚಲಿದ್ದು, ಪರಿಸರ ಸಂರಕ್ಷಣೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಹಲವು ಪ್ರಾಧಿಕಾರಗಳಿಗೆ ಮನವಿ ಮಾಡಿದ್ದಾರೆ. ಚಲಿಸುವ ಉದ್ಯಾನಕ್ಕೆ ಸಂಬಂಧಿಸಿದಂತೆ ಸರ್ವೆ ನಡೆಸಬೇಕು. ಈ ಕುರಿತು ಯೋಜನೆ ರೂಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಇದರಿಂದ ಪರಿಸರ ಸಂರಕ್ಷಣೆಗೆ ಅನುಕೂಲವಾಗಲಿದೆ ಎಂದು ಕೋರಿದ್ದಾರೆ. ವ್ಯಕ್ತಿಗತವಾಗಿ ಅರ್ಜಿದಾರರ ಪ್ರಯತ್ನ ಶ್ಲಾಘನೀಯ. ಅರ್ಜಿದಾರರ ವಾದವು ಆಕರ್ಷಣೀಯವಾಗಿದ್ದರೂ ತಮ್ಮ ವಾಹನವನ್ನು ಹೇಗೆ ಬಳಕೆ ಮಾಡಬೇಕು ಎಂಬುದು ಅದರ ಮಾಲೀಕರ ವೈಯಕ್ತಿಕ ಆಯ್ಕೆಯಾಗಿರುತ್ತದೆ. ಸಮೀಕ್ಷೆ ನಡೆಸಿ, ಯೋಜನೆ ರೂಪಿಸಿ ಅದನ್ನು ಕಾರ್ಯಗತ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವುದು ವ್ಯಕ್ತಿಯ ಆಯ್ಕೆ ಕಸಿದುಕೊಳ್ಳುವುದಾಗಿದೆ" ಎಂದು ಪೀಠ ಹೇಳಿತು.

ಮುಂದುವರೆದು, " ವ್ಯಕ್ತಿಯ ವಾಹನವನ್ನು ಓಡಾಟಕ್ಕೆ ಹೊರತುಪಡಿಸಿ ಬೇರಾವುದಕ್ಕೂ ಬಳಸಬಾರದು. ಅದರಲ್ಲಿಯೂ ಕಡ್ಡಾಯವಾಗಿ ಚಲಿಸುವ ಉದ್ಯಾನ ಮಾಡಬೇಕು ಎಂಬುದು ವೈಯಕ್ತಿಕ ಹಕ್ಕನ್ನು ಕಸಿದಂತಾಗುತ್ತದೆ. ಅಲ್ಲದೇ, ವಾಹನದಲ್ಲಿ ಬದಲಾವಣೆ ಮಾಡುವುದು ಮೋಟಾರು ವಾಹನ ಕಾಯಿದೆ/ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ, ಅರ್ಜಿದಾರರ ಕೋರಿಕೆಯನ್ನು ಪರಿಗಣಿಸಲಾಗದು” ಎಂದು ಆದೇಶದಲ್ಲಿ ಉಲ್ಲೇಖಿಸಿ, ಅರ್ಜಿಯನ್ನು ವಜಾ ಮಾಡಿತು.

Related Stories

No stories found.
Kannada Bar & Bench
kannada.barandbench.com