ಇಂದು ನಾವು ಏನಾಗಿದ್ದೇವೋ ಅದಕ್ಕೆ ಅಂಬೇಡ್ಕರ್‌ ಅವರ ದೂರದೃಷ್ಟಿ ಕಾರಣ: ಸಂವಿಧಾನ ಶಿಲ್ಪಿಗೆ ಸಿಜೆಐ ನಮನ

1956ರ ಡಿಸೆಂಬರ್‌ 6 ರಂದು ನಿಧನರಾದ ಡಾ ಬಿ ಆರ್ ಅಂಬೇಡ್ಕರ್ ಅವರ ಪುಣ್ಯ ಸ್ಮರಣೆಯನ್ನು ಮಹಾಪರಿನಿರ್ವಾಣ ದಿವಸವನ್ನಾಗಿ ಆಚರಿಸಲಾಗುತ್ತದೆ.
CJI DY Chandrachud
CJI DY Chandrachud
Published on

ಡಾ ಭೀಮ್ ರಾವ್ ಅಂಬೇಡ್ಕರ್ ಅವರ ಪುಣ್ಯತಿಥಿ ಅಂಗವಾಗಿ ಮಂಗಳವಾರ ಅವರಿಗೆ ಪುಷ್ಪನಮನ ಸಲ್ಲಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಸಂವಿಧಾನ ಶಿಲ್ಪಿಯ ದೂರದೃಷ್ಟಿಯನ್ನು ಬಣ್ಣಿಸಿದರು.

ನ್ಯಾಯಾಲಯ ಕಲಾಪ ಆರಂಭಕ್ಕೂ  ಮುನ್ನ  ಸುಪ್ರೀಂ ಕೋರ್ಟ್‌ನ ಗ್ರಂಥಾಲಯದಲ್ಲಿ ಡಾ ಅಂಬೇಡ್ಕರ್ ಅವರಿಗೆ ಸಿಜೆಐ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು "ನನಗೆ ಈ ಹೊತ್ತು ಇಲ್ಲಿರುವುದಕ್ಕೆ ತುಂಬಾ ಸಂತೋಷವಾಗಿದೆ. ವೈಯಕ್ತಿಕವಾಗಿ, ನಮ್ಮ ಸಂವಿಧಾನದ ಶಿಲ್ಪಿ ಡಾ. ಅಂಬೇಡ್ಕರ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನಾವು ಇಂದು ಏನಾಗಿದ್ದೇವೋ ಅದು ಅವರ ದೂರದೃಷ್ಟಿಯಿಂದಾಗಿ ಸಾಧ್ಯವಾಗಿದೆ" ಎಂದರು.

1956ರಲ್ಲಿ ನಿಧನರಾದ ಡಾ ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿ ಅಥವಾ ಮಹಾಪರಿನಿರ್ವಾಣ ದಿವಸವನ್ನು ಡಿಸೆಂಬರ್ 6ರಂದು ಆಚರಿಸಲಾಗುತ್ತದೆ.

Also Read
[ಅಂಬೇಡ್ಕರ್‌ ವಿವಾದ] ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ವರ್ಗಾವಣೆ

ಕಳೆದ ವರ್ಷ, ತಮ್ಮ ತಂದೆ ಮತ್ತು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ದಿವಂಗತ ವೈ ವಿ ಚಂದ್ರಚೂಡ್ ಅವರ 101ನೇ ಜನ್ಮದಿನಾಚರಣೆ ವೇಳೆ ಮಾತನಾಡಿದ್ದ  ಸಿಜೆಐ "ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಶಿಕ್ಷಣವನ್ನು ಕೇವಲ ತಮ್ಮ ಸ್ವ-ಅಭಿವೃದ್ಧಿಗಾಗಿ ಬಳಸದೆ ಭಾರತೀಯ ಸಂವಿಧಾನವನ್ನು ರೂಪಿಸುವಲ್ಲಿ ಬಳಸಿದರು" ಎಂದಿದ್ದರು.

ಡಾ ಅಂಬೇಡ್ಕರ್ ಅವರು ಮಹರ್ ಜಾತಿಯಿಂದ ಬಂದವರು. ಕಠೋರ ಜಾತಿ ವ್ಯವಸ್ಥೆಯ ಕಾರಣದಿಂದಾಗಿ ಅಸ್ಪೃಶ್ಯ ದಲಿತ ಜಾತಿಗೆ ಸೇರಿದ ಪರಿಣಾಮ ಅವರು ಪ್ರಾಥಮಿಕ ಶಿಕ್ಷಣ ಪ್ರವೇಶಕ್ಕೂ ಹೆಣಗಾಡಬೇಕಾಯಿತು.

"ಶಾಲಾ ಶಿಕ್ಷಣದ ಅವರ ಪ್ರಮುಖ ನೆನಪುಗಳು ಅಪಮಾನ ಮತ್ತು ಪ್ರತ್ಯೇಕತೆಯಿಂದ ತುಂಬಿದ್ದವು, ಅಲ್ಲಿ ಅವರು ತರಗತಿಯ ಹೊರಗೆ ಕುಳಿತು ಪಾಠ ಕೇಳಬೇಕಿತ್ತು. ಮೇಲ್ಜಾತಿ ವಿದ್ಯಾರ್ಥಿಗಳಿಗೆ ಸೇರಿದ ನೀರು ಅಥವಾ ಪುಸ್ತಕವನ್ನು ಮುಟ್ಟುವಂತಿರಲಿಲ್ಲ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಆ ಭಾಷಣದಲ್ಲಿ ಸಂವಿಧಾನ ಶಿಲ್ಪಿ ಸಾಗಿ ಬಂದ ಹಾದಿಯನ್ನು ನೆನೆದಿದ್ದರು.

ಇಷ್ಟೆಲ್ಲಾ ಸಂಕಷ್ಟಗಳ ನಡುವೆಯೇ ಅಗಾಧ ಪರಿಶ್ರಮದಿಂದ ಅರಳಿದ ಡಾ. ಅಂಬೇಡ್ಕರ್‌ ಅವರು ಮುಂದೆ 26 ಪದವಿಗಳನ್ನು ಪಡೆದು ತಮ್ಮ ಪೀಳಿಗೆಯ ಅತ್ಯಂತ ಉನ್ನತ ಶಿಕ್ಷಣ ಪಡೆದ ಭಾರತೀಯರಲ್ಲಿ ಒಬ್ಬರೆನಿಸಿಕೊಂಡದ್ದು ಇತಿಹಾಸ.

Kannada Bar & Bench
kannada.barandbench.com