ಋತುಸ್ರಾವದ ಸಂದರ್ಭದಲ್ಲಿ ಮಹಿಳಾ ಕಾನೂನು ಗುಮಾಸ್ತರಿಗೆ ಮನೆಯಿಂದ ಕೆಲಸ ಮಾಡಲು ನಾನು ಅನುಮತಿಸುವೆ: ಸಿಜೆಐ ಚಂದ್ರಚೂಡ್‌

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್‌ಎಲ್‌ಎಸ್‌ಐಯು) ಶನಿವಾರ ನಡೆದ 31ನೇ ಘಟಿಕೋತ್ಸವ ಸಮಾರಂಭದಲ್ಲಿ ಸಿಜೆಐ ಮಾತನಾಡಿದರು.
Chief Justic of India DY Chandrachud
Chief Justic of India DY Chandrachud

ಕೆಲಸದ ಪರಿಸರವನ್ನು ಹೆಚ್ಚು ಮಹಿಳಾ ಸ್ನೇಹಿಯಾಗಿಸುವ ಕುರಿತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ಶನಿವಾರ ಬೆಳಕು ಚೆಲ್ಲಿದರು.

ಋತುಸ್ರಾವ ಸಂಬಂಧಿ ನೋವು ಎದುರಿಸುವ ಸಂದರ್ಭದಲ್ಲಿ ಮಹಿಳಾ ಕಾನೂನು ಗುಮಾಸ್ತರಿಗೆ (ಲಾ ಕ್ಲರ್ಕ್ಸ್‌) ಮನೆಯಿಂದಲೇ ಕೆಲಸ ಮಾಡಲು ತಾವು ಅನುಮತಿಸುವ ಬಗ್ಗೆ ಅವರು ಇದೇ ವೇಳೆ ವಿವರಿಸಿದರು.

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್‌ಎಲ್‌ಎಸ್‌ಐಯು) ಶನಿವಾರ ನಡೆದ 31ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

“ಕಳೆದ ವರ್ಷ ನನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಐವರು ಕಾನೂನು ಗುಮಾಸ್ತರ ಪೈಕಿ ನಾಲ್ವರು ಮಹಿಳೆಯರಾಗಿದ್ದರು. ಅವರು ಸಾಮಾನ್ಯವಾಗಿ ನನಗೆ ಕರೆ ಮಾಡಿ ಸರ್‌ ನಾನು ಋತುಸ್ರಾವದ ನೋವಿಗೆ ಒಳಗಾಗಿದ್ದೇನೆ ಎಂದು ಹೇಳುತ್ತಿದ್ದರು. ಆಗ ನಾನು ಅವರಿಗೆ ದಯವಿಟ್ಟು ಮನೆಯಿಂದಲೇ ಕೆಲಸ ಮಾಡಿ, ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ ಎಂದು ಹೇಳುತ್ತಿದ್ದೆ. ನಾವು ಸುಪ್ರೀಂ ಕೋರ್ಟ್‌ನ ಶೌಚಾಲಯಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಲಭ್ಯವಾಗುವಂತೆ ಮಾಡಿದ್ದೇವೆ” ಎಂದು ಮಹಿಳಾ ಸ್ನೇಹಿ ವಾತಾವರಣದ ಬಗ್ಗೆ ವಿವರಿಸಿದರು.

“ಜೀವನ ಸುದೀರ್ಘವಾಗಿದ್ದು, ಕೆಲವು ವರ್ಷ ಸಾಧ್ಯತೆಗಳನ್ನು ಹುಡುಕುವುದು ಮತ್ತು ಕಾನೂನಿನ ವಿಸ್ಮಯವನ್ನು ಅನುಭವಿಸುವುದರಿಂದ ಯಾವುದೇ ಅನನಕೂಲವಾಗುವುದಿಲ್ಲ. ಪ್ರತಿಯೊಂದು ಉದ್ಯೋಗವೂ ಕೌಶಲ ಕಲಿಸಲಿದ್ದು, ಇದನ್ನು ಇನ್ನೊಂದು ಕೆಲಸಕ್ಕೆ ವರ್ಗಾಯಿಸಬಹುದು. ಜಗತ್ತಿನಲ್ಲಿ ಏನನ್ನು ಬಿಟ್ಟು ಹೋಗುತ್ತೀರಿ ಎಂದು ಕೇಳಿಕೊಳ್ಳಿ, ಅದು ತುಸು ಉತ್ತಮವಾದುದ್ದಾಗಿರಬಹುದು” ಎಂದರು.

“ನಿಮಗೆ ಸಿಗುವ ಪಾತ್ರವನ್ನು ಹೃದಯಪೂರ್ವಕವಾಗಿ ಅಪ್ಪಿಕೊಳ್ಳಿ. ವರ್ತಮಾನದಲ್ಲಿ ಬದುಕಬೇಕು, ನಿಮಗೆ ಬೇಸರವಾದರೆ ಇನ್ನೊಂದು ಉದ್ಯೋಗವನ್ನು ಯಾವಾಗಲೂ ಹುಡುಕಿಕೊಳ್ಳುವ ಅವಕಾಶ ಇದ್ದೇ ಇರುತ್ತದೆ” ಎಂದರು.

ತಮ್ಮ ಭಾಷಣದಲ್ಲಿ ಯುವಪೀಳಿಗೆಯ ಸಂಕೇತಾಕ್ಷರಗಳ ಭಾಷೆಯನ್ನೂ ನವಿರಾಗಿ ಬಳಸಿದ ಸಿಜೆಐ, “ಇಂದಿನ ಪೀಳಿಗೆ ಯಾವುದಾದರೂ ವಿಚಾರ ಮುಕ್ತಾಯದ ಹಂತಕ್ಕೆ ಬಂದರೆ ಅದನ್ನು ಒಂದು ಕೊನೆಯ ಬಾರಿ (ಓಎಲ್‌ಟಿ- ಒನ್‌ ಲಾಸ್ಟ್‌ ಟೈಮ್‌) ಎನ್ನುತ್ತಾರೆ. ನೋಡಿ, ನಿಮಗೆ ಹಲವು ಮೊದಲುಗಳು (ಎಫ್‌ಟಿ-ಫಸ್ಟ್‌ ಟೈಮ್‌) ಇರಲಿವೆ. ಮೊದಲ ಬಾರಿಗೆ ನೀವು ದಾವೆದಾರರ ಜೊತೆ ಮಾತನಾಡುತ್ತೀರಿ, ಮೊದಲ ಬಾರಿಗೆ ಪೀಠದ ಮುಂದೆ ಹಾಜರಾಗುತ್ತೀರಿ, ಮೊದಲ ವೇತನ ಪಡೆಯುತ್ತೀರಿ, ಮೊದಲ ಟೀಕೆಗಳನ್ನು ಎದುರಿಸುತ್ತೀರಿ, ನಿಮ್ಮ ಒಎಲ್‌ಟಿಗಳಿಗಳಷ್ಟೇ ಎಫ್‌ಟಿಗಳು ಕೂಡ ಸ್ಮರಣೀಯವಾಗಿರಲಿ” ಎಂದು ಸಿಜೆಐ ಲಘು ದಾಟಿಯಲ್ಲಿ ಹೇಳಿದರು.

ನಡೆದು ಬಂದ ಹಾದಿಗೆ ಕೃತಜ್ಞರಾಗಿರುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಸಿಜೆಐ “ಮೇಲ್ಮಟ್ಟಕ್ಕೆ ಹೋದಂತೆ ಜೀವನದ ಹಾದಿಯಲ್ಲಿ ನೀವು ಹತ್ತಿದ ಏಣಿಯನ್ನು ಒದೆಯಬೇಡಿ” ಎಂದರು. ಸಿಜೆಐ ಭಾಷಣದ ಪ್ರಮುಖ ಅಂಶಗಳು ಇಂತಿವೆ.

  • ವಕೀಲೆಯಾಗಿದ್ದ ನನ್ನ ದಿವಂಗತ ಪತ್ನಿಯು ಕಾನೂನು ಸಂಸ್ಥೆಗೆ (ಲಾ ಚೇಂಬರ್‌) ಹೋದಾಗ ಕೆಲಸದ ಸಮಯ ಎಷ್ಟು ಎಂದು ಕೇಳಿದ್ದರಂತೆ. ಅದಕ್ಕೆ ಆಕೆಗೆ ದಿನದ ಇಪ್ಪತ್ತನಾಲ್ಕು ತಾಸು ಮತ್ತು 365 ದಿನಗಳು ಎಂಬ ಉತ್ತರ ಸಿಕ್ಕಿತ್ತಂತೆ. ಅದಕ್ಕೆ ಆಕೆ ಕುಟುಂಬ ಇರುವವರ ಪಾಡೇನು ಎಂದು ಕೇಳಿದ್ದರಂತೆ. ಇದಕ್ಕೆ ಆಕೆಗೆ ಮನೆಕೆಲಸ ಮಾಡುವ ಪತಿಯನ್ನು ಹುಡುಕಿಕೊಳ್ಳಿ, ಆಗ ಕುಟುಂಬದ ಸಮಯ ಎಂಬುದು ಇರುವುದಿಲ್ಲ ಎಂಬ ಉತ್ತರ ಸಿಕ್ಕಿತ್ತು ಎಂದು ನೆನೆಪಿಸಿಕೊಂಡರು.

  • ಒಳ್ಳೆಯ ವ್ಯಕ್ತಿಯೋ ಅಥವಾ ಒಳ್ಳೆಯ ವಕೀಲನೋ ಎಂಬ ಸಂದರ್ಭ ಎದುರಾದರೆ ಒಳ್ಳೆಯ ವ್ಯಕ್ತಿಯಾಗಿ ನೀವು ಇರಬೇಕು ಎಂದು ನಾನು ಬಯಸುತ್ತೇನೆ. ಯಶಸ್ವಿಯಾಗುವುದೆಂದರೆ ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಬೇಕಾಗುತ್ತದೆ ಅಥವಾ ಅನ್ಯಾಯದ ವಿರುದ್ಧ ತಾತ್ಸಾರದಿಂದ ಇರಬೇಕಾಗುತ್ತದೆ. ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಅರಿಯಿರಿ.

  • ಕಾನೂನು ವೃತ್ತಿಯ ಒಂದು ಸಮಸ್ಯೆ ಏನೆಂದರೆ ಪ್ರತಿಕೂಲ ಅವಧಿ. ಇದರ ಬಗ್ಗೆ ಅವರು ಹೆಮ್ಮೆಪಡುತ್ತಾರೆ, ಇದು ಒತ್ತಡವನ್ನು ಉಂಟು ಮಾಡುತ್ತದೆ. ಸುದೀರ್ಘ ರಾತ್ರಿಗಳು, ಅತಿಯಾದ ಕೆಲಸ, ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ… ದೀರ್ಘಾವಧಿಯಲ್ಲಿ ಮಾನಸಿಕ ಆರೋಗ್ಯವು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಬೇರೆಯದೆಲ್ಲವನ್ನೂ ಬಲಿಕೊಟ್ಟು ಶ್ರೇಷ್ಠತೆಯ ಹೆಚ್ಚುಗಾರಿಕೆಯನ್ನು ವಿಜೃಂಭಿಸುವ ವ್ಯವಸ್ಥೆಯನ್ನು ನಾವು ರೂಪಿಸಿಕೊಂಡಿದ್ದೇವೆ ಎಂದಿದ್ದಾರೆ

Related Stories

No stories found.
Kannada Bar & Bench
kannada.barandbench.com