

ತಾನು ಯಾವುದೇ ಧರ್ಮವನ್ನು ಆಳವಾಗಿ ಅಧ್ಯಯನ ಮಾಡದಿದ್ದರೂ ಬೌದ್ಧಧರ್ಮದ ಅನುಯಾಯಿ. ಆದರೂ ಜಾತ್ಯತೀತ ಹಿಂದೂ, ಸಿಖ್, ಇಸ್ಲಾಂ , ಕ್ರೈಸ್ತ ಹೀಗೆ ಎಲ್ಲಾ ಧರ್ಮಗಳಲ್ಲಿಯೂ ಶ್ರದ್ಧೆ ಇರಿಸಿರುವವನು ಎಂದು ಸುಪ್ರೀಂ ಕೋರ್ಟ್ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ತಿಳಿಸಿದರು.
ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಸಂಘ ಗುರುವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸಿಜೆಐ ಗವಾಯಿ ನವೆಂಬರ್ 23 ರಂದು ನಿವೃತ್ತರಾಗಲಿದ್ದು, ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಅವರ ಕೊನೆಯ ಕೆಲಸದ ದಿನವಾಗಿರುತ್ತದೆ.
ನನ್ನ ತಂದೆ ಡಾ. ಅಂಬೇಡ್ಕರ್ ಅವರನ್ನು ನಂಬಿದ್ದರು. ನಾನು ಅವರಿಂದ ಕಲಿತಿದ್ದೇನೆ. ಯಾರೋ ಅವರಿಗೆ ಒಂದು ದರ್ಗಾದ ಬಗ್ಗೆ ಹೇಳಿದ್ದರು, ನಾವು ಅಲ್ಲಿಗೆ ಹೋಗುತ್ತಿದ್ದೆವು" ಎಂದು ಅವರು ನೆನಪಿಸಿಕೊಂಡರು.
ಸಿಜೆಐ ಗವಾಯಿ ಅವರ ಭಾಷಣದ ಪ್ರಮುಖಾಂಶಗಳು
ನಾನು ಇಂದು ಏನಾಗಿದ್ದೇನೋ ಅದಕ್ಕೆ ಕಾರಣ ನ್ಯಾಯಾಂಗ ಎಂಬ ಸಂಸ್ಥೆ. ಸದಾ ಅದಕ್ಕೆ ಕೃತಜ್ಞ.
ಡಾ. ಅಂಬೇಡ್ಕರ್ ಮತ್ತು ಸಂವಿಧಾನದಿಂದಾಗಿಯೇ ನಾನು ಈ ಹಂತ ತಲುಪಲು ಸಾಧ್ಯವಾಯಿತು.
ಕಾರ್ಪೊರೇಷನ್ ಶಾಲೆಯಲ್ಲಿ ನೆಲದ ಮೇಲೆ ಕುಳಿತು ಓದುವ ಯಾವುದೇ ಹುಡುಗ ಇಂತಹ ಕನಸು ಕಾಣಲು ಸಾಧ್ಯವೇ?
ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ—ಸಂವಿಧಾನದ ನಾಲ್ಕು ಮೂಲ ತತ್ವಗಳನ್ನು ಪಾಲಿಸಲು ಯತ್ನಿಸಿದ್ದೇನೆ.
ಕಳೆದ 6 ತಿಂಗಳು ಸಿಜೆಐ ಆಗಿ ಮತ್ತು ಕಳೆದ 6.5 ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನಾನು ಸಾಧಿಸಿದ್ದೆಲ್ಲವೂ ಈ ಸಂಸ್ಥೆಯ ಕಾರಣದಿಂದಲೇ.
ನ್ಯಾಯಾಲಯ ಸಿಜೆಐ ಕೇಂದ್ರಿತವಾಗಬಾರದು. ಅದು ಎಲ್ಲಾ ನ್ಯಾಯಮೂರ್ತಿಗಳಿಗೆ ಸೇರಿದ್ದಾಗಿರಬೇಕು.
ಶೂ ಎಸೆತ ಪ್ರಕರಣದಲ್ಲಿ ಸಿಜೆಐ ಗವಾಯಿ ಅವರು ತೋರಿದ ನಿಷ್ಪಕ್ಷಪಾತ ಹಾಗೂ ಸಮಚಿತ್ತವನ್ನು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಪ್ರಶಂಸಿಸಿದರು. ಸಂಘದ ಅಧ್ಯಕ್ಷ ವಿಪಿನ್ ನಾಯರ್ ಅವರು ಗವಾಯಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.