

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ಹರ್ಷವರ್ಧಿನಿ ರನ್ಯಾ ಅಲಿಯಾಸ್ ರನ್ಯಾ ರಾವ್ ಅವರ ಘನತೆಗೆ ಚ್ಯುತಿ ಉಂಟು ಮಾಡುವ ಮಾತುಗಳನ್ನಾಡಿರುವ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ತಾನಾಗಿದ್ದರೆ ತಡೆಯನ್ನೇ ನೀಡುತ್ತಿರಲಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಮೌಖಿಕವಾಗಿ ಹೇಳಿದೆ.
ರನ್ಯಾ ಸಂಬಂಧಿ ಅಕುಲಾ ಅನುರಾಧ ನೀಡಿದ ದೂರಿನ ಅನ್ವಯ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಯತ್ನಾಳ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ದೂರುದಾರರ ಪರ ವಕೀಲ ವೈ ಎಲ್ ಮಹೇಶ್ ಅವರು “ಉತ್ತರ ಕರ್ನಾಟಕ ಭಾಷೆಯಿಂದಾಗಿ ಆಕ್ಷೇಪಾರ್ಹವಾದ ಪದ ಬಂದಿದೆ ಎಂದು ಯತ್ನಾಳ್ ಹೇಳಿದ್ದಾರೆ. ಆದರೆ, ಆ ಪದಕ್ಕೆ ಬೇರೆ ಅರ್ಥವಿದ್ದರೆ ಅದನ್ನು ನಂಬಬಹುದಿತ್ತು. ಉತ್ತರ ಕರ್ನಾಟಕ ಭಾಷೆಯಲ್ಲಿಯೂ ಯತ್ನಾಳ್ ಬಳಸಿರುವ ಪದಕ್ಕೆ ಒಂದೇ ಅರ್ಥವಿದೆ. ಡಿಆರ್‌ಐ ಶೋಧದ ವೇಳೆ ಚಿನ್ನ ಜಫ್ತಿಯಾಗಿದೆ ಎಂದು ವಾದಿಸಲಾಗಿತ್ತು. ಈ ಸಂಬಂಧ ಮೆಮೊ ಸಲ್ಲಿಸಲಾಗಿದೆ. ಈ ಹಗರಣದಲ್ಲಿ ಇಬ್ಬರು ಸಚಿವರು ಭಾಗಿಯಾಗಿದ್ದು ಅವರ ಹೆಸರು ಬಹಿರಂಗಪಡಿಸಲಾಗುವುದು ಎಂದು ಯತ್ನಾಳ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು. ಆದರೆ, ಇದುವರೆಗೂ ಅವರ ಹೆಸರು ಬಹಿರಂಗಪಡಿಸಿಲ್ಲ. ರಾಜಕೀಯ ಪ್ರತೀಕಾರ ತೀರಿಸಿಕೊಳ್ಳಲು ಯಾರನ್ನೋ ಬಲಿಪಶು ಮಾಡಲಾಗಿದೆ” ಎಂದರು.
ಯತ್ನಾಳ್ ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್ ದಳವಾಯಿ ಅವರು “ಎಲ್ಲಾ ಮಹಿಳೆಯರನ್ನು ಕುರಿತು ಯತ್ನಾಳ್ ಹೇಳಿಕೆ ನೀಡಿಲ್ಲ. ಯತ್ನಾಳ್ ಅವರು ಆಕ್ಷೇಪಾರ್ಹವಾದ ಹೇಳಿಕೆ ನೀಡಿದ ದಿನ ರನ್ಯಾ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ನನ್ನ ಹೇಳಿಕೆಯನ್ನು ಆಕೆ ನೋಡುವುದು ಅಥವಾ ಕೇಳಿರುವ ಸಾಧ್ಯತೆ ಇಲ್ಲ. ದೂರಿನಲ್ಲಿ ಈ ವಿಚಾರ ರನ್ಯಾಗೆ ತಿಳಿದಿತ್ತು ಎಂಬ ಅಂಶವೇ ಇಲ್ಲ. ಯತ್ನಾಳ್ ಹೇಳಿಕೆ ನೀಡಿದ ಎರಡನೇ ದಿನ ದೂರು ದಾಖಲಿಸಲಾಗಿದೆ” ಎಂದರು.
ವಿಚಾರಣೆಯ ವೇಳೆ ಪೀಠವು ಯತ್ನಾಳ್ ನೀಡಿರುವ ಹೇಳಿಕೆ ಎಲ್ಲಾ ಕಡೆ ಇದೆ. ಜೈಲಿನಲ್ಲಿ ಪತ್ರಿಕೆ ಹೋಗುವುದಿಲ್ಲವೇ? ಯತ್ನಾಳ್ ಕ್ಷಮೆಯನ್ನಾದರೂ ಕೇಳಬೇಕಿತ್ತು. ಇದು ಸರಿಯಲ್ಲ. ಕ್ಷಮೆ ಕೇಳಿದರೂ ನೀವು ಹೇಳಿರುವುದನ್ನು ಅಳಿಸಿ ಹಾಕಲಾಗದು. ಸಿ ಟಿ ರವಿ (ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸದನದಲ್ಲಿ ಆಕ್ಷೇಪಾರ್ಹವಾದ ಪದ ಬಳಕೆ) ಪ್ರಕರಣದಲ್ಲಿ ಕ್ಷಮೆ ಕೋರಿರುವ ಅರ್ಜಿ ಸಲ್ಲಿಸಿದ್ದರೂ ಅದನ್ನು ನಾನು ಒಪ್ಪಿರಲಿಲ್ಲ. ನಾನಾಗಿದ್ದರೆ ಈ ಪ್ರಕರಣಕ್ಕೆ ತಡೆಯನ್ನೇ ನೀಡುತ್ತಿರಲಿಲ್ಲ” ಎಂದ ಪೀಠವು ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿತು.
2025ರ ಏಪ್ರಿಲ್ 1ರಂದು ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರ ಏಕಸದಸ್ಯ ಪೀಠವು ಪ್ರಕರಣಕ್ಕೆ ತಡೆ ನೀಡಿತ್ತು.
ಪ್ರಕರಣದ ಹಿನ್ನೆಲೆ: ಅಕುಲ ಅನುರಾಧ ಅವರು ಮಾರ್ಚ್ 18ರಂದು ನೀಡಿದ್ದ ದೂರಿನಲ್ಲಿ "ಯತ್ನಾಳ್ ಅವರು ಹರ್ಷವರ್ಧಿನಿ ರನ್ಯಾ ರಾವ್ ಬಗ್ಗೆ 'ಆ ರನ್ಯನ್ ಜೋಡಿ ಯಾರ್ಯಾರ್ ಸಂಬಂಧ ಅದಾವೊ ಆಕೆಗೆ ಏನೇನ್ ಸೆಕ್ಯೂರಿಟಿ ಕೊಟ್ಟಾರೋ ಎಲ್ಲಾ ಮಾಹಿತಿ ತೊಗೊಂಡಿವಿ. ಗೋಲ್ಡ್ ಎಲ್ಲಿಂದ ತಂದ್ರು ಯಾವ್ಯಾವ್ ತೂತ್ ನಾಗ್ ಇಟ್ಕೊಂಡು ತಂದ್ರು ಎಲ್ಲಾನೂ ಹೇಳ್ತೀವಿ… ಮೈ ತುಂಬಾ ಆಕೆ ಬಂಗಾರ ಇಟ್ಕೊಂಡು ಬಂದಾಳ ಮತ್ತು ಎಲ್ಲೆಲ್ ತೂತ್ ಅದಾವೊ ಅಲ್ಲಿ ಇಡ್ಕೊಂಡು ಬಂದಾಳ' ಎಂದು ಬೇಜವಾಬ್ದಾರಿಯಿಂದ ಅಸಭ್ಯವಾಗಿ, ಲೈಂಗಿಕವಾಗಿ ಅವರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ ಎಂದು ವಿವರಿಸಿದ್ದರು.
ಮುಂದುವರಿದು, "ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನಟಿಸಿರುವ ರನ್ಯಾ ಗೌರವ ಸಂಪಾದಿಸಿದ್ದಾರೆ. ಆಕೆಯ ಗೌರವಕ್ಕೆ ಚ್ಯುತಿ ಮತ್ತು ಚಾರಿತ್ರ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿರುವ ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವಿವರಿಸಿದ್ದರು. ಇದನ್ನು ಆಧರಿಸಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಯತ್ನಾಳ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 79ರ ಅಡಿ ಪ್ರಕರಣ ದಾಖಲಿಸಿದ್ದಾರೆ.