ಜಾನುವಾರು ಸಾಗಾಟದ ಸಂದರ್ಭದಲ್ಲಿ ಇದ್ರೀಶ್ ಪಾಷಾ ಎಂಬುವವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಹಾಗೂ ಇತರೆ ನಾಲ್ವರು ಆರೋಪಿಗಳನ್ನು ಕನಕಪುರದ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆರೋಪಿಗಳ ಏಳು ದಿನಗಳ ಪೊಲೀಸ್ ಕಸ್ಟಡಿಯು ಏಪ್ರಿಲ್ 15ಕ್ಕೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಕಳೆದ ಶನಿವಾರ ರಾಮನಗರ ಜಿಲ್ಲೆಯ ಕನಕಪುರದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸುರೇಶ್ ಅಣ್ಣಪ್ಪ ಸವದಿ ಅವರ ಮುಂದೆ ಹಾಜರುಪಡಿಸಿದರು.
ಪ್ರಕರಣದ ಕುರಿತು ಮಾಹಿತಿ ಪಡೆದ ನ್ಯಾಯಾಧೀಶರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಮತ್ತು ಆತನ ಸಹಚರರನ್ನು ಅವರು ಪತ್ತೆಯಾಗಿದ್ದ ರಾಜಸ್ಥಾನದಿಂದ ಕರೆತಂದ ರಾಮನಗರ ಪೊಲೀಸರು ಏಪ್ರಿಲ್ 9ರಂದು ಕನಕಪುರದ ಪ್ರಧಾನ ಸಿವಿಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಮಾರ್ಚ್ 31ರಂದು ಮಂಡ್ಯದ ಕಡೆಯಿಂದ ಬರುತ್ತಿದ್ದ ದನಸಾಗಣೆ ವಾಹನವೊಂದನ್ನು ಅಡ್ಡಗಟ್ಟಿದ್ದ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರು ವಾಹನದಲ್ಲಿ ಇದ್ದವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಏಪ್ರಿಲ್ 1ರಂದು ಬೆಳಗ್ಗೆ ಘಟನಾ ಸ್ಥಳದ ಸಮೀಪದಲ್ಲಿ ಇದ್ರೀಶ್ ಪಾಷಾ ಅವರ ಶವ ಪತ್ತೆಯಾಗಿತ್ತು. ಪುನೀತ್ ಮತ್ತು ಸಹಚರರಿಂದ ಹಲ್ಲೆ ನಡೆದಿದೆ ಎಂದು ಯೂನುಸ್ ಪಾಷಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 341, 504, 506, 324, 302, 304 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಏಪ್ರಿಲ್ ಐದರಂದು ಆರೋಪಿಗಳನ್ನು ರಾಜಸ್ಥಾನದ ಬನ್‌ಸ್ವಾರ ಬಳಿ ರಾಮನಗರ ಪೊಲೀಸರು ಬಂಧಿಸಿದ್ದರು.