'ಹತ್ತು ನಿಮಿಷದ ಆಜಾನ್‌ನಿಂದ ಶಬ್ದ ಮಾಲಿನ್ಯ ಎನ್ನುವುದಾದರೆ ಡಿಜೆ, ಭಜನೆಗಳ ಕತೆ ಏನು?' ಗುಜರಾತ್ ಹೈಕೋರ್ಟ್

“ನಿಮ್ಮ ಡಿಜೆ ಬಗ್ಗೆ ಏನು ಹೇಳುತ್ತೀರಿ? ಅದರಿಂದ ಬಹಳಷ್ಟು ಮಾಲಿನ್ಯವಾಗುತ್ತದೆ. ನಾವು ಈ ರೀತಿಯ ಪಿಐಎಲ್ ಪುರಸ್ಕರಿಸುವುದಿಲ್ಲ. ಇದೊಂದು (ಆಜಾನ್) ನಂಬಿಕೆಯಾಗಿದ್ದು ವರ್ಷಗಳಿಂದ ನಡೆದುಕೊಂಡು ಬಂದಿದೆ...” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮಸೀದಿ
ಮಸೀದಿ

ಮುಸ್ಲಿಮರು ದಿನಕ್ಕೆ ಐದು ಬಾರಿ ಪ್ರಾರ್ಥನೆ (ಆಜಾನ್‌) ಸಲ್ಲಿಸಲು ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಿದ ಮಾತ್ರಕ್ಕೆ ಶಬ್ದ ಮಾಲಿನ್ಯ ಉಂಟಾಗುವುದಿಲ್ಲ ಎಂದು ಮಂಗಳವಾರ ಹೇಳಿರುವ ಗುಜರಾತ್ ಹೈಕೋರ್ಟ್, ಅಂತಹ ಧ್ವನಿವರ್ಧಕನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಜಾಗೊಳಿಸಿತು [ಧರ್ಮೇಂದ್ರ ಪ್ರಜಾಪತಿ ವಿರುದ್ಧ ಗುಜರಾತ್ ರಾಜ್ಯ].

ಧ್ವನಿವರ್ಧಕಗಳ ಮೂಲಕ ಹೊರಡಿಸಲಾಗುವ ಮನುಷ್ಯ ಧ್ವನಿಯು ಅನುಮತಿಸಲಾದ ಮಿತಿಯನ್ನು ಮೀರುತ್ತಿದೆ ಎಂಬುದನ್ನು ಸಾಬೀತುಪಡಿಸದ ಪಿಐಎಲ್ ಸಂಪೂರ್ಣ ತಪ್ಪು ತಿಳಿವಳಿಕೆಯಿಂದ ಕೂಡಿದೆ ಎಂದು ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್‌ವಾಲ್‌ ಮತ್ತು ನ್ಯಾಯಮೂರ್ತಿ  ಅನಿರುದ್ಧ ಮಯಿ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ತೊಂದರೆ ಮತ್ತು ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ವೃತ್ತಿಯಲ್ಲಿ ವೈದ್ಯರೆಂದು ಹೇಳಿಕೊಂಡ ಧರ್ಮೇಂದ್ರ ಪ್ರಜಾಪತಿ ಎಂಬವವರು ಪಿಐಎಲ್‌ ಸಲ್ಲಿಸಿದ್ದರು.

Also Read
ಎಲ್ಲಾ ಧರ್ಮದವರೂ ಜಾತ್ಯತೀತತೆ ಪಾಲಿಸಬೇಕು: ನ್ಯಾ. ಎಂ ಆರ್ ಶಾ

ಆದರೆ ಅರ್ಜಿದಾರರು ಯಾವ ಆಧಾರದಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎನ್ನುತ್ತಿದ್ದಾರೆ ಎಂದು ಪ್ರಶ್ನಿಸಿದ ಪೀಠ “ನಿಮ್ಮ ಡಿಜೆ ಬಗ್ಗೆ ಏನು ಹೇಳುತ್ತೀರಿ? ಅದರಿಂದ ಬಹಳಷ್ಟು ಮಾಲಿನ್ಯವಾಗುತ್ತದೆ. ನಾವು ಈ ರೀತಿಯ ಪಿಐಎಲ್ ಪುರಸ್ಕರಿಸುವುದಿಲ್ಲ. ಇದೊಂದು (ಆಜಾನ್) ನಂಬಿಕೆಯಾಗಿದ್ದು ವರ್ಷಗಳಿಂದ ನಡೆದುಕೊಂಡು ಬಂದಿದೆ. (ದಿನದಲ್ಲಿ) ಅದಕ್ಕೆ 10 ನಿಮಿಷವೂ ಹಿಡಿಯದು” ಎಂದಿತು.

ದೇವಾಲಯಗಳ ಆರತಿಗಿಂತಲೂ ಆಜಾನ್‌ ದಿನಕ್ಕೆ ಐದು ಬಾರಿ ನಡೆಯುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಆಗ ನ್ಯಾಯಾಲಯ "ದೇವಾಲಯಗಳಲ್ಲಿ ಆರತಿಯೊಂದಿಗೆ ಬಡಿಯುವ ಘಂಟೆ, ಡೋಲು ಮತ್ತಿತರ ವಾದ್ಯಘೋಷಗಳು, ಭಜನೆಗಳಿಂದ ಯಾರಿಗೂ ತೊಂದರೆ ಉಂಟಾಗುವುದಿಲ್ಲವೇ? ಆ ಶಬ್ದ ದೇಗುಲಕ್ಕಷ್ಟೇ ಸೀಮಿತ, ಹೊರಗಡೆ ದಾಟುವುದಿಲ್ಲ ಎಂದು ನೀವು ಹೇಳಲು ಸಾಧ್ಯವೇ?" ಎಂದು ಮುಖ್ಯ ನ್ಯಾಯಮೂರ್ತಿ ಸುನೀತಾ ಪ್ರಶ್ನಿಸಿದರು.

ದಿನದ ಬೇರೆ ಬೇರೆ ಅವಧಿಗಳಲ್ಲಿ 10 ನಿಮಿಷಗಳ ಕಾಲ ಅಜಾನ್ ಮಾಡುವುದರಿಂದ ಉಂಟಾಗುವ ಶಬ್ದ ಮಾಲಿನ್ಯ ಕುರಿತು ವೈಜ್ಞಾನಿಕ ರೀತಿಯ ಆಧಾರ ಒದಗಿಸಲು ಅರ್ಜಿ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿತು.

"ಪಿಐಎಲ್ ಪುರಸ್ಕರಿಸಲು ಯಾವುದೇ ಉತ್ತಮ ಆಧಾರ ಕಂಡುಬರುತ್ತಿಲ್ಲವಾದ್ದರಿಂದ ಅದನ್ನು ವಜಾಗೊಳಿಸಲಾಗಿದೆ" ಎಂದು ಅದು ನುಡಿಯಿತು.  

Related Stories

No stories found.
Kannada Bar & Bench
kannada.barandbench.com