ಎಲ್ಲಾ ಧರ್ಮದವರೂ ಜಾತ್ಯತೀತತೆ ಪಾಲಿಸಬೇಕು: ನ್ಯಾ. ಎಂ ಆರ್ ಶಾ

"ಉಳಿದ ಧರ್ಮಗಳನ್ನು ಗೌರವಿಸುವುದು ಮೂಲಭೂತ ಕರ್ತವ್ಯಗಳ ಔಪಚಾರಿಕ ಭಾಗ" ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಾ ಹೇಳಿದರು.
ನ್ಯಾಯಮೂರ್ತಿ ಎಂ ಆರ್‌ ಶಾ
ನ್ಯಾಯಮೂರ್ತಿ ಎಂ ಆರ್‌ ಶಾ

ಪ್ರತಿಯೊಬ್ಬರೂ ಜಾತ್ಯತೀತರಾಗಿರಬೇಕೆಂದು ಭಾರತ ಸಂವಿಧಾನ ಕಡ್ಡಾಯಗೊಳಿಸುತ್ತದೆ. ಅದು ಆಯ್ಕೆಯ ವಿಚಾರವಲ್ಲ ಅಥವಾ ಕೇವಲ ಒಂದು ಧಾರ್ಮಿಕ ಗುಂಪಿಗೆ ಜಾತ್ಯತೀತತೆ ಅನುಸರಿಸುವಂತೆ ಹೇಳಿ ಇನ್ನೊಂದು ಧರ್ಮವನ್ನು ಹಾಗೆಯೇ ಬಿಡಲಾಗದು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ ಆರ್‌ ಶಾ  ಹೇಳಿದರು.

ಸಂವಿಧಾನ ದಿನದ ಅಂಗವಾಗಿ ಗುಜರಾತ್ ಹೈಕೋರ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಈ ವಿಚಾರ ತಿಳಿಸಿದರು.

ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಮತ್ತು ಎಲ್ಲಾ ಸಮುದಾಯಗಳು ಜಾತ್ಯತೀತತೆ ಆಚರಿಸಬೇಕು ಏಕೆಂದರೆ ಅದು ಸಂವಿಧಾನದಲ್ಲಿ ವಿವರಿಸಲಾದ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದರು.

ನ್ಯಾ. ಶಾ ಅವರ ಭಾಷಣದ ಪ್ರಮುಖ ಸಂಗತಿಗಳು

 • ಸಂವಿಧಾನದ ಪ್ರಕಾರ, ನಾವು ಜಾತ್ಯತೀತತೆಗೆ ಬದ್ಧರಾಗಿದ್ದೇವೆ. ಆದರೆ ಜಾತ್ಯತೀತತೆ ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ.

 • ಭಾರತದಲ್ಲಿ ವಾಸಿಸುವ ಎಲ್ಲಾ ಧರ್ಮಗಳು ಮತ್ತು ನಾಗರಿಕರು ಜಾತ್ಯತೀತತೆಯನ್ನು ಅಳವಡಿಸಿಕೊಳ್ಳಬೇಕಿದ್ದು ಅದರಲ್ಲಿ ಕೆಲವರು ಮಾತ್ರವೇ ಆಯ್ಕೆ ಮಾಡಿಕೊಳ್ಳುವುದು ಸಾಧ್ಯವಿಲ್ಲ.

 • ಉಳಿದ ಧರ್ಮಗಳನ್ನು ಗೌರವಿಸುವುದು ಮೂಲಭೂತ ಕರ್ತವ್ಯಗಳ ಔಪಚಾರಿಕ ಭಾಗ.

 • ಸಂವಿಧಾನದ ಮೂಲಭೂತ ಹಕ್ಕಿನ ಜೊತೆಗೆ ಮೂಲಭೂತ ಕರ್ತವ್ಯಗಳ ಬಗ್ಗೆ ಹೇಳುತ್ತದೆಯಾದರೂ, ಪ್ರಜೆಗಳು ಹೆಚ್ಚಾಗಿ ಹಕ್ಕುಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ.

 • ಬೇರೆಯವರ ಘನತೆಯನ್ನು ಬಲಿಕೊಟ್ಟು ನಾವು ವಾಕ್ ಸ್ವಾತಂತ್ರ್ಯವನ್ನು ಆನಂದಿಸಬಹುದೇ? ಇತರರನ್ನು ನಿಂದಿಸುವ ಮೂಲಕ ನಾವು ಈ ಹಕ್ಕನ್ನು ಚಲಾಯಿಸಬಹುದೇ?

 • ಧರ್ಮದ ಹಕ್ಕನ್ನು ಅನುಭವಿಸುವವರು ಭಾರತದ ಎಲ್ಲಾ ಜನರಲ್ಲಿ ಸಾಮರಸ್ಯ ಮತ್ತು ಸಾಮಾನ್ಯ ಸಹೋದರ ಭಾವವನ್ನು ಉತ್ತೇಜಿಸುವ ಕರ್ತವ್ಯವನ್ನು ಮರೆಯುವಂತಿಲ್ಲ.

 • ಸಂವಿಧಾನವನ್ನು ಆರಂಭದಲ್ಲಿ ರಾಜಕೀಯ ದಾಖಲೆ ಎಂದು ಪರಿಗಣಿಸಲಾಗಿತ್ತಾದರೂ, ಅದು ಕ್ರಮೇಣ ಸಾಮಾಜಿಕ ದಾಖಲೆ ಮತ್ತು ಉತ್ತಮ ಆಡಳಿತದ ಸಾಧನವಾಗಿ ಮಾರ್ಪಟ್ಟಿದೆ.

 • ಮೂಲಭೂತ ಕರ್ತವ್ಯಗಳು ಮತ್ತು ಹಕ್ಕುಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಉತ್ತಮ ಆಡಳಿತಕ್ಕಾಗಿ ಇವುಗಳನ್ನು ರೂಪಿಸಲಾಗಿದೆ.

 • ವ್ಯಕ್ತಿಯ ಹಕ್ಕುಗಳನ್ನು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಪ್ರಭುತ್ವದ ಬಾಧ್ಯತೆಯಾಗಿದೆ. ಅದೇ ರೀತಿ ವ್ಯಕ್ತಿಯು ಸಾಮಾಜಿಕ ಕಲ್ಯಾಣಕ್ಕೆ ಕೊಡುಗೆ ನೀಡಲು ಬದ್ಧನಾಗಿದ್ದಾನೆ.

 • ಕೇವಲ ಹಕ್ಕುಗಳನ್ನು ಅನುಭವಿಸಿ ಕರ್ತವ್ಯವನ್ನು ಸರ್ಕಾರದ ಪಾಲಿಗೆ ಬಿಡಲು ಸಾಧ್ಯವಿಲ್ಲ.

 • ಸಂವಿಧಾನದ ಹೆಚ್ಚಿನ ಹಕ್ಕುಗಳು ವೇದಗಳಲ್ಲಿ ಉಲ್ಲೇಖಿತವಾಗಿವೆ.

 • ವೇದಗಳು ಸಮಾನತೆ ಮತ್ತು ಪರಸ್ಪರ ಗೌರವದ ಬಗ್ಗೆ ಹಾಗೂ ಹಕ್ಕು ಬಾಧ್ಯತೆಗಳ ಕುರಿತಂತೆಯೂ ಮಾತನಾಡುತ್ತದೆ.

 • ಕಾನೂನು ಆಡಳಿತ ಕಾಪಾಡಿಕೊಳ್ಳುವಲ್ಲಿ, ನ್ಯಾಯಾಧೀಶರ ಪಾತ್ರ ಪ್ರಮುಖವಾದುದು. ಕಾನೂನು ಮತ್ತು ಸಮಾಜದ ನಡುವಿನ ಅಂತರ ಕಡಿಮೆ ಮಾಡುವುದು ಅವರ ಕೆಲಸ. ಅವರು ನ್ಯಾಯಾಧಾರಿತ ವಿಧಾನವನ್ನು ಹೊಂದಿರಬೇಕು.

 • ನ್ಯಾಯಾಲಯವನ್ನು ಸಂಪರ್ಕಿಸುವವರಿಗೆ ನ್ಯಾಯ ಒದಗಿಸುವಲ್ಲಿ ಯಾವುದೇ ವಿಳಂಬವಾಗಬಾರದು.

Related Stories

No stories found.
Kannada Bar & Bench
kannada.barandbench.com