ಜಮ್ಮು ಕಾಶ್ಮೀರದ ಸಂವಿಧಾನ ರಚನಾ ಶಾಸನಸಭೆಯನ್ನು 1957ರಲ್ಲಿ ವಿಸರ್ಜಿಸಿದಾಗ ಸಂವಿಧಾನದ 370ನೇ ವಿಧಿಯು ಶಾಶ್ವತವಾಯಿತು ಎಂದು ಒಪ್ಪಿಕೊಂಡರೆ, ಈ ವಿಧಿ ಸಂವಿಧಾನದ ಮೂಲ ರಚನೆಯಂತೆ ಆಗುವುದಿಲ್ಲವೇ ಎಂದು ಗುರುವಾರ ನಡೆದ ಪ್ರಕರಣದ ಎರಡನೇ ದಿನದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ರದ್ದತಿ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ ಹಾಗೂ ಸೂರ್ಯ ಕಾಂತ್ ಅವರಿದ್ದ ಸಾಂವಿಧಾನಿಕ ಪೀಠ ಈ ಪ್ರಶ್ನೆ ಕೇಳಿತು.
ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮೊಹಮ್ಮದ್ ಅಕ್ಬರ್ ಲೋನ್ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು "ಸಂವಿಧಾನ ಸಭೆ ವಿಸರ್ಜನೆಗೊಂಡ ನಂತರ ಯಥಾಸ್ಥಿತಿ ಬದಲಾಯಿಸಲಾಗುವುದಿಲ್ಲ" ಎಂದು ಸಿಬಲ್ ಹೇಳಿದರು. ಆದರೆ ನಂತರ ಅದು ಸಂವಿಧಾನದ ಮೂಲರಚನೆಯಂತೆ ಆಗುತ್ತದೆಯೇ ಎಂದು ಸಿಜೆಐ ಪ್ರಶ್ನಿಸಿದರು.
ಆಗ ಸಿಬಲ್ ಸಂಸತ್ತು ತನ್ನನ್ನು ಸಂವಿಧಾನ ರಚನಾಸಭೆಯಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಇದನ್ನು ಅನುಮತಿಸಿದರೆ ಮುಂದೊಂದು ದಿನ ಸಂವಿಧಾನ ಸಭೆ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ. ನಾನು ಈ ಪ್ರಕರಣವೊಂದರ ಬಗ್ಗೆ ಚಿಂತಿಸುತ್ತಿಲ್ಲ, [ಆದರೆ] ಇದನ್ನು ಅನುಮತಿಸಿದರೆ ದೇಶದ ಭವಿಷ್ಯದ ಕತೆ ಏನು? ಇದು ನಮಗೆ ಯಾವ ರೀತಿಯ ಸಂವಿಧಾನ ಬೇಕು ಎಂಬುದನ್ನು ವ್ಯಾಖ್ಯಾನಿಸುವ ಅಂದಿನ ರಾಜಕೀಯದ ಮೂಲವಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, "ಆದರೆ ತಿದ್ದುಪಡಿ ಮಾಡುವ ರಾಜಕೀಯ ಅಧಿಕಾರದಿಂದ ತಿದ್ದುಪಡಿ ಮಾಡುವ ಅಧಿಕಾರವನ್ನು ಸಂಪೂರ್ಣವಾಗಿ ವಿಚ್ಛೇದನ ಮಾಡುವುದು ಸಹ ಸೂಕ್ತವಲ್ಲ. ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಸಾಂವಿಧಾನಿಕ ಅಧಿಕಾರವು ರಾಜಕೀಯ ಅಧಿಕಾರವಾಗಿದೆ" ಎಂದು ಹೇಳಿದರು.
ಶಾಸಕಾಂಗ ಸಭೆಯನ್ನು ಸಾಂವಿಧಾನಿಕ ಸಭೆಯನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ, ಏಕೆಂದರೆ ಶಾಸಕಾಂಗದ ಉದ್ದೇಶವು ಪಕ್ಷಪಾತವಾಗಿರಬಹುದು, ಆದರೆ ಸಂವಿಧಾನ ರಚನಾ ಸಭೆಯ ವಿಚಾರ ಹಾಗಲ್ಲ ಎಂದು ಸಿಬಲ್ ಉತ್ತರಿಸಿದರು.
ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಿಂಪಡೆದ ನಾಲ್ಕು ವರ್ಷಗಳ ಬಳಿಕ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 8, ಮಂಗಳವಾರ ಮುಂದುವರಿಯಲಿದೆ.
ಪ್ರಕರಣದ ಮೊದಲ ದಿನದ ವಿಚಾರಣೆ
ಸಂವಿಧಾನದ 370ನೇ ವಿಧಿ ರದ್ದುಗೊಳಿಸಲು ಶಿಫಾರಸು ಮಾಡುವ ಅಧಿಕಾರ ಹೊಂದಿದ್ದ ಜಮ್ಮು ಕಾಶ್ಮೀರ ಸಾಂವಿಧಾನಿಕ ಶಾಸನಸಭೆ 1957ರಲ್ಲಿ ಅಸ್ತಿತ್ವ ಕಳೆದುಕೊಂಡಿದ್ದರಿಂದ ಈ ವಿಧಿಯನ್ನು ಶಾಶ್ವತ ನಿಬಂಧನೆಯಾಗಿ ಕಲ್ಪಿಸಲಾಗಿದೆಯೇ ಎಂದು ನ್ಯಾಯಾಲಯ ಕಳೆದ ಬುಧವಾರ ಆರಂಭವಾದ ಪ್ರಕರಣದ ವಿಚಾರಣೆ ವೇಳೆ ತಿಳಿಯಲು ಬಯಸಿತು.
"ಯಾವುದೇ ಸಾಂವಿಧಾನಿಕ ಶಾಸನಸಭೆ ಅನಿರ್ದಿಷ್ಟಾವಧಿ ಹೊಂದಿರುವುದಿಲ್ಲ. ಹಾಗಾಗಿ 370ನೇ ವಿಧಿ ಏನಾಗುತ್ತದೆ" ಎಂದು ಪೀಠದ ನೇತೃತ್ವ ವಹಿಸಿದ್ದ ಸಿಜೆಐ ಅವರು ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ಅವರನ್ನು ಕೇಳಿದರು.
ಸಿಜೆಐ ಅವರು 370ನೇ ವಿಧಿಯ ಷರತ್ತು 3ರ ನಿಬಂಧನೆಯನ್ನು ಉಲ್ಲೇಖಿಸುತ್ತಿದ್ದರು. ಅದರ ಪ್ರಕಾರ 370ನೇ ವಿಧಿಯನ್ನು ರಾಷ್ಟ್ರಪತಿಗಳು ನಿಷ್ಕ್ರಿಯವೆಂದು ಘೋಷಿಸುವ ಮೊದಲು ಜಮ್ಮು ಕಾಶ್ಮೀರದ ಸಂವಿಧಾನ ರಚನಾ ಸಭೆಯ ಶಿಫಾರಸನ್ನು ಪಡೆಯಬೇಕಾಗುತ್ತದೆ. ಸಂವಿಧಾನ ರಚನಾ ಸಭೆ ಜಮ್ಮು ಕಾಶ್ಮೀರದ ಸಂವಿಧಾನವನ್ನು ರೂಪಿಸಲು 1951ರಲ್ಲಿ ರಚನೆಯಾದ ಚುನಾಯಿತ ಪ್ರತಿನಿಧಿಗಳ ಸಂಸ್ಥೆಯಾಗಿದ್ದು ಅದನ್ನು 1957ರಲ್ಲಿ ವಿಸರ್ಜಿಸಲಾಗಿತ್ತು.
"370ನೇ ವಿಧಿ ರದ್ದುಗೊಳಿಸಬೇಕಾದರೆ, ನೀವು ಸಂವಿಧಾನ ರಚನಾ ಸಭೆಯ ಒಪ್ಪಿಗೆ ಪಡೆಯಬೇಕಾಗಿತ್ತು ... ಅದು ಸಂವಿಧಾನ ಅಸ್ತಿತ್ವದಲ್ಲಿರುವವರೆಗಿನ ಅವಧಿಯನ್ನು ಪೂರೈಸಿದೆ" ಎಂದು ಸಿಬಲ್ ಉತ್ತರಿಸಿದರು.
"ಆದ್ದರಿಂದ 1957ರ ನಂತರ ಪರಿವರ್ತನೆಯಾದ ವಿಧಿ ಶಾಶ್ವತವಾಗುತ್ತದೆ ಎಂದು ನೀವು ಹೇಳುತ್ತೀರಿ," ಎನ್ನುತ್ತಾ ಸಿಜೆಐ ಅವರು ಸಿಬಲ್ ಅವರನ್ನು ಉದ್ದೇಶಿಸಿ ಹೇಳಿದರು. ಇದಕ್ಕೆ ದನಿಗೂಡಿಸಿದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ "ಆದ್ದರಿಂದ ನೀವು 1957ರ ನಂತರ 370ನೇ ವಿಧಿಯನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದೀರಿ" ಎಂದರು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ ಹಾಗೂ ಸೂರ್ಯಕಾಂತ್ ಅವರನ್ನೂ ಒಳಗೊಂಡ ಸಾಂವಿಧಾನಿಕ ಪೀಠ ಬುಧವಾರ ಇಡೀ ದಿನ ಸಿಬಲ್ ಅವರ ವಾದ ಆಲಿಸಿತ್ತು.