
ಭಾರತೀಯ ಸಂವಿಧಾನದ ಮೂಲ ರಚನಾ ಸಿದ್ಧಾಂತ ಉಳಿಯಬೇಕು ಅದನ್ನು ಅತಿಕ್ರಮಿಸಿದರೆ ದೇಶ ವಿನಾಶದ ಹಾದಿ ಹಿಡಿಯುತ್ತದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಆತಂಕ ವ್ಯಕ್ತಪಡಿಸಿದರು.
ನವದೆಹಲಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಲೆಕ್ಸಿಸ್ ನೆಕ್ಸಿಸ್ ಸಂಸ್ಥೆ ಪ್ರಕಟಿಸಿರುವ ತಮ್ಮ 'ದ ಬೇಸಿಕ್ ಸ್ಟ್ರಕ್ಚರ್ ಡಾಕ್ಟ್ರಿನ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ಸಂವಿಧಾನದ ಮೂಲರಚನಾ ಸಿದ್ಧಾಂತ ಇಲ್ಲಿ ಎಂದೆಂದೂ ಇರಲಿದೆಯೇ ಹೊರತು ಅದು ಹೋಗುವುದಿಲ್ಲ ಎಂದು ತಿಳಿಸಲು ಪುಸ್ತಕ ಯತ್ನಿಸುತ್ತದೆ. ಒಂದು ವೇಳೆ ಅದೇನಾದರೂ ಹೊರಟುಹೋದರೆ ದೇವರೇ ದೇಶವನ್ನು ಕಾಪಾಡಬೇಕು. ಆಗ ಜಲಿಯನ್ ವಾಲಾಬಾಗ್ ರೀತಿಯ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ” ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನಲ್ಲಿ ತನ್ನ ಬೇರುಗಳನ್ನು ಹೊಂದಿರುವ ಸಂವಿಧಾನ ಮೂಲ ರಚನಾ ಸಿದ್ಧಾಂತದ ಬಗ್ಗೆ ಅವರು ವಿವರವಾಗಿ ಮಾತನಾಡಿದರು.
ಸಂವಿಧಾನದ ಕೆಲವು ಮೂಲಭೂತ ಲಕ್ಷಣಗಳಾದ ಸಂವಿಧಾನದ ಶ್ರೇಷ್ಠತೆ, ಕಾನೂನಾತ್ಮಕ ಅಡಳಿತ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ಸಂಸತ್ತು ಸಾಂವಿಧಾನಿಕ ತಿದ್ದುಪಡಿಯ ಮೂಲಕ ತಿದ್ದುಪಡಿ ಮಾಡಲು, ರದ್ದುಗೊಳಿಸಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ ಎಂದು ಮೂಲ ರಚನಾ ಸಿದ್ಧಾಂತ ಹೇಳುತ್ತದೆ.
ಇದೇ ವೇಳೆ ಮಾತನಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್, ಒಂದು ವೇಳೆ ಮೂಲರಚನಾ ಸಿದ್ಧಾಂತದ ವಿರುದ್ಧ ಜನಾಭಿಪ್ರಾಯ ಕಲೆಹಾಕಿದರೂ ಅದು ಅವಿಚ್ಛಿನ್ನವಾಗಿ ಉಳಿಯುತ್ತದೆ ಎಂದು ತಿಳಿಸಿದರು.
ಸಂವಿಧಾನದ ಮೂಲರಚನಾ ಸಿದ್ಧಾಂತ ಟೀಕಾಕಾರರು ಅದನ್ನು ವಿರೋಧಿಸಲು ಅಗತ್ಯವಾದ ಬಲವಾದ ಸಿದ್ಧಾಂತ ಮಂಡಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.
ಮೂಲಭೂತ ರಚನಾ ಸಿದ್ಧಾಂತ ರೂಪುಗೊಳ್ಳಲು ಪರೋಕ್ಷವಾಗಿ ಕಾರಣೀಭೂತರಾದ ಕೇರಳದ ಕಾಸರಗೋಡು ಜಿಲ್ಲೆಯಲ್ಲಿರುವ ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿಯವರ ಪ್ರತಿಮೆಯನ್ನು ಇಂಗ್ಲೆಂಡ್ ಡೊನೊಹ್ಯೂ ಪ್ರತಿಮೆಯನ್ನು [ಡೊನೊಹ್ಯೂ ಮತ್ತು ಸ್ಟೀವನ್ಸನ್ ನಡುವಣ ಪ್ರಕರಣದ ನಂತರ] ನಿರ್ಮಿಸಿದಂತೆಯೇ, ನಿರ್ಮಿಸಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ವಕೀಲ ಕಪಿಲ್ ಸಿಬಲ್ ಮಾತನಾಡಿ ಸಂವಿಧಾನದ ಮೂಲರಚನಾ ಸಿದ್ಧಾಂತವನ್ನು ಪ್ರತಿದಿನ ಉಲ್ಲಂಘಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೂಲರಚನಾ ಸಿದ್ಧಾಂತವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ ಎಂಬುದು ನಿಜ. ನಿಜವಾದ ಸವಾಲೆಂದರೆ, ಮೂಲಭೂತ ರಚನೆಯ ತತ್ವಗಳನ್ನು ಬದಲಿಸುವ ಮೂಲಕ ಮೂಲಭೂತ ರಚನೆಯ ಉಲ್ಲಂಘನೆಯನ್ನು ಮಾಡುವ ಅಗತ್ಯವಿಲ್ಲ. ಸಂವಿಧಾನದ ಮೂಲ ರಚನೆಗೆ ವಿರುದ್ಧವಾದ ಸಾಮಾನ್ಯ ಕಾನೂನನ್ನು ತರುವ ಮೂಲಕವೂ ಸಹ ಮೂಲಭೂತ ರಚನೆಯನ್ನು ಉಲ್ಲಂಘಿಸಬಹುದು. ಕೇಶವಾನಂದ ಭಾರತಿ ಪ್ರಕರಣದಲ್ಲಿ ಹೇಳಲಾದ ತತ್ವವೆಂದರೆ ಮೂಲಭೂತ ರಚನೆ ಸಂಸತ್ತಿನ ಸಾಂವಿಧಾನಿಕ ಅಧಿಕಾರಕ್ಕೆ ಅನ್ವಯವಾಗುವ ಪರಿಕಲ್ಪನೆಯಾಗಿದೆ. ಆದರೆ ನಮ್ಮಲ್ಲಿ ಮೂಲಭೂತ ರಚನೆಗೆ ವಿರುದ್ಧವಾದ ಕಾನೂನುಗಳಿದ್ದರೆ, ಮೂಲಭೂತ ರಚನೆಯ ಆಧಾರದ ಮೇಲೆ ನೀವು ಅವುಗಳನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ನೀವು ಪ್ರತಿದಿನವೂ ಮೂಲಭೂತ ರಚನೆಯನ್ನು ಉಲ್ಲಂಘಿಸಬಹುದಾಗಿದ್ದು ಅದು ಈ ದೇಶದಲ್ಲಿ ನಡೆಯುತ್ತಿದೆ ಎಂದರು.
ನ್ಯಾಯಾಲಯಗಳು ಮೂಲಭೂತ ರಚನೆಯನ್ನು ಉಲ್ಲಂಘಿಸುವ ಕಾನೂನುಗಳನ್ನು ರದ್ದುಗೊಳಿಸಲು ಸಿದ್ಧವಿಲ್ಲ ಎಂದು ಕೂಡ ಅವರು ಇದೇ ವೇಳೆ ಕಳವಳ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಮತ್ತು ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಅರವಿಂದ್ ದಾತಾರ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.