

“ಪಠ್ಯದಿಂದ ಗೋವಿನ ಹಾಡು ತೆಗೆದಾಗಿದೆ. ಭಗವದ್ಗೀತೆ ಸೇರಿಸುವುದು ಬೇಡ ಎಂದು ತಜ್ಞರೇ ತಿಳಿಸಿದ್ದಾರೆ. ಹಾಗಾದರೆ ಮಕ್ಕಳಿಗೆ ಏನನ್ನು ಕಲಿಸುತ್ತೀರಿ” ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಕೂಟ ಮಹಾಜಗತ್ತು ಭಾನುವಾರ ಹಮ್ಮಿಕೊಂಡಿದ್ದ ʼನರಸಿಂಹ ಪ್ರಶಸ್ತಿ ಪ್ರದಾನʼ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಭಗವದ್ಗೀತೆಯನ್ನು ಶೈಕ್ಷಣಿಕ ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರು ಇತ್ತೀಚೆಗೆ ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯವನ್ನು ಮತ್ತೆ ಮತ್ತೆ ವ್ಯಕ್ತಪಡಿಸುತ್ತಿರುವ ಬೆನ್ನಿಗೇ ರಾಜ್ಯ ರಾಜಕಾರಣದಲ್ಲಿ ಈ ಬಗ್ಗೆ ಪರ ವಿರೋಧದ ಚರ್ಚೆ ಆರಂಭವಾಗಿದೆ. ಇದು ಸಾರ್ವಜನಿಕ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಿಗೇ ನ್ಯಾ. ಶ್ರೀಶಾನಂದ ಅವರು ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸುವುದನ್ನು ಬೆಂಬಲಿಸಿ ಮಾತನಾಡಿರುವುದು ಗಮನ ಸೆಳೆದಿದೆ.
"ವಿದ್ಯಾರ್ಥಿಯ ಅಂಕಗಳಿಸುವಷ್ಟೇ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಪ್ರತಿಶತ ಅಂಕ ಗಳಿಸಿ ಅಮೆರಿಕಕ್ಕೆ ಹಾರಿ ಹೋದರೆ, ಇಲ್ಲಿ ಹೆತ್ತವರು ಜಾರಿ ಬಿದ್ದಾಗ ನೆರವಿನ ಹಸ್ತ ಚಾಚಲು ಯಾರೂ ಇಲ್ಲದೇ ಇದ್ದರೆ ಎಷ್ಟು ದುಡಿದು ಏನು ಪ್ರಯೋಜನ? ಹೆತ್ತವರನ್ನು ವೃದ್ಧಾಪ್ಯ ಕಾಲದಲ್ಲಿ ನೋಡಿಕೊಂಡು, ಉತ್ತಮ ದಾರಿಯಲ್ಲಿ ಸಂಪಾದನೆ ಮಾಡುವಂತಾಗಬೇಕು” ಎಂದು ಅವರು ಹೇಳಿದ್ದಾರೆ.
ದೈವ ಋಣ, ಋಷಿ ಋಣ, ಪಿತೃ ಋಣ, ರಾಷ್ಟ್ರ ಋಣವು ಎಲ್ಲರ ಮೇಲಿರುತ್ತದೆ. ಈ ಋಣವನ್ನು ಜೀವಿತಾವಧಿಯಲ್ಲಿ ತೀರಿಸಬೇಕು. ಮಿಡಿಯುವ ಗುಣ ಬೆಳೆಸಿಕೊಳ್ಳಬೇಕು” ಎಂದು ಅವರು ಸಲಹೆ ನೀಡಿದ್ದಾರೆ.
2024ರ ಆಗಸ್ಟ್‌ನಲ್ಲಿ ಪ್ರಕರಣದ ವಿಚಾರಣೆಯೊಂದರ ವೇಳೆ ನ್ಯಾ. ಶ್ರೀಶಾನಂದ ಅವರು “ಮುಸ್ಲಿಂ ಬಾಹುಳ್ಯ ಪ್ರದೇಶವಾದ ಬೆಂಗಳೂರಿನ ಗೋರಿಪಾಳ್ಯದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ. ಅದೊಂದು ಮಿನಿ ಪಾಕಿಸ್ತಾನವಾಗಿ ಮಾರ್ಪಟ್ಟಿದೆ..” ಎಂದಿದ್ದರು.
“ಬೆಂಗಳೂರಿನ ಮೈಸೂರು ರಸ್ತೆಯ ಮೇಲ್ಸೇತುವೆಗೆ ಹೋಗಿ ನೋಡಿ. ಅಲ್ಲಿ ಸಂಚರಿಸುವ ಪ್ರತಿಯೊಂದು ಆಟೊ ರಿಕ್ಷಾದಲ್ಲೂ 10 ಜನರನ್ನು ತುಂಬಿಕೊಂಡಿರಲಾಗುತ್ತದೆ. ಮೈಸೂರು ರಸ್ತೆಯ ಮೇಲ್ಸೆತುವೆ ಸಾಗುವ ಗೋರಿಪಾಳ್ಯದಿಂದ ಮಾರುಕಟ್ಟೆಯವರೆಗಿನ ಪ್ರದೇಶ ಭಾರತದಲ್ಲಿ ಇಲ್ಲ. ಅದು ಪಾಕಿಸ್ತಾನದಲ್ಲಿದೆ ” ಎಂದಿದ್ದರು. ಆಟೋದಲ್ಲಿ ಇಂತಿಷ್ಟು ಜನ ಸಾಗಬೇಕು ಎನ್ನುವ ಕಾನೂನು ಅಲ್ಲಿ ಅನ್ವಯವಾಗುವುದಿಲ್ಲ ಎನ್ನುವುದನ್ನು ನ್ಯಾ. ಶ್ರೀಶಾನಂದ ಹೇಳಿದ್ದರು.
ಅವರ ಈ ಹೇಳಿಕೆ ವಿವಾದವಾಗಿ ಮಾರ್ಪಟ್ಟಿತ್ತು. ಈ ಕುರಿತು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಆನಂತರ ಮುಕ್ತ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಶ್ರೀಶಾನಂದ ಅವರು ವಿಷಾದ ವ್ಯಕ್ತಪಡಿಸಿದ್ದರಿಂದ ವಿವಾದ ತಣ್ಣಗಾಗಿತ್ತು.
ಆನಂತರ ಈ ವರ್ಷದ ಆರಂಭದಲ್ಲಿ “ಯಾರನ್ನು ಬೇಕಾದರೂ ಮದುವೆ ಮಾಡಿಕೊಳ್ಳಬಹುದು. ಆದರೆ, ಮೊದಲ ರಾತ್ರಿ ಮಾತ್ರ ನಾಯಕನ ಜೊತೆ ಎಂಬ ಆಚರಣೆ ಇಂದಿಗೂ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿದೆ” ಎಂದು ನೀಡಿದ್ದ ಹೇಳಿಕೆಯನ್ನು ಒಳಗೊಂಡಿರುವ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗಲೂ ನ್ಯಾ. ಶ್ರೀಶಾನಂದ ಅವರ ವಿರುದ್ಧ ವ್ಯಾಪಕ ಟೀಕೆ ಮತ್ತು ಪ್ರತಿಭಟನೆಗಳು ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.