
ನಾಗರಿಕ್ ಅಪೂರ್ತಿ ನಿಗಮ್ (ಎನ್‌ಎಎಂ) ಹಗರಣಕ್ಕೆ ಸಂಬಂಧಿಸಿದ ತನಿಖೆಯನ್ನು ಛತ್ತೀಸ್‌ಗಢದಿಂದ ದೆಹಲಿಗೆ ವರ್ಗಾಯಿಸುವಂತೆ ಕೋರಿ ಸಂವಿಧಾನದ 32ನೇ ವಿಧಿಯಡಿ ರಿಟ್ ಅರ್ಜಿ ಸಲ್ಲಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಜಾರಿ ನಿರ್ದೇಶನಾಲಯವನ್ನು (ಇ ಡಿ) ತರಾಟೆಗೆ ತೆಗೆದುಕೊಂಡಿದೆ.
ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಮೂಲಭೂತ ಹಕ್ಕುಗಳ ಉಲ್ಲಂಘನೆಗಾಗಿ ಮಾತ್ರ ಸಲ್ಲಿಸಲಾಗುತ್ತದೆ. ಅದನ್ನು ಸರ್ಕಾರಿ ಅಂಗಗಳ ವಿರುದ್ಧ ಸಲ್ಲಿಸಲಾಗುತ್ತದೆಯೇ ಹೊರತು ಸರ್ಕಾರ ಅಥವಾ ಅದರ ಸಂಸ್ಥೆಗಳು ಆ ವಿಧಿಯಡಿ ಅರ್ಜಿ ಸಲ್ಲಿಸುವುದಿಲ್ಲ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ "ಜಾರಿ ನಿರ್ದೇಶನಾಲಯಕ್ಕೆ ಮೂಲಭೂತ ಹಕ್ಕುಗಳಿದ್ದರೆ, ಅದು ಜನರ ಮೂಲಭೂತ ಹಕ್ಕುಗಳ ಬಗ್ಗೆಯೂ ಯೋಚಿಸಬೇಕು" ಎಂದು ಅಸಮಾಧಾನ ವ್ಯಕ್ತಪಡಿಸಿತು. ಅಂತಿಮವಾಗಿ ಸಂಸ್ಥೆ ಅರ್ಜಿ ಹಿಂಪಡೆಯಿತು.
ನಾಗರಿಕ್ ಅಪೂರ್ತಿ ನಿಗಮ್ ಅಕ್ಕಿ ಸಂಗ್ರಹ ಮತ್ತು ವಿತರಣೆಯಲ್ಲಿ ಅಕ್ರಮ ಎಸಗಿದೆ ಎಂದು ಹೂಡಲಾಗಿದ್ದ ಭ್ರ್ಟಷ್ಟಾಚಾರ ಪ್ರಕರಣದಲ್ಲಿ ಮಾಜಿ ಐಎಎಸ್ ಅಧಿಕಾರಿ ಅನಿಲ್ ಟುಟೇಜಾ ಮತ್ತಿತರರು ಆರೋಪಿಗಳಾಗಿದ್ದಾರೆ.
ವಿಚಾರಣೆ ವೇಳೆ ರಿಟ್ ಅರ್ಜಿ ನಿರ್ವಹಿಸಬಹುದೇ ಎಂಬ ಬಗ್ಗೆ ಇ ಡಿಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಜಾರಿ ನಿರ್ದೇಶನಾಲಯ ಸಾಮಾನ್ಯವಾಗಿ ಸರ್ಕಾರ ಮತ್ತು ಅದರ ಸಂಸ್ಥೆಗಳ ವಿರುದ್ಧ ಸಲ್ಲಿಸಲಾಗುವ ರಿಟ್ ಅರ್ಜಿಯನ್ನು ಸರ್ಕಾರಿ ಸಂಸ್ಥೆಯಾದ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಕುರಿತು ನ್ಯಾಯಾಲಯ ಅಚ್ಚರಿ ವ್ಯಕ್ತಪಡಿಸಿತು.
ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ರಿಟ್ ಅರ್ಜಿಯನ್ನು ಕೂಡಲೇ ಹಿಂಪಡೆದರು.
ಇದನ್ನು ಪರಿಗಣಿಸಿ ಅರ್ಜಿ ವಿಲೇವಾರಿ ಮಾಡಿದ ನ್ಯಾಯಾಲಯ “ಸರ್ಕಾರಿ ಸಂಸ್ಥೆಯಾಗಿ ತನ್ನದೇ ಆದ ಮೂಲಭೂತ ಹಕ್ಕುಗಳ ಬಗ್ಗೆ ಚಿಂತಿಸಲು ಇ ಡಿ ಆರಂಭಿಸಿದರೆ ಆಗ ಅದು ನಾಗರಿಕರ ಮೂಲಭೂತ ಹಕ್ಕುಗಳ ಬಗ್ಗೆಯೂ ಚಿಂತಿಸಲು ತೊಡಗಬೇಕು” ಎಂದು ಕುಟುಕಿತು. ಈ ಹಿಂದೆಯೂ ಟುಟೇಜಾ ಅವರಿಗೆ ಸಮನ್ಸ್ ಜಾರಿ ಮಾಡಿದ ರೀತಿ ಮತ್ತು ಅವರನ್ನು ಬಂಧಿಸಿದ ಬಗೆಯ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.