'ರೈತರು ಕಬ್ಬು ಬೆಳೆವುದು ನಿಲ್ಲಿಸಿದರೆ ನಿಮ್ಮ ಸಕ್ಕರೆ ಕಾರ್ಖಾನೆ ಇಟ್ಟುಕೊಂಡು ಏನು ಮಾಡುವಿರಿ?' ಹೈಕೋರ್ಟ್‌ ತರಾಟೆ

ಕರ್ನಾಟಕ ಕಬ್ಬು ಕಾಯಿದೆ 2013ರ ಅನ್ವಯ ಸಕ್ಕರೆ ಕಾರ್ಖಾನೆಗಳು ಮತ್ತು ಸೌತ್‌ ಇಂಡಿಯನ್‌ ಶುಗರ್‌ ಮಿಲ್ಸ್‌ ಅಸೋಸಿಯೇಶನ್ಸ್‌ ನೀಡುವ ಮನವಿ ಕುರಿತು ಸಕ್ಕರೆ ನಿಯಂತ್ರಣ ಮಂಡಳಿಯು ಆದಷ್ಟು ಬೇಗ ಸೂಕ್ತ ಆದೇಶ ಮಾಡಬೇಕು ಎಂದಿರುವ ನ್ಯಾಯಾಲಯ.
Karnataka HC and Justice Suraj Govindaraj
Karnataka HC and Justice Suraj Govindaraj
Published on

“ರೈತರು ಕಬ್ಬು ಬೆಳೆಯುವುದನ್ನು ನಿಲ್ಲಿಸಿದರೆ ನಿಮ್ಮ ಕಾರ್ಖಾನೆಗಳನ್ನು ಇಟ್ಟುಕೊಂಡು ಏನು ಮಾಡುವಿರಿ” ಎಂದು ರಾಜ್ಯ ಸರ್ಕಾರ ನಿಗದಿಪಡಿಸಿರುವ ದರ ಪಾವತಿಸಲು ಮೀನಮೇಷ ಎಣಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್‌ “ರೈತರಿಗೆ ಹಣ ನೀಡಲು ಸಾಧ್ಯವಾಗದಿದ್ದರೆ ಕಬ್ಬು ಬೆಳಯಬೇಡಿ ಎಂದು ರೈತರಿಗೆ ಹೇಳಿ. ಅವರು ಬೇರೆ ಏನನ್ನಾದರೂ ಬೆಳೆಯುತ್ತಾರೆ” ಎಂದು ಕಿಡಿಕಾರಿತು.

ಪ್ರಸಕ್ತ 2025-26ನೇ ಸಾಲಿನಲ್ಲಿ ಪ್ರತಿ ಟನ್‌ ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ನ್ಯಾಯಯುತ ಮತ್ತು ಲಾಭದಾಯಕ ದರಕ್ಕಿಂತಲೂ (ಎಫ್‌ಆರ್‌ಪಿ) ಹೆಚ್ಚಿನ ದರ ನಿಗದಿಪಡಿಸಿ ರಾಜ್ಯ ಸರ್ಕಾರವು ನವೆಂಬರ್‌ 8ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿ ಸೌತ್‌ ಇಂಡಿಯನ್‌ ಶುಗರ್‌ ಮಿಲ್ಸ್‌ ಅಸೋಸಿಯೇಶನ್ಸ್‌, ಬಿಜೆಪಿ ನಾಯಕ ಮುರುಗೇಶ್‌ ನಿರಾಣಿ ಒಡೆತನದ ನಿರಾಣಿ ಷುಗರ್ಸ್‌ ಲಿಮಿಟೆಡ್‌, ರೇಣುಕಾ ಷುಗರ್ಸ್‌, ಜೆಮ್‌ ಷುಗರ್ಸ್‌, ಕೆಪಿಆರ್‌ ಷುಗರ್ಸ್‌ ಅಂಡ್‌ ಅಪರಾಲ್ಸ್‌ ಲಿಮಿಟೆಡ್‌ ಮತ್ತು ಗೋದಾವರಿ ಬಯೋ ರಿಫೈನರೀಸ್‌ ಲಿಮಿಟೆಡ್‌ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಎಚ್‌ ಎನ್‌ ಶಶಿಧರ್‌ ಅವರು “ದಕ್ಷಿಣ ಕರ್ನಾಟಕದಲ್ಲಿ 81 ಕಾರ್ಖಾನೆಗಳ ಪೈಕಿ 19 ಕಾರ್ಖಾನೆಗಳು ಈಗಾಗಲೇ ಹಣ ಪಾವತಿಸಿವೆ. ಉಳಿದ 62 ಕಾರ್ಖಾನೆಗಳ ಪೈಕಿ 12 ಸಂಸ್ಥೆಗಳು ನ್ಯಾಯಾಲಯದ ಮುಂದೆ ಬಂದಿವೆ. ಸೌತ್‌ ಇಂಡಿಯನ್‌ ಶುಗರ್ಸ್‌ ಸಂಸ್ಥೆಯು 50 ಕಾರ್ಖಾನೆಗಳನ್ನು ಪ್ರತಿನಿಧಿಸುತ್ತದೆ. ನಾವು ಎಫ್‌ಆರ್‌ಪಿಯನ್ನು ಪಾವತಿಸಿದ್ದೇವೆ. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ನಿಗದಿಪಡಿಸಿರುವ ದರವನ್ನು ಪಾವತಿಸುವಂತೆ ಆದೇಶಿಸಿದರೆ ಸಾಕಷ್ಟು ಕಾರ್ಖಾನೆಗಳು ದಿವಾಳಿಯಾಗಲಿವೆ. ಹೀಗಾಗಿ, ನ್ಯಾಯಾಲಯ ನಮ್ಮ ನೆರವಿಗೆ ಧಾವಿಸಬೇಕು” ಎಂದು ಕೋರಿದರು.

ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಪ್ರತಿ ಟನ್‌ ಕಬ್ಬಿಗೆ 200 ರೂಪಾಯಿ ದರ ಹೆಚ್ಚಿಸಿರುವುದಕ್ಕೆ ಸಂಬಂಧಿಸಿದಂತೆ ಸಕ್ಕರೆ ನಿಯಂತ್ರಣ ಮಂಡಳಿಗೆ ಅರ್ಜಿದಾರ ಸಕ್ಕರೆ ಕಾರ್ಖಾನೆಗಳು ಮತ್ತು ಸೌತ್‌ ಇಂಡಿಯನ್‌ ಶುಗರ್‌ ಮಿಲ್ಸ್‌ ಅಸೋಸಿಯೇಶನ್ಸ್‌ ಹತ್ತು ದಿನಗಳಲ್ಲಿ ಮನವಿ ಸಲ್ಲಿಸಲಿವೆ. ಕಬ್ಬು ಬೆಳೆಗಾರರಿಗೆ ತಕ್ಷಣ ಹಣ ಬಿಡುಗಡೆ ಮಾಡುವುದಕ್ಕೆ ಸಕ್ಕರೆ ಕಾರ್ಖಾನೆಗಳಿಗೆ ಎದುರಾಗಿರುವ ಸಮಸ್ಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಗುವುದು. ಈ ಕುರಿತು ನಿರ್ಧಾರ ಕೈಗೊಳ್ಳಲು ಆದೇಶಿಸಬೇಕು” ಎಂದರು.

Also Read
[ಕಬ್ಬಿನ ದರ ಹೆಚ್ಚಳ] ರೈತರು ಇಲ್ಲದಿದ್ದರೆ ಸಕ್ಕರೆ ಕಾರ್ಖಾನೆಗಳೇ ಇರುವುದಿಲ್ಲ: ಹೈಕೋರ್ಟ್‌ ಕಿಡಿನುಡಿ

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಸರ್ಕಾರಕ್ಕೆ ಸಲ್ಲಿಸುವ ಮನವಿ ಸಂಬಂಧ ನಿರ್ಧಾರ ಕೈಗೊಳ್ಳಲು ತಿಂಗಳು ಕಾಲಾವಕಾಶ ನೀಡಬೇಕು” ಎಂದರು.

ಇದನ್ನು ಆಲಿಸಿದ ಪೀಠವು “ಕರ್ನಾಟಕ ಕಬ್ಬು (ಖರೀದಿ ಮತ್ತು ಪೂರೈಕೆ ನಿಯಂತ್ರಣ) ಕಾಯಿದೆ 2013ರ ಅನ್ವಯ ಸಕ್ಕರೆ ಕಾರ್ಖಾನೆಗಳು ಮತ್ತು ಸೌತ್‌ ಇಂಡಿಯನ್‌ ಶುಗರ್‌ ಮಿಲ್ಸ್‌ ಅಸೋಸಿಯೇಶನ್ಸ್‌ ನೀಡುವ ಮನವಿ ಕುರಿತು ಸಕ್ಕರೆ ನಿಯಂತ್ರಣ ಮಂಡಳಿಯು ಆದಷ್ಟು ಬೇಗ ಸೂಕ್ತ ಆದೇಶ ಮಾಡಬೇಕು. ರಾಜ್ಯ ಸರ್ಕಾರಕ್ಕೆ ಸಕ್ಕರೆ ಕಾರ್ಖಾನೆಗಳು ಸಲ್ಲಿಸುವ ಮನವಿ ಸಂಬಂಧ ಮೂರು ವಾರಗಳಲ್ಲಿ ಸರ್ಕಾರವು ನಿರ್ಧಾರ ಕೈಗೊಳ್ಳಬೇಕು” ಎಂದು ಆದೇಶಿಸಿ, ವಿಚಾರಣೆಯನ್ನು ಜನವರಿ ಕೊನೆಯ ವಾರಕ್ಕೆ ಮುಂದೂಡಿತು.

Kannada Bar & Bench
kannada.barandbench.com