ಕಾಂಗ್ರೆಸ್‌ನಿಂದ ದೇಶದ ಸಂಪತ್ತು ಮುಸ್ಲಿಮರಿಗೆ ಮರು ಹಂಚಿಕೆ: ಮೋದಿ ವಿರುದ್ಧದ ಖಾಸಗಿ ದೂರು ವಜಾ ಮಾಡಿದ ನ್ಯಾಯಾಲಯ

ದೂರುದಾರ ನೊಮಾನಿ ಐಪಿಸಿ ಸೆಕ್ಷನ್‌ಗಳಾದ 153ಎ, 153ಬಿ, 295ಎ, 503, 504 ಮತ್ತು 505(2)ರ ಅಡಿ ನರೇಂದ್ರ ಮೋದಿ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿದ್ದ ದೂರು ಸಿಆರ್‌ಪಿಸಿ ಸೆಕ್ಷನ್‌ 156(3) ಅಡಿ ಪರಿಗಣಿಸಲು ಸೂಕ್ತವಲ್ಲ ಎಂದಿರುವ ನ್ಯಾಯಾಲಯ.
PM Narendra Modi
PM Narendra Modi
Published on

ಮುಸ್ಲಿಮರನ್ನು ನುಸುಳುಕೋರರು ಎಂದು ಕರೆದಿದ್ದ ಹಾಗೂ “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅದು ದೇಶದ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರು ಹಂಚಿಕೆ ಮಾಡುತ್ತದೆ” ಎಂದು ಪ್ರಚೋದನಾಕಾರಿ ಚುನಾವಣಾ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಮಂಗಳವಾರ ವಜಾ ಮಾಡಿದೆ.

ಪ್ರಧಾನಿಯ ಭಾಷಣವು ಮುಸ್ಲಿಮರನ್ನು ನಿಂದಿಸುವಂತಿದೆ. ಈ ದೇಶದ ಸಂಪತ್ತನ್ನು ಲೂಟಿ ಹೊಡೆದ ನುಸುಳುಕೋರರಿಗೆ ಇಲ್ಲಿರುವ ಮುಸ್ಲಿಮರನ್ನು ಹೋಲಿಕೆ ಮಾಡುವಂತೆ ಉಳಿದ ಜನರನ್ನು ಪ್ರೇರೇಪಿಸುವಂತಿದೆ. ಹಾಗಾಗಿ, ಸಮಾಜದಲ್ಲಿ ದ್ವೇಷ ಹರಡಿದ, ಶಾಂತಿ ಭಂಗ ಉಂಟು ಮಾಡಿದ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಬೆಂಗಳೂರಿನ ಹೆಬ್ಬಾಳದ ನಿವಾಸಿ 32 ವರ್ಷದ ಜಿಯಾವುರ್‌ ರಹಮಾನ್‌ ನೊಮಾನಿ ಬೆಂಗಳೂರಿನ 42ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಮೇ 23ರಂದು ಖಾಸಗಿ ದೂರು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿ ಜುಲೈ 12 ರಂದು ಕಾಯ್ದಿರಿಸಿದ್ದ ಆದೇಶವನ್ನು ವಿಶೇಷ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರು ಇಂದು ಪ್ರಕಟಿಸಿದ್ದಾರೆ.

K N Shivakumar, Magistrate MP/MLA Special court
K N Shivakumar, Magistrate MP/MLA Special court

“ಸಿಆರ್‌ಪಿಸಿ ಸೆಕ್ಷನ್‌ 200ರ ಅಡಿ ದೂರುದಾರ ಜಿಯಾವುರ್‌ ರಹಮಾನ್‌ ನೊಮಾನಿ ಅವರು ಐಪಿಸಿ ಸೆಕ್ಷನ್‌ಗಳಾದ 153ಎ, 153ಬಿ, 295ಎ, 503, 504 ಮತ್ತು 505(2)ರ ಅಡಿ ನರೇಂದ್ರ ಮೋದಿ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿದ್ದ ದೂರು ಸಿಆರ್‌ಪಿಸಿ ಸೆಕ್ಷನ್‌ 156(3) ಅಡಿ ಪರಿಗಣಿಸಲು ಸೂಕ್ತವಲ್ಲ ಎಂದು ತಿರಸ್ಕರಿಸಲಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಏಪ್ರಿಲ್‌ನಲ್ಲಿ ರಾಜಸ್ಥಾನದಲ್ಲಿ ನಡೆದಿದ್ದ ಲೋಕಸಭಾ ಚುನಾವಣಾ ಪ್ರಚಾರ ಭಾಷಣದಲ್ಲಿ ಸಮಾಜ ಮತ್ತು ಧರ್ಮಗಳ ನಡುವೆ ದ್ವೇಷ ಬಿತ್ತುವ, ಸಾರ್ವಜನಿಕ ಶಾಂತಿಗೆ ಭಂಗ ಹಾಗೂ ಕ್ರಿಮಿನಲ್‌ ಪ್ರಚೋದನೆ ನೀಡುವ ಭಾಷಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ಗಳಾದ 153ಎ, 153ಬಿ, 295ಎ, 503, 504, 505(2) ಅಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಕರಣ ದಾಖಲಿಸಲು ಅಮೃತಹಳ್ಳಿ ಠಾಣಾ ಪೊಲೀಸರಿಗೆ ನಿರ್ದೇಶಿಸುವಂತೆ ಖಾಸಗಿ ದೂರಿನಲ್ಲಿ ಮನವಿ ಮಾಡಲಾಗಿತ್ತು.

ಆರೋಪಿ ಪ್ರಧಾನಿ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಲು ವಿಫಲವಾಗಿರುವುದರಿಂದ ತುಡುಗು ಶಕ್ತಿಗಳಿಂದ ಮುಸ್ಲಿಮ್‌ ಸಮುದಾಯದ ಸುರಕ್ಷತೆಗೆ ಬೆದರಿಕೆ ಒಡ್ಡುವಂತಾಗಿದೆ. ಇದು ಸಾಂವಿಧಾನಿಕ ಮೌಲ್ಯಗಳಾದ ಭ್ರಾತೃತ್ವ, ಏಕತೆ ಮತ್ತು ಸಮಗ್ರತೆ ಮೇಲಿನ ನೇರ ದಾಳಿಯಲ್ಲದೇ ಬೇರೇನೂ ಅಲ್ಲ. ತಮ್ಮ‌ ದ್ವೇಷ ಭಾಷಣದ ಮೂಲಕ ಪ್ರಧಾನಿ ಮೋದಿ ಸಂವಿಧಾನದ 14, 17 ಮತ್ತು 51ಎ ವಿಧಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆಕ್ಷೇಪಿಸಲಾಗಿದೆ.

ಪ್ರಧಾನಿ ಮೋದಿ ದ್ವೇಷ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲಾ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಕಂಡಿದ್ದು, ಇದು ಪ್ರಕರಣದಲ್ಲಿ ಸಾಕ್ಷಿಯಾಗಿರುವ ಆರ್‌ ಕಲೀಮುಲ್ಲಾ ಅವರ ಗಮನಕ್ಕೂ ಬಂದಿದೆ. ಹೀಗಾಗಿ, ತಕ್ಷಣ ಏಪ್ರಿಲ್‌ 26ರಂದು ಅಮೃತಹಳ್ಳಿ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಅಮೃತಹಳ್ಳಿ ಪೊಲೀಸರು ಇದು ಭಾರತೀಯ ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಡುವುದರಿಂದ ಎಫ್‌ಐಆರ್‌ ದಾಖಲಿಸಲಾಗದು ಎಂದು ಹಿಂಬರಹ ನೀಡಿದ್ದರು. ಇದಾದ ಬಳಿಕ ಏಪ್ರಿಲ್‌ 27ರಂದು ದೂರುದಾರ ನೊಮಾನಿ ಇಮೇಲ್‌ ಮೂಲಕ ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದರು. ಅಲ್ಲಿಂದಲೂ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಮೇ 23ರಂದು ನ್ಯಾಯಾಲಯದ ಮೆಟ್ಟಿಲೇರಲಾಗಿದೆ ಎಂದು ಖಾಸಗಿ ದೂರಿನಲ್ಲಿ ವಿವರಿಸಲಾಗಿತ್ತು.

Also Read
ಕಾಂಗ್ರೆಸ್‌ನಿಂದ ದೇಶದ ಸಂಪತ್ತು ಮುಸ್ಲಿಮರಿಗೆ ಮರು ಹಂಚಿಕೆ: ಮೋದಿ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು

ಪ್ರಕರಣದ ಹಿನ್ನೆಲೆ: 2024ರ ಏಪ್ರಿಲ್‌ 21ರಂದು ರಾಜಸ್ಥಾನದ ಬನ್ಸ್ವಾರದಲ್ಲಿನ ಚುನಾವಣಾ ಸಮಾವೇಶದಲ್ಲಿ ಪ್ರಧಾನಿ ಮೋದಿ “ತಾಯಂದಿರು, ಸಹೋದರಿಯರ ಬಂಗಾರ ಲೆಕ್ಕ ಹಾಕುವುದಾಗಿ, ಅದರ ಬಗ್ಗೆ ಮಾಹಿತಿ ಪಡೆಯುವುದಾಗಿ, ನಂತರ ಸಂಪತ್ತನ್ನು ಮರು ಹಂಚಿಕೆ ಮಾಡುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆ ಹೇಳುತ್ತದೆ. ಅದನ್ನು ಯಾರಿಗೆ ಹಂಚುತ್ತಾರೆ? ಮುಸ್ಲಿಮರು ದೇಶದ ಸಂಪತ್ತಿನ ಮೊದಲ ಹಕ್ಕುದಾರರು ಎಂದು ಮನಮೋಹನ್‌ ಸಿಂಗ್‌ ಸರ್ಕಾರ ಹೇಳಿತ್ತು. ಅದರ ಅರ್ಥ, ಹೆಚ್ಚು ಮಕ್ಕಳಿರುವವರಿಗೆ ನಿಮ್ಮ ಸಂಪತ್ತು ಹಂಚಿಕೆಯಾಗುತ್ತದೆ. ನುಸುಳುಕೋರರಿಗೆ ನಿಮ್ಮ ಸಂಪತ್ತು ಹಂಚಿಕೆಯಾಗುತ್ತದೆ. ನೀವು ಕಷ್ಟದಿಂದ ಸಂಪಾದಿಸಿದ ಹಣ ನುಸುಳುಕೋರರ ಪಾಲಾಗಬೇಕೆ? ಅದಕ್ಕೆ ನಿಮ್ಮ ಒಪ್ಪಿಗೆ ಇದೆಯೇ” ಎಂದು ಸಭಿಕರನ್ನು ಪ್ರಶ್ನಿಸಿದ್ದರು.

Kannada Bar & Bench
kannada.barandbench.com