ಬೈರತಿಗೆ ನೀಡಿರುವ ಮಧ್ಯಂತರ ನಿರೀಕ್ಷಣಾ ಜಾಮೀನು ನ್ಯಾಯಯುತವಾಗಿಲ್ಲ ಎಂದರೆ ಸುಪ್ರೀಂನಲ್ಲಿ ಪ್ರಶ್ನಿಸಿ: ಚೌಟ ಸವಾಲು

ಆರೋಪಿ ಜಗದೀಶ್‌ ಜೊತೆಗೆ ಬಸವರಾಜು ಸಂಭಾಷಣೆ ನಡೆಸಿಲ್ಲ. ಪ್ರಕರಣದಲ್ಲಿ ಬಸವರಾಜ್‌ ಪಿತೂರಿ ನಡೆಸಿರುವುದಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿರುವುದಕ್ಕೆ ತನಿಖಾಧಿಕಾರಿಗಳ ಬಳಿ ಯಾವುದೇ ನೇರ ಅಥವಾ ಸಾಂದರ್ಭಿಕ ಸಾಕ್ಷಿ ಇಲ್ಲ ಎಂದ ಚೌಟ.
Byrati Basavaraj and Karnataka HC
Byrati Basavaraj and Karnataka HCFB
Published on

ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ ಆರ್‌ ಪುರದ ಶಾಸಕ ಬೈರತಿ ಬಸವರಾಜ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಾಗಿರುವುದು ನ್ಯಾಯಯುತವಾಗಿಲ್ಲ ಎಂದೆನಿಸಿದರೆ ಸಿಐಡಿ ತನಿಖಾಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಹಿರಿಯ ವಕೀಲ ಸಂದೇಶ್‌ ಚೌಟ ಸವಾಲು ಎಸೆದಿದ್ದಾರೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಐದನೇ ಆರೋಪಿಯಾಗಿರುವ ಬೈರತಿ ಬಸವರಾಜ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ಮಂಗಳವಾರ ಮುಂದುವರಿಸಿತು.

ಸಿಐಡಿ ಪೊಲೀಸರ ಪರ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್‌ ಅವರು “ಬೈರತಿ ಬಸವರಾಜ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್‌ ಈ ಹಿಂದೆಯೇ ವಜಾಗೊಳಿಸಿದೆ. ಇದಾದ ನಂತರವೂ ಮತ್ತೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ಯಾವುದೇ ಬದಲಾದ ಪರಿಸ್ಥಿತಿ ಇಲ್ಲದಿರುವುದರಿಂದ ಅರ್ಜಿ ಊರ್ಜಿತವಾಗುವುದಿಲ್ಲ. ಮೃತ ಬಿಕ್ಲು ಶಿವು ತಾಯಿಯ ಮೇಲೆ ಒತ್ತಡ ಹೇರಿ ಮಾಧ್ಯಮ ಹೇಳಿಕೆ ಕೊಡಿಸಲಾಗಿದೆ. ಇದರಿಂದ ಸದ್ಯ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಿದರೆ ತನಿಖೆಗೆ ಹಿನ್ನಡೆಯಾಗಲಿದೆ” ಎಂದರು.

ಇದಕ್ಕೆ ಆಕ್ಷೇಪಿಸಿದ ಬೈರತಿ ಬಸವರಾಜ ಪರ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಪ್ರಕರಣದ ಒಂದನೇ ಆರೋಪಿ ಜಗದೀಶ್‌ ಜೊತೆಗೆ ಬೈರತಿ ಬಸವರಾಜು ಸಂಭಾಷಣೆ ನಡೆಸಿಲ್ಲ. ಪ್ರಕರಣದಲ್ಲಿ ಬಸವರಾಜ ಅವರು ಪಿತೂರಿ ನಡೆಸಿರುವುದಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿರುವುದಕ್ಕೆ ತನಿಖಾಧಿಕಾರಿಗಳ ಬಳಿ ಯಾವುದೇ ನೇರ ಅಥವಾ ಸಾಂದರ್ಭಿಕ ಸಾಕ್ಷಿ ಇಲ್ಲ. ಸಿಡಿಆರ್‌ ದಾಖಲೆಗಳು ಇಲ್ಲ. ಆದರೂ ಬಸವರಾಜ ಅವರೊಂದಿಗೆ ಪೊಲೀಸರು ಕೈಜೋಡಿಸಿದ್ದಾರೆ. ಬಸವರಾಜ ಅವರ ಪರ ಕೆಲಸ ಮಾಡಿದ್ದಾರೆ ಎಂದು ಸರ್ಕಾರಿ ಅಭಿಯೋಜಕರು ವಾದಿಸಿದ್ದಾರೆ. ಆ ಮೂಲಕ ತಮ್ಮದೇ ಪೊಲೀಸರ ವಿರುದ್ಧ ಆರೋಪ ಮಾಡಿದ್ದಾರೆ” ಎಂದು ಹೇಳಿದರು.

“ಸಿಐಡಿ ಪೊಲೀಸರಿಗೆ ತನಿಖೆ ವರ್ಗಾವಣೆಯಾದ ಎಂಟೇ ದಿನಗಳಲ್ಲಿ ಕೋಕಾ ಕಾಯಿದೆಯ ನಿಯಮಗಳನ್ನು ಪ್ರಕರಣದಲ್ಲಿ ಹೇರಿದ್ದಾರೆ. ಆ ನಿರ್ಧಾರವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಅಲ್ಲಿಂದಲೂ ವಿಚಾರಣೆಗೆ ಹಾಜರಾಗಲು ಬಸವರಾಜುಗೆ ಸೂಚಿಸಿ ಸಿಐಡಿ ಪೊಲೀಸರು ಯಾವೊಂದು ನೋಟಿಸ್‌ ನೀಡಿಲ್ಲ. ಬದಲಾಗಿ ಇತರೆ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೆ, ಬಸವರಾಜು ವಿರುದ್ಧ ಮಾತ್ರ ಆರೋಪ ಪಟ್ಟಿ ಸಲ್ಲಿಸಿಲ್ಲ. ಕೇವಲ ಬಸವರಾಜು ವಿರುದ್ಧ ತನಿಖೆ ನಡೆಸಬೇಕಿದೆ ಎಂದಷ್ಟೇ ಹೇಳುತ್ತಿದ್ದಾರೆ. ಸಿಐಡಿ ತನಿಖಾಧಿಕಾರಿಗಳ ಈ ನಡೆ ಸರಿಯಲ್ಲ” ಎಂದು ಆಕ್ಷೇಪಿಸಿದರು.

“ಸತ್ಯಾಂಶಗಳನ್ನು ಮರೆ ಮಾಚಿ ಮಧ್ಯಂತರ ಜಾಮೀನು ಪಡೆಯಲಾಗಿದೆ ಎಂದು ಸರ್ಕಾರಿ ಅಭೀಯೋಜಕರು ಪದೇ ಪದೇ ಹೇಳುತ್ತಿದ್ದಾರೆ. ಯಾವ ಆಧಾರದಲ್ಲಿ ಮಧ್ಯಂತರ ಜಾಮೀನು ಹೈಕೋರ್ಟ್‌ ನೀಡಿದೆ ಎಂಬುದನ್ನು ನ್ಯಾಯಾಲಯ ಗಮನಿಸಬೇಕು. ಸತ್ಯಾಂಶಗಳನ್ನು ಮರೆ ಮಾಚಲಾಗಿದೆ. ಪೊಲೀಸರು ಬಸವರಾಜುಗೆ ಸಹಕರಿಸಿದ್ದಾರೆ. ಬಿಕ್ಲು ಶಿವು ತಾಯಿಗೆ ಬೆದರಿಕೆ ಹಾಕಿದ್ದಾರೆ. ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಾರೆ. ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಪ್ರಕರಣದ ಇತರೆ ಆರೋಪಿಗಳ ವಿರುದ್ಧ ಮಾತ್ರ ತನಿಖೆ ನಡೆಯಬೇಕು. ತಮ್ಮ ವಿರುದ್ಧ ಮಾತ್ರ ತನಿಖೆ ನಡೆಯಬಾರದು. ತಮ್ಮ ಇಚ್ಛೆಗೆ ಅನುಸಾರ ತನಿಖೆ ನಡೆಯಬೇಕು ಎಂಬುದಾಗಿ ಬಸವರಾಜು ಬಯಸುತ್ತಿದ್ದಾರೆ ಎಂಬ ಸರ್ಕಾರಿ ಅಭಿಯೋಜಕರ ವಾದ ನ್ಯಾಯಸಮ್ಮತವಲ್ಲ” ಎಂದು ಪ್ರತಿಪಾದಿಸಿರು.

“ಬಸವರಾಜು ಸುಳ್ಳು ಮಾಹಿತಿ ನೀಡಿ, ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಆ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನು ನಿಷ್ಫಲಗೊಳಿಸಿದ್ದಾರೆ ಎಂದೆಲ್ಲಾ ಸರ್ಕಾರಿ ಅಭಿಯೋಜಕರು ಆರೋಪ ಮಾಡುತ್ತಿದ್ದಾರೆ. ಮಧ್ಯಂತರ ಜಾಮೀನನ್ನು ನ್ಯಾಯಾಲಯ ಮಂಜೂರು ಮಾಡಿದೆ ಎಂದು ಹೇಳಬೇಕೆ ವಿನಾ ಪಡೆದುಕೊಳ್ಳಲಾಗಿದೆ ಎಂದು ಸಂಭೋದಿಸಬಾರದು. ಮಧ್ಯಂತರ ಜಾಮೀನು ಮಂಜೂರಾತಿ ಆದೇಶವು ನ್ಯಾಯಯುತವಾಗಿಲ್ಲ ಎಂದಾದರೆ, ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿತ್ತು. ಅದು ಬಿಟ್ಟು ಅರ್ಜಿದಾರರ ವಿರುದ್ಧ ವೃಥಾ ಆರೋಪ ಮಾಡುವುದು ಸರಿಯಲ್ಲ. ಸರ್ಕಾರಿ ಅಭಿಯೋಜಕರು ಪ್ರಾಸಿಕ್ಯೂಟರ್‌ ಮಾದರಿಯಲ್ಲಿರಬೇಕು. ಪರ್ಸಿಕ್ಯೂಟರ್‌ (ಪೀಡಕ) ಆಗಿರಬಾರದು” ಎಂದು ತೀವ್ರವಾಗಿ ಆಕ್ಷೇಪಿಸಿದರು.

Also Read
[ಬಿಕ್ಲು ಶಿವು ಕೊಲೆ ಪ್ರಕರಣ] ತನಿಖೆಗೆ ಹಾಜರಾಗಲು ಸಿಐಡಿ ನೋಟಿಸ್‌ ನೀಡಿಲ್ಲ: ಬೈರತಿ ಬಸವರಾಜ್‌ ಪರ ವಾದ

ಇದರಿಂದ ಕೆರಳಿದ ಜಗದೀಶ್‌ ಅವರು “ಇದೇನಿದು ಪರ್ಸಿಕ್ಯೂಟರ್‌ ಎಂದು ವೈಯಕ್ತಿಕವಾಗಿ ದಾಳಿ ನಡೆಸಲಾಗುತ್ತಿದೆ. ನನ್ನ ವಾದಾಂಶಗಳೆಲ್ಲವನ್ನೂ ನಾನು ಪ್ರತಿಪಾದಿಸುತ್ತೇನೆ. ಅದಕ್ಕೆ ನಾನು ಸಿದ್ಧನಿದ್ದೇನೆ. ಯಾವುದನ್ನೂ ಸಹ ನಾನು ಮುಚ್ಚಿಡುವುದಿಲ್ಲ” ಎಂದು ತಿರುಗೇಟು ನೀಡಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

Kannada Bar & Bench
kannada.barandbench.com