

ಪ್ರಕರಣಗಳ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು ಮತ್ತು ವಕೀಲರ ನಡುವಿನ ಮೌಖಿಕ ಸಂವಾದವನ್ನು ಮಾಧ್ಯಮಗಳು ವರದಿ ಮಾಡುವುದರಿಂದ ವಾತಾವರಣ ಕಲುಷಿತಗೊಳುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿತು.
ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಅವರು ಜಾಮೀನು ಕೋರಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ನಡೆಸಿತು.
ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರು “ಪ್ರಕರಣ ವಿಚಾರಣೆಗೆ ಬಾಕಿ ಇರುವಾಗ ನ್ಯಾಯಾಲಯ ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಮಾಧ್ಯಮಗಳು ವರದಿ ಮಾಡುತ್ತಿರುವುದರಿಂದ ಪ್ರತಿಕ್ರಿಯೆ ಪಡೆಯಲು ವಕೀಲರಿಗೆ ಯಾವುದೇ ಪ್ರಶ್ನೆಗಳನ್ನು ಕೇಳಲು ನ್ಯಾಯಮೂರ್ತಿಗಳು ಈಗ ಹೆದರುವಂತಾಗಿದೆ” ಎಂದರು.
“ವಕೀಲರ ಜೊತೆ ಸಂವಾದಲ್ಲಿ ನ್ಯಾಯಮೂರ್ತಿಗಳು ಭಾಗಿಯಾಗುವುದನ್ನು ಮಾಧ್ಯಮಗಳು ವರದಿ ಮಾಡುವುದು ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ವಕೀಲರ ಜೊತೆ ನ್ಯಾಯಮೂರ್ತಿಗಳಾದ ನಾವು ಚರ್ಚಿಸುತ್ತೇವೆ, ಪ್ರಶ್ನೆಗಳನ್ನು ಕೇಳುತ್ತೇವೆ.. ಇದೆಲ್ಲವನ್ನೂ ಮಾಧ್ಯಮಗಳು ವರದಿ ಮಾಡುವುದರಿಂದ ವಾತಾವರಣ ಕಲುಷಿತಗೊಳುತ್ತದೆ. ಪ್ರಕರಣದ ಕಾರಣದಿಂದ ಪ್ರತಿದಿನವೂ ನ್ಯಾಯಮೂರ್ತಿಗಳು ಮತ್ತು ವಕೀಲರು ಸಂದಿಸುತ್ತೇವೆ” ಎಂದರು.
ಆಗ ಕೇಂದ್ರೀಯ ತನಿಖಾ ದಳ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್ ಅವರು “ಹಿರಿಯ ವಕೀಲರಾದ ಸಿ ವಿ ನಾಗೇಶ್ ಅವರಿಗೆ 56 ವರ್ಷ ವೃತ್ತಿ ಅನುಭವವಿದೆ. ನನ್ನ ವಯಸ್ಸೇ 46. ಅವರನ್ನು ನಾನು ಗುರುವಿನ ಸ್ಥಾನದಲ್ಲಿ ಕಾಣುತ್ತೇನೆ. ನ್ಯಾಯಾಲಯಕ್ಕೆ ನಾವು ಒಟ್ಟಿಗೆ ಹೋಗುವುದನ್ನೂ ಮಾಧ್ಯಮಗಳು ಬೇರೊಂದು ರೀತಿಯಲ್ಲಿ ಬಿಂಬಿಸುತ್ತವೆ. ಇದು ದುರದೃಷ್ಟಕರ” ಎಂದು ನ್ಯಾಯಮೂರ್ತಿಗಳ ಮಾತಿಗೆ ಧ್ವನಿಗೂಡಿಸಿದರು.