ಮೊದಲ ವಿಚ್ಛೇದನ ಅರ್ಜಿ ತಿರಸ್ಕೃತವಾದರೆ ಎರಡನೇ ಸಲ ಅರ್ಜಿ ಸಲ್ಲಿಸಲು ಅವಕಾಶ: ಹೈಕೋರ್ಟ್‌

ಪತಿ ತನ್ನ ಮೊದಲನೇ ವಿವಾಹ ವಿಚ್ಛೇದನ ಅರ್ಜಿ ತಿರಸ್ಕೃತಗೊಂಡ ನಂತರ ಸಲ್ಲಿಸಿದ್ದ ಎರಡನೇ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಅನಂತ ರಾಮನಾಥ ಹೆಗ್ಡೆ ಅವರ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ.
Justices Anu Sivaraman and Anant Ramanath Hegde
Justices Anu Sivaraman and Anant Ramanath Hegde
Published on

ಕ್ರೌರ್ಯ ಎಸಗಲಾಗುತ್ತಿದೆ ಎಂದು ಪತಿ ಮೊದಲ ಬಾರಿ ಸಲ್ಲಿಸಿದ್ದ ವಿವಾಹ ವಿಚ್ಛೇದನ ಅರ್ಜಿ ತಿರಸ್ಕೃತಗೊಂಡಿದ್ದರೆ ಎರಡನೇ ಸಲ ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಸ್ಪಷ್ಟಪಡಿಸಿದೆ.

ಪತಿ ತನ್ನ ಮೊದಲನೇ ವಿವಾಹ ವಿಚ್ಛೇದನ ಅರ್ಜಿ ತಿರಸ್ಕೃತಗೊಂಡ ನಂತರ ಸಲ್ಲಿಸಿದ್ದ ಎರಡನೇ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಅನಂತ ರಾಮನಾಥ ಹೆಗ್ಡೆ ಅವರ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ. ವಿಚ್ಛೇದನ ಅರ್ಜಿ ತಿರಸ್ಕರಿಸಿದ್ದ ಮೈಸೂರಿನ ನ್ಯಾಯಾಲಯದ ಆದೇಶ ರದ್ದುಗೊಳಿಸಿ ವಿಚ್ಛೇದನ ಮಂಜೂರು ಮಾಡಿದೆ.

“ಒಂದು ವೇಳೆ ಪತಿ ತನ್ನ ಮಗನಿಗಾಗಿ ಕಾನೂನುಬದ್ಧವಾಗಿ ನಿರ್ವಹಿಸಬೇಕಾಗಿರುವ ಕರ್ತವ್ಯ ಪಾಲನೆ ಮಾಡದಿದ್ದರೂ ಸಹ ಆತ ತನ್ನ ವಿರುದ್ಧ ಪತ್ನಿಯು ಎಸಗಿರುವ ಮಾನಸಿಕ ಕ್ರೌರ್ಯ ಸಾಬೀತುಪಡಿಸಿದರೆ ವಿವಾಹ ವಿಚ್ಛೇದನ ಮಂಜೂರು ಮಾಡಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

“ಪತಿ ಹಾಗೂ ಪತ್ನಿ ಪರಸ್ಪರ ಮಗುವಿನ ಸುಪರ್ದು ಮತ್ತು ನಿರ್ವಹಣೆ ವಿಚಾರದಲ್ಲಿ ಒಪ್ಪಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದರೆ ಪತ್ನಿ ಪತಿಯ ಅನೈತಿಕ ಸಂಬಂಧ ಸಾಬೀತುಪಡಿಸಿಲ್ಲ. ಅರ್ಜಿದಾರರು ಹೇಳಿರುವಂತೆ ಪತ್ನಿ, ಪತಿಯ ಕಚೇರಿಗೆ ಹೋಗಿ ಅವರ ಸಹೋದ್ಯೋಗಿಗಳ ಮುಂದೆ ಸಾಕಷ್ಟು ಹಿಯಾಳಿಸಿ ಮಾತನಾಡಿದ್ದಾರೆ. ಇದನ್ನು ಪಾಟೀ ಸವಾಲಿನಲ್ಲಿ ಪತ್ನಿ ನಿರಾಕರಿಸಿಲ್ಲ. ಇದನ್ನು ಪರಿಗಣಸಿದರೆ ಪತಿಯು ಪತ್ನಿಯಿಂದ ಮೌನಸಿಕ ಕ್ರೌರ್ಯ ಅನುಭವಿಸುತ್ತಿದ್ದೇನೆ ಎನ್ನುವ ವಾದದಲ್ಲಿ ಹುರುಳಿದೆ. ಹೀಗಾಗಿ, ಪತಿಗೆ ವಿಚ್ಛೇದನ ಮಂಜೂರು ಮಾಡಲಾಗುತ್ತಿದೆ” ಎಂದು ಸಮರ್ಥಿಸಿದೆ.

ಪ್ರಕರಣದ ಹಿನ್ನೆಲೆ: ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಮತ್ತು ಮಹಿಳೆ 2007ರ ಜನವರಿ 28ರಂದು ಮದುವೆಯಾಗಿದ್ದು, 2010ರಲ್ಲಿ ಗಂಡು ಮಗು ಜನಿಸಿತ್ತು. ಆನಂತರ ಮಹಿಳೆಯು ಪತಿ ತನ್ನ ತಂದೆಯಿಂದ ಮೂರು ಲಕ್ಷ ರೂಪಾಯಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರು ನೀಡಿದ್ದರು. ಆದರೆ, ಆ ಪ್ರಕರಣದಲ್ಲಿ ಪೊಲೀಸರು ತನಿಖೆ ಬಳಿಕ ʼಬಿʼ ರಿಪೋರ್ಟ್ ಸಲ್ಲಿಸಿದ್ದರು.  ಬಳಿಕ ಪತ್ನಿ, ಪತಿ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಆನಂತರ ಪತಿ 2018ರಲ್ಲಿ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಬಳಿಕ ಸ್ನೇಹಿತರು ಹಾಗೂ ಕುಟುಂಬದವರ ಸಲಹೆ ಮೇರೆಗೆ ಆ ಅರ್ಜಿ ವಾಪಸ್ ಪಡೆದಿದ್ದರು. ಆನಂತರ ಮಾನಸಿಕ ಕ್ರೌರ್ಯದ ಆಧಾರದ ಮೇಲೆ 2019ರಲ್ಲಿ ಹೊಸದಾಗಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಮೈಸೂರಿನ ಕೌಟುಂಬಿಕ ನ್ಯಾಯಾಲಯವು ಪತಿಯು ಮೌನಸಿಕ ಕೌರ್ಯ ನೀಡುತ್ತಿದ್ದಾರೆ ಎಂದು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ಅರ್ಜಿ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೊರೆ ಹೋಗಿದ್ದರು.

Kannada Bar & Bench
kannada.barandbench.com