ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ತನಿಖೆಗೆ ಸಿಬಿಐಗೆ ಅನುಮೋದಿಸಿದ್ದ ಆದೇಶ ಹಿಂಪಡೆದಿರುವ ರಾಜ್ಯ ಸರ್ಕಾರದ ನಿರ್ಧಾರದ ಕುರಿತು ಹೀಗೆ ಮಾಡುವುದರಿಂದ “ಆಡಳಿತ ನಿರಂತರತೆಗೆ ಅಡ್ಡಿಯಾಗುವುದಿಲ್ಲವೇ” ಎಂದು ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ಪ್ರಶ್ನಿಸಿತು.
ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರ ನೀಡಿದ್ದ ಅನುಮೋದನೆ ಹಿಂಪಡೆದಿರುವ ರಾಜ್ಯ ಸರ್ಕಾರದ ಆದೇಶ ಸಲ್ಲಿಸಿರುವುದನ್ನು ಪರಿಗಣಿಸಿ ಕರ್ನಾಟಕ ಹೈಕೋರ್ಟ್ ಮೇಲ್ಮನವಿಯನ್ನು ಬುಧವಾರ ಇತ್ಯರ್ಥಪಡಿಸಿತು. ಹೀಗಾಗಿ, ಸದ್ಯಕ್ಕೆ ಡಿ ಕೆ ಶಿವಕುಮಾರ್ ಅವರು ಸಿಬಿಐ ಕುಣಿಕೆಯಿಂದ ಪಾರಾಗಿದ್ದಾರೆ.
ಡಿ ಕೆ ಶಿವಕುಮಾರ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಅನೇಕ ಅವಲೋಕನಗಳನ್ನು ಮಾಡಿತು.
ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು “ನಾವು ಅನುಮೋದನೆ ಹಿಂಪಡೆದ ಮೇಲೆ ಪ್ರಕ್ರಿಯೆ ಆರಂಭವಾಗುತ್ತದೆ. ಇದನ್ನು ಮುಂದುವರಿಸಬೇಕೆ ಎಂಬುದನ್ನು ಅರ್ಜಿದಾರರು ನಿರ್ಧರಿಸಬೇಕು. ನಮ್ಮ ಪ್ರಕಾರ ಸಿಬಿಐಗೆ ತನಿಖೆ ಮುಂದುವರಿಸಲು ವ್ಯಾಪ್ತಿಯಿಲ್ಲ. ಅರ್ಜಿದಾರರು ತಮ್ಮ ಅರ್ಜಿ ಮುಂದುವರಿಸಬೇಕೆ ಎಂಬುದನ್ನು ನಿರ್ಧರಿಸಬೇಕು. ದೆಹಲಿ ವಿಶೇಷ ಪೊಲೀಸ್ ಸಂಸ್ಥಾಪನಾ ಕಾಯಿದೆ (ಡಿಎಸ್‌ಪಿಇ) ಸೆಕ್ಷನ್ 6 ಸ್ಪಷ್ಟವಾಗಿದೆ. ನಮಗೆ ಇನ್ನೂ ಅಧಿಕಾರ ಇದೆ ಎಂದು ಸಿಬಿಐ ಭಾವಿಸಿದರೆ ಅವರು ಅನುಮೋದನೆ ಆದೇಶ ಪ್ರಶ್ನಿಸಲು ಸ್ವಾಗತ” ಎಂದರು.
ಆಗ ಪೀಠವು “ತೀರ ಈಚೆಗಿನ (ರಾಜ್ಯ ಸರ್ಕಾರ) ನಿರ್ಧಾರವನ್ನು ನೀವು ನಮಗೆ ಸಲ್ಲಿಸಿದ್ದೀರಿ. ನಿಯಮದ ಪ್ರಕಾರ ನಾವು ಇದನ್ನು ಒಪ್ಪುತ್ತೇವೆ. ಆದರೆ, ಆಡಳಿತದಲ್ಲಿ ನಿರಂತರತೆ ನಿಮಯ ಇದೆ ಎ ಪಕ್ಷ ಅಧಿಕಾರ ಬಂದಿರಬಹುದು, ಮುಂದೆ ಬಿ ಪಕ್ಷ ಅಧಿಕಾರಕ್ಕೆ ಬರಬಹುದು.. ಪ್ರತಿ ಬಾರಿ ಇದು ಹೀಗಾದರೆ ಅದು ಆಡಳಿತದ ನಿರಂತರತೆಗೆ ಅಡ್ಡಿ ಉಂಟು ಮಾಡುವುದಿಲ್ಲವೇ” ಎಂದು ಸರ್ಕಾರವನ್ನು ಪ್ರಶ್ನಿಸಿತು.
ಡಿ ಕೆ ಶಿವಕುಮಾರ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು “2019ರ ಸೆಪ್ಟೆಂಬರ್ 25ರಂದು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಅನುಮೋದನೆ ನೀಡಿರುವುದನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯನ್ನು ಏಕಸದಸ್ಯ ಪೀಠ ವಜಾ ಮಾಡಿರುವುದರಿಂದ ಅದನ್ನು ಪ್ರಶ್ನಿಸಿ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಲಾಗಿದೆ. ಇಂದು ಅನುಮೋದನೆ ಆದೇಶವನ್ನು ಹಿಂಪಡೆಯಲಾಗಿದೆ. ಇದು ಒಳ್ಳೆಯದು, ಕೆಟ್ಟದೂ ಅಥವಾ ದುರುದ್ದೇಶದಿಂದ ಕೂಡಿರಬಹುದು. ಇದನ್ನು ಯಾರಾದರೂ ಪ್ರಶ್ನಿಸಬಹುದು ಅಥವಾ ಪ್ರಶ್ನಿಸದಿರಬಹುದು. ಇಂದು ಪ್ರಕರಣ ಅಮಾನ್ಯಗೊಂಡಿದೆ” ಎಂದರು.
ಆಗ ನ್ಯಾ. ದೀಕ್ಷಿತ್ “ಸಂಪುಟ ಸಭೆಯ ನಿರ್ಧಾರವನ್ನು ಪ್ರಶ್ನಿಸಲಾಗಿಲ್ಲವೇ?” ಎಂದರು.
ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು “ಸರ್ಕಾರ ಅನುಮೋದನೆ ಹಿಂಪಡೆಯಬೇಕೆಂದಾದರೆ ಪಡೆಯಲಿ. ನಾವು ಕಾನೂನಿನ ಅನ್ವಯ ನಡೆಯಲಿದ್ದೇವೆ” ಎಂದರು.
ಈ ನಡುವೆ ಸಿಜೆ ಅವರು ಸಿಂಘ್ವಿ ಅವರನ್ನು ಕುರಿತು “ನೀವು ಮೇಲ್ಮನವಿಯನ್ನು ಮುಂದುವರಿಸಲು ಸಿದ್ಧರಿಲ್ಲ. ಅಲ್ಲವೇ” ಎಂದರು.
ಅದಕ್ಕೆ ಸಿಂಘ್ವಿ “ಸರ್ಕಾರವು ಅನುಮೋದನೆ ಹಿಂಪಡೆದಿರುವುದರಿಂದ ನನ್ನ ಹೇಳಿಕೆ ಆಧರಿಸಿ ರಿಟ್ ಅರ್ಜಿ ಮತ್ತು ರಿಟ್ ಮೇಲ್ಮನವಿಯು ಇತ್ಯರ್ಥವಾಗಲಿದೆ. ಹೀಗಿರುವಾಗ ವಾದ ಮಂಡಿಸುವ ಅಗತ್ಯ ಬೀಳದು. ಇದು ಸ್ಪಷ್ಟವಾಗಿದೆ” ಎಂದರು.
ಇದನ್ನು ಆಲಿಸಿದ ಸಿಜೆ ಅವರು “ಒಮ್ಮೆ ಅನುಮೋದನೆ ಹಿಂಪಡೆದರೆ ಪ್ರಕ್ರಿಯೆ ರದ್ದಾಗಲಿದೆ. ಇದಕ್ಕೆ ಮೇಲ್ಮನವಿ ಹಿಂಪಡೆಯಲು ಅರ್ಜಿದಾರರು ನಿರ್ಧರಿಸಿದ್ದಾರೆ” ಎಂದರು.
ಒಂದು ಹಂತದಲ್ಲಿ ನ್ಯಾಯಮೂರ್ತಿ ದೀಕ್ಷಿತ್ ಅವರು ಸಿಬಿಐ ವಕೀಲರಿಗೆ ಸುಪ್ರೀಂ ಕೋರ್ಟ್ ತೀರ್ಪಿನ ನಿರ್ದಿಷ್ಟ ಭಾಗವನ್ನು ನೆನಪಿಸಿ, ಅದನ್ನು ಓದುವಂತೆ ಸೂಚಿಸಿದರು. ಆಗ ಸಿಬಲ್ ಅವರು “ನಿಮ್ಮ ನೆನಪಿನ ಶಕ್ತಿ ಅಗಾಧವಾಗಿದೆ” ಎಂದರು. ಅದಕ್ಕೆ ಸಿಜೆ ವರಾಳೆ ಅವರು “ನಮ್ಮ ಬ್ರದರ್ ಜಡ್ಜ್‌ಗೆ ಅಗಾಧವಾದ ನೆನಪಿನ ಶಕ್ತಿ ಇದೆ” ಎಂದರು. ಇದನ್ನು ವಿಸ್ತರಿಸಿದ ನ್ಯಾ. ದೀಕ್ಷಿತ್ ಅವರು “ನಾನು ಗಾಯತ್ರಿ ಮಂತ್ರ ಇತ್ಯಾದಿ ಹೇಳುತ್ತೇನೆ. ನಮ್ಮ ಸ್ಕ್ರಿಪ್ಚರ್ ಹೇಳುತ್ತವೆ. ನ್ಯಾಚುರಲಿ ಅದರಿಂದ ನನಗೆ ಲಾಭವಾಗಿದೆ” ಎಂದರು.
ಒಂದು ಹಂತದಲ್ಲಿ ಸಿಬಿಐ ವಕೀಲರು “ರಾಜ್ಯ ಸರ್ಕಾರ ಅನುಮೋದನೆ ಹಿಂಪಡೆದಿರುವುದರಿಂದ ಯಾವುದೇ ಹಾನಿಯಾಗುವುದಿಲ್ಲ. ಎಫ್‌ಐಆರ್ ದಾಖಲಿಸಿ, ತನಿಖೆ ನಡೆಯುತ್ತಿದೆ. ಈಗ ಅನುಮೋದನೆ ಹಿಂಪಡೆದರೆ ಏನೂ ಆಗುವುದಿಲ್ಲ. ಹೀಗಾಗಿ, ಆದೇಶದ ಮೇಲೆ ಫೈಂಡಿಂಗ್ ಇರಬಾರದು. ಅನುಮೋದನೆ ಹಿಂಪಡೆಯಬೇಕಾದರೆ ಹಿಂಪಡೆಯಲಿ” ಎಂದರು.
ಆಗ ನ್ಯಾ. ದೀಕ್ಷಿತ್ ಅವರು “ಹಾಗಾದರೆ ನಿಮಗೆ ಏನು ಬೇಕು ಹಾಗೆ ಮಾಡಿ. ಏನೇನು ಘಟನೆಗಳು ನಡೆಯುತ್ತಿವೆ. ಅವು ನಮಗೆ ಇಷ್ಟವಿಲ್ಲದಿರಬಹುದು ಎಂಬುದು ಇನ್ನೊಂದು ವಿಚಾರ. ನ್ಯಾಯಮೂರ್ತಿಗೆ ಏನೆನ್ನಿಸುತ್ತದೆ ಎಂಬುದನ್ನು ಕಾನೂನು ಆಧರಿಸಿಲ್ಲ. ಕಾನೂನಿನ ಅನ್ವಯ ನಾವು ನಡೆದುಕೊಳ್ಳಬೇಕು” ಎಂದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಸಿಬಿಐ ಅನುಮೋದನೆ ಹಿಂಪಡೆದಿರುವುದಕ್ಕೆ ಆಕ್ಷೇಪಿಸಿ ಸಲ್ಲಿಸಿದ್ದ ಮಧ್ಯಪ್ರವೇಶಿಕೆ ಕೋರಿಕೆಯ ಪರವಾಗಿ ವಾದಿಸಿದ ವಕೀಲ ವೆಂಕಟೇಶ್ ದಳವಾಯಿ ಅವರು “ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದೆ. ಅನುಮೋದನೆ ವಾಪಸಾತಿಗೆ ನಮ್ಮ ವಿರೋಧವಿದೆ. ಮಧ್ಯಂತರ ಆದೇಶ ಚಾಲ್ತಿಯಲ್ಲಿರುವಾಗ ರಾಜ್ಯ ಸರ್ಕಾರ ಅನುಮೋದನೆ ಆದೇಶ ಹಿಂಪಡೆದಿದೆ. ಮೇಲ್ಮನವಿದಾರರಿಗೆ ಸಹಾಯ ಮಾಡಲು ಇಡೀ ಸಂಪುಟ ಬೆನ್ನಿಗೆ ನಿಂತಿದೆ. ಸಂವಿಧಾನ 141ನೇ ವಿಧಿಯ ಅನ್ವಯ ನೆಲದ ಕಾನೂನನ್ನು ಉಲ್ಲಂಘಿಸುತ್ತೇನೆ ಎಂದು ರಾಜ್ಯ ಹೇಳಬಹುದೇ? ಬಾಕಿ ಇರುವ ಪ್ರಕರಣದಲ್ಲಿ ರಾಜ್ಯ ಸರ್ಕಾರ ಈ ರೀತಿ ನಡೆದುಕೊಳ್ಳಬಹುದೇ?” ಎಂದರು.
ಆಗ ಸಿಜೆ ಅವರು “ಮಧ್ಯಪ್ರವೇಶಿಕೆ ಕೋರದೇ ಸ್ವತಂತ್ರ ಪ್ರಕ್ರಿಯೆ ಮೂಲಕ ಅನುಮೋದನೆ ಹಿಂಪಡೆದಿರುವ ಆದೇಶ ಪ್ರಶ್ನಿಸಬಹುದು. ನಿಮ್ಮ ಬಳಿ 10 ಆಧಾರಗಳಿರಬಹುದು. ಇದನ್ನು ಸ್ವತಂತ್ರ ಪ್ರಕ್ರಿಯೆ ಮೂಲಕ ಪ್ರಶ್ನಿಸಿ” ಎಂದರು.
ಈ ಮಧ್ಯೆ, ನ್ಯಾ. ದೀಕ್ಷಿತ್ ಅವರು “ಸರ್ಕಾರ ತಂತಾನೆ ಇಲ್ಲಿಗೆ ಬಂದಿಲ್ಲ. ಅದನ್ನು ಬರುವಂತೆ ಮಾಡಲಾಗಿದೆ. ಯಾರೂ ಅವರನ್ನು ಆಹ್ವಾನಿಸಿಲ್ಲ. ಆಡಳಿತಾತ್ಮಕ ಕಾನೂನಿನ ವಿದ್ಯಾರ್ಥಿಯು ಈ ಆದೇಶವು ಯಾವುದೇ ಪ್ರಜ್ಞಾವಂತ ವ್ಯಕ್ತಿಯ ಆತ್ಮಸಾಕ್ಷಿಯನ್ನು ಬಡಿದೇಳಿಸುತ್ತದೆ ಎಂದು ಹೇಳಬಹುದು. ಆದರೆ, ಇದು ಸೂಕ್ತ ಪ್ರಕ್ರಿಯೆ ಪ್ರಕಾರ ನಮ್ಮ ಮುಂದಿಲ್ಲ. ಇದಕ್ಕೆ ನಾವು ಅತಿಯಾಯಿತು ಎಂದು ಹೇಳಬಹುದು. ಅದು ನಮ್ಮ ಆದೇಶದ ಭಾಗವೂ ಆಗಬಹುದು” ಎಂದರು.
ವಕೀಲ ದಳವಾಯಿ ಅವರು “ಮೇಲ್ಮನವಿದಾರರು ಸಾಮಾನ್ಯ ವ್ಯಕ್ತಿಯಲ್ಲ. ಸಂಪುಟ ಈ ರೀತಿ ತುರ್ತಾಗಿ ವರ್ತಿಸುವುದನ್ನು ನೋಡಿರಲಿಲ್ಲ” ಎಂದರು. ಇದಕ್ಕೆ ನ್ಯಾ. ದೀಕ್ಷಿತ್ ಅವರು “ಈಚೆಗೆ ನಿಮಗೆ ತುರ್ತಾಗಿ ವರ್ತಿಸುವ ಸರ್ಕಾರಗಳು ಬೇಕು” ಎಂದು ಲಘು ದಾಟಿಯಲ್ಲಿ ಹೇಳಿದರು. ಸಿಜೆ ವರಾಳೆ ಅವರು “ನ್ಯಾಯಾಲಯಕ್ಕೆ ಎಲ್ಲರೂ ಸಮಾನರು. ಅವರೂ ಯಾವುದೇ ಹುದ್ದೆ ಹೊಂದಿರಬಹುದು” ಎಂದರು. ಅಂತಿಮವಾಗಿ ನ್ಯಾಯಾಲಯವು ಅರ್ಜಿ ಇತ್ಯರ್ಥಪಡಿಸಿತು.