'ಯುವರ್ ಲಾರ್ಡ್‌ಶಿಪ್ಸ್' ಅಥವಾ 'ಮೈ ಲಾರ್ಡ್ಸ್' ಎಂಬ ಪದಪುಂಜ ಬಳಸಬಾರದು. ಬದಲಿಗೆ ನ್ಯಾಯಾಧೀಶರನ್ನು ಸರ್ ಎಂದು ಸಂಬೋಧಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ವಕೀಲರಿಗೆ ಕಿವಿಮಾತು ಹೇಳಿದೆ.
ಈ ಪದಪುಂಜಗಳನ್ನು ಪದೇ ಪದೇ ಬಳಸುತ್ತಿರುವುದಕ್ಕೆ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪೀಠ ಆಕ್ಷೇಪ ವ್ಯಕ್ತಪಡಿಸಿತು.
ವಕೀಲರು ಈ ಅಭ್ಯಾಸ ನಿಲ್ಲಿಸಿ ತಮ್ಮನ್ನು ಸರ್ ಎಂದಷ್ಟೇ ಕರೆಯುವುದಾದರೆ ಅರ್ಧದಷ್ಟು ಸಂಬಳ ನೀಡುವುದಾಗಿ ನ್ಯಾ. ನರಸಿಂಹ ಅವರು ಈ ಸಂದರ್ಭದಲ್ಲಿ ಚಟಾಕಿ ಹಾರಿಸಿದರು.
"ಮೈ ಲಾರ್ಡ್ಸ್ ಎಂದು ಎಷ್ಟು ಬಾರಿ ಹೇಳುತ್ತೀರಿ? ನೀವು ಇದನ್ನು ಹೇಳುವುದನ್ನು ನಿಲ್ಲಿಸಿದರೆ, ನನ್ನ ಸಂಬಳದ ಅರ್ಧದಷ್ಟು ನಿಮಗೆ ನೀಡುತ್ತೇನೆ. ಅದರ ಬದಲಿಗೆ "ಸರ್" ಅನ್ನುವ ಪದ ಬಳಸಬಾರದು?" ಎಂದು ಅವರು ಕೇಳಿದರು.
ನ್ಯಾಯಾಧೀಶರನ್ನು ವಕೀಲರು "ಮೈ ಲಾರ್ಡ್" ಮತ್ತು "ಯುವರ್ ಲಾರ್ಡ್ಶಿಪ್" ಎಂದು ಸಂಬೋಧಿಸದಂತೆ ತಡೆಯಲು 2006ರಲ್ಲಿ, ಭಾರತೀಯ ವಕೀಲರ ಪರಿಷತ್ ನಿರ್ಣಯ ಅಂಗೀಕರಿಸಿತ್ತು. ತಿದ್ದುಪಡಿ ಮಾಡಲಾದ ಬಿಸಿಐನಿಯಮಾವಳಿ ಅಧ್ಯಾಯ III-A ಪ್ರಕಾರ ನಡೆದುಕೊಳ್ಳುವಂತೆ ನ್ಯಾಯಾಲಯ ಸೂಚಿಸಿತು.
ವಸಾಹತುಶಾಹಿ ಯುಗದ ಪದಪುಂಜಗಳನ್ನು ಬಳಸದಂತೆ ವಕೀಲರಿಗೆ ಹಲವು ಹೈಕೋರ್ಟ್ ನ್ಯಾಯಮೂರ್ತಿಗಳು ಈಗಾಗಲೇ ಸಲಹೆ ನೀಡಿದ್ದಾರೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೃಷ್ಣ ಭಟ್, ಜ್ಯೋತಿ ಮೂಲಿಮನಿ, ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್ ಮುರಳೀಧರ್, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿದ್ದ ಅರುಣ್ ಕುಮಾರ್ ತ್ಯಾಗಿ, ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ದೇವನ್ ರಾಮಚಂದ್ರನ್, ಮದ್ರಾಸ್ ಹೈಕೋರ್ಟ್ ಅಂದಿನ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ನ್ಯಾ. ಸೆಂಥಿಲ್ ಕುಮಾರ್ ರಾಮಮೂರ್ತಿ, ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ತೊಟ್ಟತ್ತಿಲ್ ಬಿ ರಾಧಾಕೃಷ್ಣನ್ ರಾಜಸ್ಥಾನ ಹೈಕೋರ್ಟ್‌ನ ಪೂರ್ಣ ನ್ಯಾಯಾಲಯದ ನ್ಯಾಯಮೂರ್ತಿಗಳು ಈ ಹಿಂದೆ ವಿವಿಧ ಸಂದರ್ಭಗಳಲ್ಲಿ ಮೈಲಾರ್ಡ್ ರೀತಿಯ ಪದಗಳನ್ನು ಕೈಬಿಡುವಂತೆ ಕೋರಿದ್ದರು.