“ಅಜ್ಞಾನವು ಯಾವುದೇ ತಾರತಮ್ಯವನ್ನು ಸಾಮಾನ್ಯೀಕರಿಸುವುದಕ್ಕೆ ಸಮರ್ಥನೆಯಾಗಲಾರದು,” ಎಂದು ಹೇಳುವ ಮೂಲಕ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಮದ್ರಾಸ್ ಹೈಕೋರ್ಟ್ ಮಹತ್ವದ ನಿರ್ದೇಶನಗಳನ್ನು ಸರ್ಕಾರಗಳಿಗೆ ನೀಡಿದೆ (ಎಸ್ ಸುಶ್ಮಾ ವರ್ಸಸ್ ಪೊಲೀಸ್ ಕಮಿಷನರ್).
ತಮ್ಮ 104 ಪುಟಗಳ ತೀರ್ಪಿನಲ್ಲಿ, ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು ಸಮಾಜವು ಲೈಂಗಿಕ ಅಲ್ಪಸಂಖ್ಯಾತರ, ಸಲಿಂಗ ಸಂಬಂಧಗಳ ಬಗ್ಗೆ ಹೊಂದಿರುವ ದೃಷ್ಟಿಕೋನ ಹಾಗೂ ತಾವೂ ಸಹ ಈ ಬಗ್ಗೆ ಹೊಂದಿದ್ದ ಪೂರ್ವಾಗ್ರಹಗಳ ಬಗ್ಗೆ ಮುಚ್ಚುಮರೆಯಿಲ್ಲದೆ ದಾಖಲಿಸಿದ್ದಾರೆ. ಇದೇ ವೇಳೆ, ತಾವು ಹೇಗೆ ಈ ಪೂರ್ವಾಗ್ರಹವನ್ನು ದಾಟಿ ಬಂದೆ ಎನ್ನುವ ಬಗ್ಗೆಯೂ ಅವರು ವಿವರಿಸಿದ್ದಾರೆ.
ನ್ಯಾ. ಆನಂದ್ ವೆಂಕಟೇಶನ್ ಅವರು ಹಿಂದಿನ ವಿಚಾರಣೆಯ ವೇಳೆ, ತೀರ್ಪು ನೀಡುವುದಕ್ಕೂ ಮುನ್ನ ತಾವು ತೃತೀಯ ಲಿಂಗಿಗಳ ಕುರಿತು ಹಾಗೂ ಲೈಂಗಿಕ ಮನೋಭಾವವನ್ನು ಅರಿಯುವ ಕುರಿತು ಮನಶ್ಶಾಸ್ತ್ರಜ್ಞರೊಂದಿಗೆ ಸಮಾಲೋಚನೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದರು. ಇದು ನ್ಯಾಯಾಂಗವೂ ಸೇರಿದಂತೆ ದೇಶದ ಪ್ರಗತಿಪರ ವಲಯದಲ್ಲಿ ಸಂಚಲನ ಹುಟ್ಟಿಸಿತ್ತು. ಇದರಂತೆ ಅವರು ಮನಶ್ಶಾಸ್ತ್ರಜ್ಞರೂ, ತೃತೀಯ ಲಿಂಗಿಯೂ ಆದ ವಿದ್ಯಾ ದಿನಕರನ್ ಅವರೊಂದಿಗೆ ಮೇಲಿನ ವಿಚಾರವಾಗಿ ಸಮಾಲೋಚನಾ ಸಭೆ ನಡೆಸಿದ್ದರು. ಈ ಸಭೆಯ ಪೂರ್ಣ ವಿವರಗಳನ್ನು ಅವರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ತಾವು ವ್ಯಕ್ತಿಗತವಾಗಿ ಯಾವುದೇ ಸಲಿಂಗಿ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿರಲಿಲ್ಲ. “ನಾವು ತೊಡದ ಪಾದರಕ್ಷೆಯ ಬಗ್ಗೆ ಹೇಗೆ ತಾನೆ ಅರಿತಿರಲು ಸಾಧ್ಯ?” ಎಂದು ನ್ಯಾಯಮೂರ್ತಿಗಳು ವಿವರಿಸಿದ್ದಾರೆ. ಸಮಾಜ ಹಾಗೂ ತಾವು ಬೆಳೆದ ಪರಿಸರದಲ್ಲಿ ಸಲಿಂಗಿ, ಗೇ, ಲೆಸ್ಬಿಯನ್ ಗಳ ಬಗ್ಗೆ ಇರುವ ಅಸಹನೀಯತೆಯ ಬಗ್ಗೆ ಅವರು ಉಲ್ಲೇಖಿಸಿದ್ದಾರೆ.
ಸಮಾಜದಲ್ಲಿನ ಬಹುತೇಕರು ಎಲ್‌ಜಿಬಿಟಿ ಸಮುದಾಯದ ಬಗ್ಗೆ ಇದೇ ತೆರನಾದ ಪೂರ್ವಾಗ್ರಹ ಮತ್ತು ಅಜ್ಞಾನವನ್ನು ಹೊಂದಿದ್ದಾರೆ ಎಂದು ತೀರ್ಪಿನಲ್ಲಿ ಹೇಳಲಾಗಿದ್ದು. ಇದು ಸಾಮಾಜಿಕವಾಗಿ ಯಾವುದು “ಸರಿ ಮತ್ತು ಸೂಕ್ತ” ಎನ್ನುವ ಬಗ್ಗೆ ಸುಪ್ತ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದಿದ್ದಾರೆ.
ತೀರ್ಪಿನಲ್ಲಿ ನ್ಯಾ.ಆನಂದ್ ವೆಂಕಟೇಶ್ ಅವರು ಉಲ್ಲೇಖಿಸಿರುವ ಮಹತ್ವದ ಗ್ರಹಿಕೆಗಳು ಹೀಗಿವೆ:
ಸಮಾಜವು ಯಾವುದನ್ನು “ಸರಿ ಮತ್ತು ಸೂಕ್ತ” ಎಂದು ಒಪ್ಪುತ್ತದೆಯೋ ಅದನ್ನು ಪರೋಕ್ಷವಾಗಿ ಸಮರ್ಥಿಸುವುದನ್ನು ನಾವು ರೂಢಿಸಿಕೊಂಡಿರುತ್ತೇವೆ.
ಸಲಿಂಗ ಗೆಳೆತನದಲ್ಲಿ, ಆತ್ಮೀಯತೆಯಲ್ಲಿ ಯಾವುದೇ ಅಸಹಜತೆಯನ್ನು ಕಾಣದ ಸಮಾಜವು, ಇದೇ ವ್ಯಕ್ತಿಗಳು ತಮ್ಮ ನಿಲುವುನ್ನು ಕೊಂಚ ಮಾರ್ಪಡಿಸಿಕೊಂಡು ಸಲಿಂಗ ಸಂಬಂಧವನ್ನು ಹೊಂದಿದರೆ ಆಗ ತೀವ್ರವಾಗಿ ವಿರೋಧಿಸುತ್ತದೆ.
ಸಲಿಂಗ ಸಂಬಂಧಗಳ ಬಗ್ಗೆ ಸಮಾಜದಲ್ಲಿ ಮನಸ್ಥಿತಿಯು ಬದಲಾಗಬೇಕಿದೆ, ಇದಕ್ಕೆ ಪೂರಕವಾಗಿ ಕಾನೂನು ಇದ್ದರೆ ಅಗ ಗುರುತರವಾದ ಬದಲಾವಣೆಗಳನ್ನು ಕಾಣಬಹುದು.
ಕೆಲ ಸಮಯದ ಹಿಂದೆ ಅಂಗವೈಕಲ್ಯವುಳ್ಳವರನ್ನು, ಮಾನಸಿಕ ಕಾಯಿಲೆಯುಳ್ಳವರನ್ನು ಸಮಾಜವು ಹೇಗೆ ನೋಡುತ್ತಿತ್ತು ಹಾಗೂ ಈ ಧೋರಣೆಯು ಸೂಕ್ತ ಕಾನೂನುಗಳನ್ನು ರೂಪಿಸುವುದರೊಂದಿಗೆ ಹೇಗೆ ಬದಲಾಯಿತು ಎನ್ನುವುದನ್ನು ತೀರ್ಪಿನಲ್ಲಿ ದಾಖಲಿಸಲಾಗಿದೆ.
“ಯಾವುದೇ ಕಾನೂನು ಅದನ್ನು ಸಮಾಜವು ಪುರಸ್ಕರಿಸದೆ ಪರಿಣಾಮಕಾರಿಯಾಗಲಾರದು. ಅಂತಹ ಸಾಮಾಜಿಕ ಪರಿವರ್ತನೆಯು ದಿನಬೆಳಗಾಗುವುದರೊಳಗೆ ಮೂಡುವುದಿಲ್ಲ. ಇದಕ್ಕೆ ನಿಯಮಿತ ಪರ್ಯಾಲೋಚನೆ ಅಗತ್ಯವಿದ್ದು, ಇದು ಸಾಂವಿಧಾನಿಕ ಸಂಸ್ಥೆಗಳಿಂದ ಮೂಡಬೇಕು. ಅದರಲ್ಲಿಯೂ, ಜನರಲ್ಲಿ ಅರಿವು ಮೂಡಿಸುವಲ್ಲಿ ನ್ಯಾಯಾಂಗದ ಪಾಲು ಮಹತ್ವದ್ದಾಗಿದೆ,” ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ಈ ಹಿಂದಿನ ವಿಚಾರಣೆ ವೇಳೆ ನ್ಯಾ. ಆನಂದ್ ವೆಂಕಟೇಶ್ ಅವರು, “ಮುಕ್ತವಾಗಿರುವ ಸಲುವಾಗಿ, ನಾನು ಈ ವಿಷಯದಲ್ಲಿ ನನ್ನ ಪೂರ್ವಾಗ್ರಹಗಳನ್ನು ತೊಡೆಯಲು ಪ್ರಯತ್ನಿಸುತ್ತಿದ್ದೇನೆ. ಪ್ರಕರಣದ ಸಂಬಂಧ ಅರ್ಜಿದಾರರು ಮತ್ತು ಪೋಷಕರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ವಿಕಸನ ಹೊಂದುವ ಪ್ರಕ್ರಿಯೆಯಲ್ಲಿದ್ದೇನೆ,” ಎಂದಿದ್ದರು. ಅನಂತರ ಅವರು ಮನಶ್ಶಾಸ್ತ್ರಜ್ಞರ ಜೊತೆ ಸಮಾಲೋಚನಾ ಸಭೆಗೆ ಮುಂದಾಗಿದ್ದರು.