ಜಪಾನ್‌ ಪ್ರಜೆಯ ಅಕ್ರಮ ಬಂಧನ: ಪಿಎಸ್ಐಗೆ ₹75,000 ದಂಡ ವಿಧಿಸಿದ ಮಾನವ ಹಕ್ಕುಗಳ ಆಯೋಗ; ತನಕಾಗೆ ಪರಿಹಾರ ಪಾವತಿಗೆ ಆದೇಶ

ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ಕಾನೂನು ಪ್ರಕ್ರಿಯೆ ಪಾಲಿಸಲಾಗಿಲ್ಲ. ತನಕಾ ಅವರ ಬಂಧನ ಮತ್ತು ಅವರನ್ನು ವಶಕ್ಕೆ ಪಡೆದಿರುವುದು ಕಾನೂನುಬಾಹಿರವಾಗಿದ್ದು, ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದ ಆಯೋಗ.
Hirotoshi Tanaka
Hirotoshi TanakaThe Indian Express

ಅಕ್ರಮವಾಗಿ ಜಪಾನ್‌ ಪ್ರಜೆಯನ್ನು ಬಂಧಿಸಿ, 19 ದಿನ ಜೈಲಿಗಟ್ಟುವ ಮೂಲಕ ಕಾನೂನು ಮತ್ತು ಮಾನವ ಹಕ್ಕು ಉಲ್ಲಂಘಿಸಿರುವ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಒಬ್ಬರಿಗೆ ₹75,000 ದಂಡ ವಿಧಿಸಿದ್ದು, ಅದನ್ನು ದೂರುದಾರರಿಗೆ ಪಾವತಿಸಲು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು (ಕೆಎಸ್‌ಎಚ್‌ಆರ್‌ಸಿ) ಈಚೆಗೆ ಆದೇಶಿಸಿದೆ.

ಬೆಂಗಳೂರಿನ ಆರ್‌ ಟಿ ನಗರದ ಅಂದಿನ ಪಿಎಸ್‌ಐ (ನಿವೃತ್ತ) ಬಿ ಹನುಮಂತರಾಯಪ್ಪ ವಿರುದ್ಧ ಜಪಾನ್‌ನ ಹಿರೊತೊಷಿ ತನಕಾ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ್ದ ಕೆಎಸ್‌ಎಚ್‌ಆರ್‌ಸಿ ಮುಖ್ಯಸ್ಥರಾದ ನ್ಯಾಯಮೂರ್ತಿ ಡಿ ಎಚ್‌ ವಘೇಲಾ, ಸದಸ್ಯರಾದ ಕೆ ಬಿ ಚಂಗಪ್ಪ ಮತ್ತು ಆರ್‌ ಕೆ ದತ್ತ ಅವರ ನೇತೃತ್ವದ ತ್ರಿಸದಸ್ಯ ಪೀಠವು ತನಕಾ ಅವರಿಗೆ ದಂಡದ ಹಣವನ್ನು ಪರಿಹಾರದ ರೂಪದಲ್ಲಿ ಪಾವತಿಸಲು ನಿರ್ದೇಶನ ನೀಡಿದೆ.

“ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ಕಾನೂನು ಪ್ರಕ್ರಿಯೆ ಪಾಲಿಸಲಾಗಿಲ್ಲ. ತನಕಾ ಅವರ ಬಂಧನ ಮತ್ತು ಅವರನ್ನು ವಶಕ್ಕೆ ಪಡೆದಿರುವುದು ಕಾನೂನುಬಾಹಿರವಾಗಿದ್ದು, ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಹೀಗಾಗಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಮತ್ತು ಜನರ ಹಕ್ಕುಗಳನ್ನು ರಕ್ಷಿಸಬೇಕಾದ ಅಂದಿನ ಪಿಎಸ್‌ಐ ಹನುಮಂತರಾಯಪ್ಪ ಎಸಗಿರುವ ಕಾನೂನುಬಾಹಿರ ಕೃತ್ಯಕ್ಕೆ ತನಕಾ ಅವರಿಗೆ ಪರಿಹಾರ ನೀಡಬೇಕಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ವಿದೇಶಿ ಪ್ರಜೆಗಳು ಮತ್ತು ಅನಕ್ಷರಸ್ಥರನ್ನು ಒಳಗೊಂಡ ಜಾಮೀನು ನೀಡಬಹುದಾದ, ಸಂಜ್ಞೆಯೇತರ ಪ್ರಕರಣಗಳಲ್ಲಿ ಸಿಆರ್‌ಪಿಸಿ ಸೆಕ್ಷನ್‌ 50(1), 50(2) ಮತ್ತು 50-ಎ ಪಾಲಿಸುವುದಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿಗಳಿಗೆ ರಾಜ್ಯ ಸರ್ಕಾರವು ಸೂಕ್ತ ಮಾರ್ಗಸೂಚಿ ಜಾರಿ ಮಾಡಬೇಕು. ತನಕಾ ಅವರಿಗೆ ಸಂಬಂಧಿಸಿದಂತೆ ಜಾಮೀನು ನೀಡಬಹುದಾದ, ಸಂಜ್ಞೆಯೇತರ ಪ್ರಕರಣದಲ್ಲಿ ಕಾನೂನು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ₹75,000 ಗಳನ್ನು ಅವರಿಗೆ ಡಿ ಡಿ ಮೂಲಕ ಪರಿಹಾರ ಪಾವತಿಸಬೇಕು. ಪರಿಹಾರ ಪಾವತಿಸಲು ಬೇಕಿರುವ ಹಣವನ್ನು ಪಿಎಸ್‌ಐ ಹನುಮಂತರಾಯಪ್ಪ ಅವರಿಂದ ವಸೂಲಿ ಮಾಡಬೇಕು” ಎಂದು ಆದೇಶ ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ: ತನಕಾ ಅವರು 2019ರಲ್ಲಿ ಇಂಗ್ಲಿಷ್‌ ಕಲಿಯಲು ಬೆಂಗಳೂರಿಗೆ ಬಂದಿದ್ದು, ಆರ್‌ ಟಿ ನಗರದಲ್ಲಿರುವ ಕ್ವಿಕ್‌ ಸ್ಟೆಪ್‌ ಸೆಂಟರ್‌ಗೆ ಕೋಚಿಂಗ್‌ಗೆ ಸೇರ್ಪಡೆಯಾಗಿದ್ದರು. ಕೋಚಿಂಗ್‌ ಸೆಂಟರ್‌ನ ಸುಪರ್ಣಾ ಮುಜುಂದಾರ್‌ ಮತ್ತು ತನಖಾ ನಡುವೆ ಕಲಹ ಉಂಟಾಗಿ, ಸುಪರ್ಣಾ ಅವರು ಆರ್‌ ಟಿ ನಗರ ಠಾಣೆಯಲ್ಲಿ ತನಕಾ ವಿರುದ್ಧ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಐಪಿಸಿ ಸೆಕ್ಷನ್‌ 323 ಮತ್ತು 504ರ ಅಡಿ ಸಂಜ್ಞೆಯೇತರ ಪ್ರಕರಣ ದಾಖಲಿಸಿದ್ದರು. ಇದರ ಅನ್ವಯ ತನಕಾ ಅವರು ಪೊಲೀಸ್‌ ಠಾಣೆಗೆ ಬರುತ್ತಿದ್ದಂತೆ ಅಂದಿನ ಪಿಎಸ್‌ಐ ಆಗಿದ್ದ ಹನುಮಂತರಾಯಪ್ಪ ಅವರನ್ನು ಬಂಧಿಸಿದ್ದರು. ಇದರಿಂದ ಇಡೀ ರಾತ್ರಿ ತನಕಾ ಪೊಲೀಸ್‌ ಠಾಣೆಯಲ್ಲಿ ಉಳಿಯುವಂತಾಗಿತ್ತು.

ಇಂಗ್ಲಿಷ್‌ ಮತ್ತು ಕನ್ನಡ ಗೊತ್ತಿಲ್ಲದೇ, ಕಾನೂನು ಪ್ರಕ್ರಿಯೆ ತಿಳಿಯದೇ, ಕಾನೂನು ಸೇವೆಯೂ ಅವರಿಗೆ ಸಿಕ್ಕಿರಲಿಲ್ಲ. ಬಂಧನದ ಸಮಯದಲ್ಲಿ ಪೊಲೀಸರು ತನಕಾ ಅವರ ಹಕ್ಕುಗಳ ಬಗ್ಗೆ ತಿಳಿಸಿರಲಿಲ್ಲ. ಅವರ ಬಳಿ ಇದ್ದ ಪಾಸ್‌ಪೋರ್ಟ್‌, ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳು, ನಗದು, ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್‌ ಎಲ್ಲವನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು. ಕುಟುಂಬದವರು, ಸ್ನೇಹಿತರು ಅಥವಾ ಜಪಾನ್‌ ರಾಯಭಾರ ಕಚೇರಿ ಜೊತೆ ಮಾತನಾಡಲೂ ತನಕಾ ಅವರಿಗೆ ಪೊಲೀಸರು ಅವಕಾಶ ಮಾಡಿಕೊಟ್ಟಿರಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದರೂ ಔಷಧ ಪಡೆಯಲು ಅವಕಾಶ ಮಾಡಿಕೊಟ್ಟಿರಲಿಲ್ಲ. ತನಕಾ ಅವರನ್ನು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಗಿ, ಅವರು ತನಕಾ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದರು.

ಇದರಿಂದಾಗಿ, ಪ್ರಕರಣಕ್ಕೆ ಜಾಮೀನು ನೀಡಬಹುದಾದ ಸಂಜ್ಞೇಯೇತರ ಅಪರಾಧವಾದರೂ 2019ರ ಡಿಸೆಂಬರ್‌ 11ರಂದು ಜಾಮೀನು ಸಿಗುವವರೆಗೂ ತನಕಾ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಬೇಕಾಗಿತ್ತು. "ತಾನು ವಿದೇಶಿ ಪ್ರಜೆಯಾಗಿದ್ದು, ತನ್ನ ಅರಿವಿನ ಕೊರತೆಯನ್ನು ದುರ್ಬಳಕೆ ಮಾಡಿಕೊಂಡು ಕಿರುಕುಳ ನೀಡಿರುವ ಪೊಲೀಸ್‌ ಅಧಿಕಾರಿಗೆ ಕಠಿಣ ಕ್ರಮಕೈಗೊಳ್ಳಬೇಕು” ಎಂದು ತನಕಾ ಆಯೋಗಕ್ಕೆ ದೂರು ನೀಡಿದ್ದರು.

“ಇದರ ವಿಚಾರಣೆ ನಡೆಸಿದ ಆಯೋಗವು ದೂರುದಾರರನ್ನು ಬಂಧಿಸಿರುವುದು ಕಾನೂನುಬಾಹಿರವಾಗಿದ್ದು, ಅದಕ್ಕೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ. ತನಕಾ ಅವರನ್ನು ರಿಮ್ಯಾಂಡ್‌ಗೆ ಕೇಳುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಸಂಜ್ಞೇಯೇತರ ಅಪರಾಧವಾಗಿದ್ದರೂ ಯಾವುದೇ ವಾರೆಂಟ್‌ ಇಲ್ಲದೇ ತನಕಾ ಅವರನ್ನು ಬಂಧಿಸಲಾಗಿದೆ. ತನಿಖೆಗೆ ನಡೆಸಲು ಅನುಮತಿ ಕೇಳಿರುವ ದಾಖಲೆಗಳು ಮಾತ್ರ ಇವೆಯೇ ವಿನಾ ಬಂಧಿಸಲು ಮ್ಯಾಜಿಸ್ಟ್ರೇಟ್‌ ಅನುಮತಿ ಕೋರಿರುವ ದಾಖಲೆಗಳು ಇಲ್ಲ. ತನಕಾ ಅವರನ್ನು ಬಂಧಿಸುವುದಕ್ಕೆ ಸಂಬಂಧಿಸಿದಂತೆ ಸಕಾರಣಗಳು ಇಲ್ಲ. ಅದಾಗ್ಯೂ, ತನಕಾ ಅವರು 19 ದಿನ ನ್ಯಾಯಾಂಗ ಬಂಧನದಲ್ಲಿ ಕಳೆಯಬೇಕಾಗಿತ್ತು. ಆಯೋಗದ ಮುಂದಿರುವ ದಾಖಲೆಗಳನ್ನು ಪರಿಶೀಲಿಸಿದಾಗ ಹಾಲಿ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆ ಪಾಲಿಸಿಲ್ಲ ಎಂಬುದು ತಿಳಿಯುತ್ತದೆ. ಹೀಗಾಗಿ, ತನಕಾ ಅವರ ಬಂಧನವು ಕಾನೂನುಬಾಹಿರ ಮತ್ತು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ಆದೇಶದಲ್ಲಿ ವಿವರಿಸಿರುವ ಪೀಠವು ಪರಿಹಾರ ನೀಡಲು ಆದೇಶಿಸಿದೆ.

Attachment
PDF
Hirotoshi Tanaka V. B Hanumantharayappa.pdf
Preview

Related Stories

No stories found.
Kannada Bar & Bench
kannada.barandbench.com