ನೊದೀಪ್ ಕೌರ್ ಅಕ್ರಮ ಬಂಧನ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್

ಕೌರ್ ಅವರ ಬಂಧನಕ್ಕೆ ಸಂಬಂಧಿಸಿದಂತೆ ಅನಾಮಧೇಯ ವ್ಯಕ್ತಿಗಳು ಇಮೇಲ್ ಮೂಲಕ ದೂರು ನೀಡಿರುವುದನ್ನು ನ್ಯಾಯಾಲಯ ಪರಿಗಣಿಸಿತು. ಜೊತೆಗೆ ದೂರನ್ನು ಕ್ರಿಮಿನಲ್ ರಿಟ್ ಅರ್ಜಿ ಎಂದು ಪಟ್ಟಿ ಮಾಡಲು ನಿರ್ದೇಶಿಸಿತು.
Punjab and Haryana High Court
Punjab and Haryana High Court

ದಲಿತ ಕಾರ್ಮಿಕರ ಪರ ಹೋರಾಟಗಾರ್ತಿ ನೊದೀಪ್‌ ಕೌರ್‌ ಅವರ ಬಂಧನ ವಿರೋಧಿಸಿ ಅನಾಮಧೇಯ ಇಮೇಲ್‌ಗಳ ಮೂಲಕ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿದೆ.

ಜಾಲ ಕಲಾಪದ ಮೂಲಕ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ “ಕೌರ್‌ ಅವರನ್ನು ಅಕ್ರಮವಾಗಿ ಬಂಧಿಸಿರುವ ಬಗ್ಗೆ 06.02.2021 ಮತ್ತು 08.02.2021 ರಂದು ನೀಡಲಾದ ದೂರುಗಳನ್ನು ಇಮೇಲ್‌ ಮೂಲಕ ಸ್ವೀಕರಿಸಲಾಗಿದೆ. ಗೌರವಾನ್ವಿತ ನ್ಯಾಯಮೂರ್ತಿ ಜಸ್ವಂತ್‌ ಸಿಂಗ್‌ ಅವರು ಇದನ್ನು ಕ್ರಿಮಿನಲ್‌ ರಿಟ್‌ ಅರ್ಜಿಯಾಗಿ ಪರಿಗಣಿಸಿದ್ದು ನ್ಯಾಯಾಂಗ ವಿಭಾಗದಡಿ (ವಿಚಾರಣೆಗೆ) ಪಟ್ಟಿ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

Also Read
ಬುಡಕಟ್ಟು ಸಮುದಾಯದ ಹೋರಾಟಗಾರ ಫಾದರ್‌ ಸ್ಟ್ಯಾನ್‌ ಸ್ವಾಮಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ ಎಂದ ಎಡಿಜಿಪಿ

“ಇಮೇಲ್‌ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ ದೂರುದಾರರ ವಿಳಾಸ ಹಾಗೂ ಸಂಬಂಧಪಟ್ಟ ಮಾಹಿತಿಗಳು ಇಲ್ಲ” ಎಂದು ಅವರು ಹೇಳಿದ್ದಾರೆ.

ಪ್ರಕರಣದ ಸಂಬಂಧ ನ್ಯಾಯಾಲಯ ಸರ್ಕಾರಕ್ಕೆ ನೋಟಿಸ್‌ ನೀಡಿದೆ. ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ರಣವೀರ್‌ ಸಿಂಗ್‌ ಆರ್ಯ ಅವರು ನೋಟಿಸ್‌ ಸ್ವೀಕರಿಸಿದ್ದಾರೆ. ಪ್ರಕರಣನ್ನು ʼತುರ್ತು ಪಟ್ಟಿʼಯಡಿ ಫೆ 24ರಂದು ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ), ಸೆಕ್ಷನ್ 146 (ಗಲಭೆ), ಮತ್ತು ಸೆಕ್ಷನ್ 353 (ಕರ್ತವ್ಯಕ್ಕೆ ಅಡ್ಡಿ) ಅಡಿಯಲ್ಲಿ ಜನವರಿ 12 ರಂದು ಕೌರ್‌ ಅವರನ್ನು ಸೋನಿಪತ್ ಪೊಲೀಸರು ಬಂಧಿಸಿದ್ದರು. ಕುಂಡ್ಲಿ ಕೈಗಾರಿಕಾ ಪ್ರದೇಶದಲ್ಲಿ ವೇತನಕ್ಕಾಗಿ ಆಗ್ರಹಿಸಿ ಕೌರ್‌‌ ಅವರು 20 ಜನರೊಂದಿಗೆ ಪ್ರತಿಭಟನೆಯಲ್ಲಿ ತೊಡಗಿದ್ದಾಗ ಪೊಲೀಸರೊಂದಿಗೆ ಘರ್ಷಣೆ ಸಂಭವಿಸಿತ್ತು.

[ಆದೇಶವನ್ನು ಇಲ್ಲಿ ಓದಿ]

Attachment
PDF
CRWP_1493_2021_12_02_2021_INTERIM_ORDER.pdf
Preview

Related Stories

No stories found.
Kannada Bar & Bench
kannada.barandbench.com