Karnataka HC and Loksabha Member Prajwal Revanna
Karnataka HC and Loksabha Member Prajwal Revanna

ಚುನಾವಣಾ ಅಕ್ರಮ ಪ್ರಕರಣ: ನಿಮ್ಮ ಕಥೆ-ಚಿತ್ರಕಥೆ-ಸಂಭಾಷಣೆ ನಮಗೆ ಬೇಡ ಎಂದು ಪ್ರಜ್ವಲ್‌ ವಿರುದ್ದ ಹೈಕೋರ್ಟ್‌ ಕಿಡಿ

“ನೀವು ಮನೆಗೆ ಹೋಗಿ ಅಮ್ಮನ ಬಳಿ ಉತ್ತರ ಪಡೆದು ಬಂದು ತಿಳಿಸುತ್ತೇನೆ ಎಂದು ಮಗುವಿನ ರೀತಿಯಲ್ಲಿ ಹೇಳುತ್ತಿದ್ದೀರಲ್ಲಾ. ಇದು ಪರೀಕ್ಷೆ ಇದ್ದಂತೆ. ಸರಿಯಾಗಿ ಉತ್ತರ ನೀಡಬೇಕು” ಎಂದ ಪೀಠ.

ಹಾಸನ ಲೋಕಸಭಾ ಕ್ಷೇತ್ರದಿಂದ ತಾವು ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಲು ಕೋರಿದ ಅರ್ಜಿ ಕುರಿತ ಪಾಟೀ ಸವಾಲಿನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಪದೇ ಪದೇ ವಿವರಣೆ ನೀಡಲು ಮುಂದಾದ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ‘ರೀ, ನಿಮ್ಮ ಕಥೆ-ಚಿತ್ರಕಥೆ-ಸಂಭಾಷಣೆ ಎಲ್ಲಾ ನಮಗೆ ಬೇಡ. ಕೇಳಿದ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂಬುದಾಗಿ ಉತ್ತರಿಸಿ” ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ತಾಕೀತು ಮಾಡಿತು.

ಅಕ್ರಮ ಎಸಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಅವರ ಲೋಕಸಭೆ ಸದಸ್ಯತ್ವವನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ದೇವರಾಜೇಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಅರ್ಜಿದಾರರ ಪರ ವಕೀಲರು, 2019ರ ಏಪ್ರಿಲ್‌ 17ರಂದು ಹೊಳೆನರಸೀಪುರದ ಚನ್ನಾಂಬಿಕಾ ಥಿಯೇಟರ್ ಒಳಗೆ ನಿಂತಿದ್ದ ಕೆಎ 01ಎಂಎಚ್ 4477 ಇನ್ನೋವಾ ಕಾರಿನಲ್ಲಿದ್ದ 1.20 ಲಕ್ಷ ರೂಪಾಯಿ ಮೊತ್ತವನ್ನು ಚುನಾವಣಾ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದ್ದು, ಹೌದಲ್ಲವೇ ಎಂದು ಪ್ರಜ್ವಲ್ ರೇವಣ್ಣ ಅವರನ್ನು ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಪ್ರಜ್ವಲ್ ಅವರು ‘ಇಲ್ಲ, ಅದು ನನ್ನ ತಂದೆಯ ಎಸ್ಕಾರ್ಟ್‌ನವರಿಗೆ ಸೇರಿದ ಸರ್ಕಾರಿ ಕಾರು ಆಗಿತ್ತು. ಆಗ ತಂದೆ ಲೋಕೋಪಯೋಗಿ ಸಚಿವರಾಗಿದ್ದರು. ಕಾರು ಥಿಯೇಟರ್ ಒಳಗೆ ನಿಂತಿರಲಿಲ್ಲ. ಕಾಂಪೌಂಡ್ ಒಳಗೆ ನಿಂತಿತ್ತು. ಅವತ್ತು ಆ ಹಣವನ್ನು ಐಟಿ (ಆದಾಯ ತೆರಿಗೆ) ಅಧಿಕಾರಿಗಳೇ ತಂದು ಕಾರಿನಲ್ಲಿ ದುರುದ್ದೇಶದಿಂದ ಇರಿಸಿ ದೂರು ದಾಖಲಿಸಿದ್ದರು” ಎಂದರು.

ನಂತರ ಅದಕ್ಕೆ ತದ್ವಿರುದ್ಧವಾಗಿ ಅಷ್ಟಕ್ಕೂ ಆ ಹಣವನ್ನು ನನ್ನ ತಾಯಿ ನಮ್ಮ ಮನೆಯ ಸೇವಕನಿಗೆ ಹಸುಗಳಿಗೆ ಬೂಸಾ ತರಲು ನೀಡಿದ್ದರು. ಈಗಾಗಲೇ ಈ ದೂರಿನ ತನಿಖೆ ನಡೆದಿದ್ದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ ಎಂದರು.

ಆಗ ಪೀಠವು “ರೀ, ನಿಮ್ಮ ಕಥೆ-ಚಿತ್ರಕಥೆ-ಸಂಭಾಷಣೆ ಎಲ್ಲಾ ನಮಗೆ ಬೇಡ. ವಕೀಲರು ಕೇಳಿದ ಪ್ರಶ್ನೆಗಷ್ಟೇ ಹೌದು ಅಥವಾ ಇಲ್ಲ ಎಂದು ಉತ್ತರಿಸಿ. ನೀವು ನೀಡಿದ ಉತ್ತರವನ್ನು ದಾಖಲು ಮಾಡಿಕೊಳ್ಳುತ್ತೇನೆ” ಎಂದರು.

ಚುನಾವಣೆ ಘೋಷಣೆಯಾದ ನಂತರ ನಿಮ್ಮ ಖಾತೆಯಲ್ಲಿ 27 ಲಕ್ಷ ರೂಪಾಯಿ ಇತ್ತು. ಆ ಬಗ್ಗೆ ಸೂಕ್ತ ವಿವರಣೆ ಅಫಿಡವಿಟ್‌ನಲ್ಲಿ ಇಲ್ಲವಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಜ್ವಲ್ ಅವರು ಕರ್ನಾಟಕ ಬ್ಯಾಂಕ್ ಖಾತೆಗೆ ತಂದೆ ಎಚ್ ಡಿ ರೇವಣ್ಣ, ತಾಯಿ ಭವಾನಿ ರೇವಣ್ಣ ಸೇರಿದಂತೆ ಒಟ್ಟು 16 ಜನರಿಂದ ಸಾಲ ರೂಪದಲ್ಲಿ ಹಣ ಸಂದಾಯವಾಗಿತ್ತು ಎಂದರು. ಆ ಪ್ರಶ್ನೆಯನ್ನು ಪುನಾ ತಿರುವಿ ಕೇಳಿದಾಗ, ನನಗೆ ಹಾಲು ಮಾರಾಟದಿಂದ ಮತ್ತು ಕೃಷಿಯಿಂದ ಬಂದ ಆದಾಯವಿದೆ” ಎಂದರು.

Also Read
ಚುನಾವಣಾ ಅಕ್ರಮ ಪ್ರಕರಣ: ಸಂಸದ ಪ್ರಜ್ವಲ್‌ ರೇವಣ್ಣ ನಡೆಗೆ ಹೈಕೋರ್ಟ್‌ ಅಸಮಾಧಾನ

ಮುಂದುವರಿದು, ‘ಇದು ನನಗೆ ಗೊತ್ತಿಲ್ಲ. ನನ್ನ ಲೆಕ್ಕಪರಿಶೋಧಕರು ಹಾಗೂ ಬ್ಯಾಂಕ್ ಅಧಿಕಾರಿಗಳಿಂದ ವಿವರಣೆ ಪಡೆದುಕೊಂಡು ಬಂದು ಉತ್ತರಿಸುತ್ತೇನೆ’ ಎಂದು ತಿಳಿಸಿದರು.

ಇದರಿಂದ ಆಗ ಪೀಠವು ‘ರೀ, ನೀವು ಮನೆಗೆ ಹೋಗಿ ಅಮ್ಮನ ಬಳಿ ಉತ್ತರ ಪಡೆದು ಬಂದು ತಿಳಿಸುತ್ತೇನೆ ಎಂದು ಮಗುವಿನ ರೀತಿಯಲ್ಲಿ ಹೇಳುತ್ತಿದ್ದೀರಲ್ಲಾ. ಇದು ಪರೀಕ್ಷೆ ಇದ್ದಂತೆ. ಸರಿಯಾಗಿ ಉತ್ತರ ನೀಡಬೇಕು” ಎಂದರು.

ಅಂತಿಮವಾಗಿ ದಿನದ ಕಲಾಪದ ಸಮಯ ಮೀರಿದ ಕಾರಣ ವಿಚಾರಣೆಯನ್ನು ನ್ಯಾಯಾಲಯವು ನವೆಂಬರ್‌ 25ಕ್ಕೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com