ಅಕ್ರಮ ಅದಿರು ಮಾರಾಟ: ಜನಾರ್ದನ ರೆಡ್ಡಿ, ನಾಗೇಂದ್ರ ಸೇರಿ 16 ಮಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶ

ತನಿಖಾಧಿಕಾರಿ ಮಂಜುನಾಥ ಅಣ್ಣಿಗೇರಿ ಅವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶೆ (ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ) ಜೆ ಪ್ರೀತ್‌ ಅವರು ಆದೇಶ ಮಾಡಿದ್ದಾರೆ.
Mining Baron G Janardhana Reddy, Congress MLA B Nagendra
Mining Baron G Janardhana Reddy, Congress MLA B Nagendra

ಅಕ್ರಮವಾಗಿ ಕಬ್ಬಿಣದ ಅದಿರು ಮಾರಾಟದ ಮುಖೇನ ರಾಜ್ಯ ಸರ್ಕಾರಕ್ಕೆ ರಾಜಧನ ಖೋತಾ ಮತ್ತು ಇತರೆ ತೆರಿಗೆಗಳು ಸೇರಿ ಒಟ್ಟು 211 ಕೋಟಿ ರೂಪಾಯಿ ನಷ್ಟ ಮಾಡಿದ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖ್ಯಸ್ಥ ಗಾಲಿ ಜನಾರ್ದನ ರೆಡ್ಡಿ, ಅವರ ಆಪ್ತ ಕಾರ್ಯದರ್ಶಿ ಮತ್ತು ದೇವಿ ಎಂಟರ್‌ಪ್ರೈಸಸ್‌ ಪಾಲುದಾರ ಕೆ ಮೆಹಫೂಜ್‌ ಅಲಿ ಖಾನ್‌ ಹಾಗೂ ಕಾಂಗ್ರೆಸ್‌ ಶಾಸಕ ಬಿ ನಾಗೇಂದ್ರ ಸೇರಿ ಹಲವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ಆದೇಶಿಸಿದೆ.

ತನಿಖಾಧಿಕಾರಿ ಮಂಜುನಾಥ ಅಣ್ಣಿಗೇರಿ ಅವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶೆ (ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ) ಜೆ ಪ್ರೀತ್‌ ಅವರು ಈ ಆದೇಶ ಮಾಡಿದ್ದಾರೆ.

“ಆರೋಪಿಗಳಾದ ಜಿ ಜನಾರ್ದನ ರೆಡ್ಡಿ, ಮೆಹಫೂಜ್‌ ಅಲಿ ಖಾನ್‌, ಮಧುಕರ್‌ ವರ್ಮಾ, ಬಿ ನಾಗೇಂದ್ರ, ಕೆ ನಾಗರಾಜ, ಬಿ ವಿ ಶ್ರೀನಿವಾಸ ರೆಡ್ಡಿ, ಹೊತೂರ್‌ ಅಬ್ದುಲ್‌ ವಹಾಬ್‌, ನೂರ್‌ ಅಹ್ಮದ್‌, ಮೊಹಮ್ಮದ್‌ ಇಕ್ಬಾಲ್‌, ವಿ ಚಂದ್ರಶೇಖರ, ಸಿ ಶ್ರೀಕಾಂತ, ದೇವಿ ಎಂಟರ್‌ಪ್ರೈಸಸ್‌ ಕಂಪೆನಿ, ಮಧುಶ್ರೀ ಎಂಟರ್‌ಪ್ರೈಸಸ್‌, ಈಗಲ್‌ ಟ್ರೇಡರ್ಸ್‌ ಅಂಡ್‌ ಲಾಜಿಸ್ಟಿಕ್ಸ್‌, ಟ್ರೆಡೆಂಟ್‌ ಮಿನರಲ್ಸ್‌, ಟ್ರೆಡೆಂಟ್‌ ಮೈನಿಂಗ್‌ ಕಂಪೆನಿ ಪ್ರೈ ಲಿ ವಿರುದ್ಧ ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ ಕಾಯಿದೆ 1957ರ ಸೆಕ್ಷನ್‌ 21 ಮತ್ತು 23 ಜೊತೆಗೆ 4(1), 4(1ಎ) ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ. ಅಲ್ಲದೇ, ವಿಚಾರಣೆಯನ್ನು ಜೂನ್‌ 24ಕ್ಕೆ ಮುಂದೂಡಿದೆ.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕರ್ನಾಟಕ ಸರ್ಕಾರವು ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಲೋಕಾಯುಕ್ತದ ವಿಶೇಷ ತನಿಖಾ ದಳಕ್ಕೆ ಆದೇಶಿಸಿತ್ತು. 2008ರ ಜನವರಿಯಿಂದ 2011ರ ಏಪ್ರಿಲ್‌ ಅವಧಿಯಲ್ಲಿ ಅಕ್ರಮವಾಗಿ ಲಾಭ ಮಾಡಲು ಪಿತೂರಿ ನಡೆಸಿ, ಸರ್ಕಾರಕ್ಕೆ ರಾಜಧನ ಪಾವತಿಸದೇ ಕಬ್ಬಿಣದ ಅದಿರನ್ನು ಮೇಲೆ ಉಲ್ಲೇಖಿಸಿದ ಆರೋಪಿಗಳು ಅಕ್ರಮವಾಗಿ ಕದ್ದು ಸಾಗಾಟ ಮಾಡಿದ್ದಾರೆ ಎಂದು ವಿವರಿಸಲಾಗಿದೆ.

ಮೂರನೇ ಆರೋಪಿ ಮಧುಕರ್‌ ವರ್ಮಾ ಅವರು ಶ್ರೀ ಮಿನರಲ್ಸ್‌ ಮತ್ತು ಬಸವೇಶ್ವರ ಮಿನರಲ್ಸ್‌ನ ಮಾಲೀಕರಾಗಿದ್ದು, ಏಳನೇ ಆರೋಪಿ ಅಬ್ದುಲ್‌ ವಹಾಬ್‌, ಎಂಟನೇ ಆರೋಪಿ ನೂರ್‌ ಅಹ್ಮದ್‌ ಮತ್ತು ಮೊಹಮ್ಮದ್‌ ಇಕ್ಬಾಲ್‌ ಅವರು ಟ್ರಿಡೆಂಟ್‌ ಮಿನರಲ್ಸ್‌ನ ಪಾಲುದಾರರಾಗಿದ್ದು ಮತ್ತು ಟ್ರೆಡೆಂಟ್‌ ಮೈನಿಂಗ್‌ ಕಂಪೆನಿ ಪ್ರೈ ಲಿಮಿಟೆಡ್‌, ಸರ್ಕಾರಿ ಅಧಿಕಾರಿಗಳು, ಗಣಿ ಮಾಲೀಕರು, ಟ್ರೇಡರ್‌ಗಳ ಜೊತೆ 2009ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಕ್ರಿಮಿನಲ್‌ ಪಿತೂರಿ ನಡೆಸಿ, ಅಕ್ರಮ ಲಾಭ ಮಾಡಿಕೊಳ್ಳಲು ಸರ್ಕಾರಕ್ಕೆ ಸೇರಿದ 3,07,972  ಮೆಟ್ರಿಕ್‌ ಟನ್‌ ಅದಿರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆಯದೇ, ನಕಲಿ ಬಿಲ್‌ಗಳು ಮತ್ತು ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ. ಇದರ ಮೌಲ್ಯ 76,99,30,000 ರೂಪಾಯಿ ಆಗಿದೆ. ಇದಕ್ಕೆ ಯಾವುದೇ ರೀತಿಯಲ್ಲೂ ರಾಜಧನ, ಆದಾಯ ತೆರಿಗೆ ಮತ್ತು ಇತರೆ ತೆರಿಗೆಗಳನ್ನು ಪಾವತಿಸಿದೇ, ಆರೋಪಿಗಳು ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

2008 ಜನವರಿಯಿಂದ 2011 ಏಪ್ರಿಲ್‌ ಅವಧಿಯಲ್ಲಿ ಟ್ರೆಡೆಂಟ್‌ ಮಿನಿರಲ್ಸ್‌ ಮತ್ತು ಟ್ರಿಡೆಂಟ್‌ ಮೈನಿಂಗ್‌ ಕಂಪೆನಿ ಪ್ರೈ. ಲಿ. ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಲು ಆರೋಪಿಗಳು ಪಿತೂರಿ ನಡೆಸಿದ್ದು, ಈ ಪ್ರದೇಶದಲ್ಲಿ ಸರ್ಕಾರಕ್ಕೆ ಸೇರಿದ ಭೂಮಿಯನ್ನು ದಾಲ್ಮಿಯಾ ಮೈನ್ಸ್‌ ಪಡೆದಿದ್ದು, ಒಟ್ಟಾರೆ 15,78,928 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ವಿದೇಶಕ್ಕೆ ರವಾನಿಸಲಾಗಿದೆ. ಈ ಪೈಕಿ 2008ರಲ್ಲಿ 87.191 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಮತ್ತು 2009ರಲ್ಲಿ 1,48,000 ಮೆಟ್ರಿಕ್‌ ಟನ್‌ ಅದಿರನ್ನು ಟ್ರಿಡೆಂಟ್‌ ಮಿನರಲ್ಸ್‌ ಸಂಸ್ಥೆಯು ಗಣಿ ಮತ್ತು ಅರಣ್ಯ ಇಲಾಖೆಯಿಂದ ಪರ್ಮಿಟ್‌ ಪಡೆದು ಒಟ್ಟಾರೆ 2,35,191 ಮೆಟ್ರಿಕ್‌ ಅದಿರನ್ನು ಕಾನೂನುಬಾಹಿರವಾಗಿ ಟೆಂಡರ್‌ ಮಾಡಿ, ಮಾರಾಟ ಮಾಡಿತ್ತು. 2009ರ ಮಾರ್ಚ್‌-ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 13,43,737 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು 1-11ರವರೆಗಿನ ಆರೋಪಿಗಳು ಆರ್‌ಕೆ ಮೈನಿಂಗ್‌, ಟ್ರಿಡೆಂಟ್‌ ಮಿನರಲ್ಸ್‌ನ ಮಾಲೀಕರಾಗಿರುವ ರವಿಕಲ್ಯಾಣ್‌ ರೆಡ್ಡಿ ಅವರು ಟ್ರಿಡೆಂಟ್‌ ಮಿನರಲ್ಸ್‌ ವ್ಯಾಪ್ತಿಯಲ್ಲಿ ಕಚ್ಚಾ ರಸ್ತೆ ನಿರ್ಮಿಸಿ, ಸರ್ಕಾರಕ್ಕೆ ಸೇರಿದ ಗಡಿ ಕಲ್ಲು ತೆರವು ಮಾಡಿ ಅದನ್ನು ಒತ್ತುವರಿ ಮಾಡಿದ್ದರು.

Also Read
[ಅಕ್ರಮ ಅದಿರು ಮಾರಾಟ] ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತಿತರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶ

1-11ರವರೆಗಿನ ಆರೋಪಿಗಳು 15ನೇ ಆರೋಪಿ ಜೊತೆಗೂಡಿ ಸರ್ಕಾರದಿಂದ ಕದ್ದಿರುವ 13,43,737 ಮೆಟ್ರಿಕ್‌ ಟನ್‌ ಅದಿರಿನಿಂದ ಲಾಭ ಮಾಡಿಕೊಳ್ಳಲು ನಕಲಿ ಬಿಲ್‌, ದಾಖಲೆ ಸೃಷ್ಟಿಸಿ, ಯಾವುದೇ ಅನುಮತಿ ಪಡೆಯದೆ ಆರ್‌ ಕೆ ಮೈನಿಂಗ್‌ ಮತ್ತು ಟ್ರಿಡೆಂಟ್‌ ಮೈನಿಂಗ್‌ನ ರವಿಕಲ್ಯಾಣ್‌ ರೆಡ್ಡಿಗೆ ವರ್ಗಾಯಿಸಲು ಸಹಕರಿಸಿದ್ದರು. ಅದಿರಿನ ಮಾರುಕಟ್ಟೆ ಮೌಲ್ಯ, ರಾಜಧನ, ಟಿಸಿಎಸ್‌, ಅರಣ್ಯ ಟ್ರಾನ್ಸಿಟ್‌ ಪಾಸ್‌ ಸೇರಿ ಶೇ. 2,262ರಷ್ಟಾಗಿತ್ತು. ಒಟ್ಟಾರೆ 211 ಕೋಟಿ ರೂಪಾಯಿಯನ್ನು ವಂಚಿಸಿ, ಸರ್ಕಾರಕ್ಕೆ ನಷ್ಟ ಮಾಡಲಾಗಿದೆ ಎಂದು ವಿವರಿಸಲಾಗಿದೆ.

Attachment
PDF
Manjunath Annegeri Vs G Janardhana Reddy and Others.pdf
Preview

Related Stories

No stories found.
Kannada Bar & Bench
kannada.barandbench.com