ಐಎಂಎ ಸಮೂಹ ಕಂಪೆನಿಯ ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್‌ನ ಅನರ್ಹ ಶಾಸಕ ರೋಷನ್ ಬೇಗ್ ಅವರನ್ನು ಭಾನುವಾರ ಸಿಬಿಐ ಬಂಧಿಸಿದ್ದು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಐಎಂಎ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳು ದೊರೆತ ಹಿನ್ನೆಲೆಯಲ್ಲಿ ಸಿಬಿಐ ಅವರನ್ನು ವಶಕ್ಕೆ ಪಡೆದಿದೆ.
“ರೋಷನ್ ಬೇಗ್ ತಮ್ಮಿಂದ ಹಣ ಪಡೆದಿದ್ದರು ಹಣ ವಾಪಸ್ ಕೇಳಿದಾಗ ರೌಡಿಗಳ ಮೂಲಕ ಜೀವ ಬೆದರಿಕೆ ಒಡ್ಡಿದ್ದರು” ಎಂದು ಖಾನ್ ಆರೋಪಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಬೇಗ್, ಜಮೀರ್ ಅಹಮದ್ ಸೇರಿದಂತೆ ವಿವಿಧ ರಾಜಕಾರಣಿಗಳು ಉದ್ಯಮಿಗಳನ್ನು ಖಾನ್ ಪ್ರಸ್ತಾಪಿಸಿದ್ದರು. ಖಾನ್ ಅವರಿಂದ ಬೇಗ್ ರೂ 200 ಕೋಟಿ ಪಡೆದ ಆರೋಪವಿದ್ದು ವಿಶೇಷ ತನಿಖಾ ತಂಡ ಕೂಡ ಅವರನ್ನು ವಿಚಾರಣೆಗೊಳಪಡಿಸಿತ್ತು.
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ಬಳಿಕ ರೋಷನ್ ಬೇಗ್ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ. ಇದೇ ವೇಳೆ ಸಿಬಿಐ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.