ಜೈಲು ಶಿಕ್ಷೆ ವ್ಯಕ್ತಿಯನ್ನು ಸ್ವಾತಂತ್ರ್ಯ ಮತ್ತು ಘನತೆರಹಿತನನ್ನಾಗಿ ಮಾಡುವುದಿಲ್ಲ: ಕರ್ನಾಟಕ ಹೈಕೋರ್ಟ್

ಇಂತಹ ಪ್ರಕರಣಗಳಲ್ಲಿ ಅಪರಾಧಿಗಳ ಸಾಮಾಜಿಕ ಬೇರು ಶುಷ್ಕವಾಗದಂತೆ ಮಾನವೀಯ ಧೋರಣೆ ತಳೆಯುವ ಅಗತ್ಯವಿದೆ ಎಂದ ನ್ಯಾಯಾಲಯ ಅರ್ಜಿದಾರರ ಪೆರೋಲ್ ಮನವಿಯನ್ನು ಪುರಸ್ಕರಿಸಿತು.
Karnataka High Court
Karnataka High Court

ತನ್ನ ಮಗಳ ನಿಖಾದಲ್ಲಿ (ವಿವಾಹ) ಪಾಲ್ಗೊಳ್ಳಲು ಕರ್ನಾಟಕ ಹೈಕೋರ್ಟ್‌ ಈಚೆಗೆ ವ್ಯಕ್ತಿಯೊಬ್ಬನಿಗೆ ಏಳು ದಿನಗಳ ಪೆರೋಲ್‌ ನೀಡಿದೆ [ಅಬ್ದುಲ್‌ ರೆಹಮಾನ್‌ ಮತ್ತು ಕರ್ನಾಟಕ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಕಂಬಿ ಎಣಿಸುತ್ತಿರುವ ವ್ಯಕ್ತಿಯ ಎಲ್ಲಾ ಬಗೆಯ ಸ್ವಾತಂತ್ರ್ಯ ಮತ್ತು ಘನತೆಯನ್ನು ಕಸಿದುಕೊಳ್ಳಲಾಗದು ಎಂದು ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ಅವರಿದ್ದ ಪೀಠ ತಿಳಿಸಿತು.

ಇಂತಹ ಪ್ರಕರಣಗಳಲ್ಲಿ ಅಪರಾಧಿಗಳ ಸಾಮಾಜಿಕ ಬೇರು ಶುಷ್ಕವಾಗದಂತೆ ಮಾನವೀಯ ಧೋರಣೆ  ತಳೆಯುವ ಅಗತ್ಯವಿದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.

"ಒಬ್ಬ ಅಪರಾಧಿಯು ಸಾಂದರ್ಭಿಕವಾಗಿಯಾದರೂ ನಾಗರಿಕ ಸಮಾಜದೊಂದಿಗೆ ಸಂಪರ್ಕ  ಹೊಂದಿರಬೇಕು, ಹೀಗಾದಾಗ ಜೈಲಿನಲ್ಲಿದ್ದಾಗಲೂ ಆತನ ಸಮಾಜದ ಬೇರುಗಳು ಒಣಗುವುದಿಲ್ಲ; ಇಲ್ಲದಿದ್ದರೆ, ಶಿಕ್ಷೆಯ ಅವಧಿ ಪೂರ್ಣಗೊಳಿಸಿ ಜೈಲಿನಿಂದ ಹಿಂದಿರುಗಿದಾಗ, ಅವನು ಸಂಪೂರ್ಣ ಆಗಂತುಕನಾಗಿ ಬಿಡಲಿದ್ದು ಜೀವನ ಅವನಿಗೆ ಕಷ್ಟಕರವಾಗಿಬಿಡಬಹುದು; ಇಂತಹದ್ದು ಕಲ್ಯಾಣ ರಾಜ್ಯದಲ್ಲಿ ನಡೆಯುವುದು ಸಂತಸದ ವಿಚಾರವಲ್ಲ, ”ಎಂದು ನ್ಯಾಯಾಲಯ ತಿಳಿಸಿದೆ.

ತಮ್ಮ ಮಗಳ ಮದುವೆಗಾಗಿ ಪೆರೋಲ್‌ ಕೋರಿದ್ದ ಅರ್ಜಿದಾರ ಅಬ್ದುಲ್‌ ರೆಹಮಾನ್‌ ಅವರು ಮಹಮದೀಯ ಕಾನೂನಿನ ಚೌಕಟ್ಟು ಕೃತಿಯ ನಾಲ್ಕನೇ ಆವೃತ್ತಿಯ ಪುಟ 93ರಲ್ಲಿ ಮಗಳ ನಿಖಾ ವೇಳೆ ತಂದೆಯ ಉಪಸ್ಥಿತಿ ಅಪೇಕ್ಷಣೀಯ ಎಂದು ತಿಳಿಸಿರುವುದಾಗಿ ಪ್ರತಿಪಾದಿಸಿದ್ದರು.

Also Read
ಅಸಾರಾಮ್ ಬಾಪು ಪೆರೋಲ್‌ ಮನವಿ: 1958ರ ನಿಯಮಾವಳಿಯಡಿ ಅರ್ಜಿ ಮರುಪರಿಶೀಲಿಸಲು ಸಮಿತಿಗೆ ರಾಜಸ್ಥಾನ ಹೈಕೋರ್ಟ್ ನಿರ್ದೇಶನ

“ಇಂಥದ್ದೇ ಅಭಿಪ್ರಾಯವನ್ನು ಸುಮಾ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣದಲ್ಲಿ ನ್ಯಾಯಾಲಯ ವ್ಯಕ್ತಪಡಿಸಿತ್ತು“ ಎಂದು ಪೀಠ ತಿಳಿಸಿತು. ಅಲ್ಲದೆ, ದೀರ್ಘಕಾಲದವರೆಗೆ ಜೈಲಿನಲ್ಲಿರುವವರಿಗೆ ಮಾನವೀಯ ಆಧಾರದ ಮೇಲೆ ಪೆರೋಲ್‌ ನೀಡಬೇಕೆಂಬ ನಿಯಮಾವಳಿ ಇದೆ. ಅಪರಾಧಿಗೆ ತನ್ನ ವೈಯಕ್ತಿಕ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮತ್ತು ಆತ ನಾಗರಿಕ ಸಮಾಜದೊಂದಿಗೆ ಸಂಪರ್ಕದಲ್ಲಿರಲು ಅವಕಾಶ ಒದಗಿಸುವುದು ಪೆರೋಲ್‌ನ ಮುಖ್ಯ ಉದ್ದೇಶ. ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲೂ ಪೆರೋಲ್‌ ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಅಲ್ಲದೆ ಪ್ರತಿಯೊಬ್ಬ ಮುಸ್ಲಿಂ ವಿವಾಹ ಸಮಾರಂಭದಲ್ಲಿ ಪೋಷಕರ ಪಾಲ್ಗೊಳ್ಳುವಿಕೆ ಅಗತ್ಯ ಆಚರಣೆಯ ಭಾಗವಾಗಿರುತ್ತದೆ. ಚಿಕ್ಕಮಗಳು ಮದುವೆಯಾದಾಗ ತಂದೆ ಉಪಸ್ಥಿತರಿರುವುದು ಅಪೇಕ್ಷಣೀಯವಾಗಿದ್ದು ಸಂವಿಧಾನದ 21ನೇ ವಿಧಿಯಲ್ಲಿ ಅಂತರ್ಗತವಾಗಿರುವ ಮಾನವೀಯ ಅಂಶಗಳಿಗೆ ಇದು ಅನುಗುಣವಾಗಿರುತ್ತದೆ ಎಂದು ಪೀಠ ವಿವರಿಸಿದೆ.

ಈ ಹಿನ್ನೆಲೆಯಲ್ಲಿ ಮನವಿ ಪುರಸ್ಕರಿಸಿದ ನ್ಯಾಯಾಲಯ ಅರ್ಜಿದಾರರನ್ನುಏಳು ದಿನಗಳ ಪೆರೋಲ್‌ ಮೇಲೆ ಬಿಡುಗಡೆ ಮಾಡುವಂತೆ ಸೂಚಿಸಿತು. ಅರ್ಜಿದಾರರಪರವಕೀಲಸಿರಾಜುದ್ದೀನ್ಅಹಮದ್ವಾದಮಂಡಿಸಿದ್ದರು. ಸರ್ಕಾರವನ್ನು ಹೆಚ್ಚುವರಿಸರಕಾರಿವಕೀಲೆನವ್ಯಾಶೇಖರ್‌ ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com