ನ್ಯಾಯಾಂಗ ಸ್ವತಂತ್ರ ಅಂಗ, ಅದು ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯಾಗಿದೆ ವಿನಾ ಯಾವುದೇ ರಾಜಕೀಯ ಪಕ್ಷ ಅಥವಾ ಸಿದ್ಧಾಂತಗಳಿಗೆ ಅಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ (ಸಿಜೆಐ) ಶುಕ್ರವಾರ ಹೇಳಿದರು.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅಸೋಸಿಯೇಷನ್ ಆಫ್ ಇಂಡೋ-ಅಮೆರಿಕನ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಜೆಐ ಮಾತನಾಡುತ್ತಿದ್ದರು.
“ಈ ವರ್ಷ ನಾವು ಸ್ವಾತಂತ್ರ್ಯದ 75ನೇ ವರ್ಷಾಚರಣೆಯಲ್ಲಿ ತೊಡಗಿರುವಾಗ, ಗಣರಾಜ್ಯದ 72ನೇ ವರ್ಷಕ್ಕೆ ಕಾಲಿಡುತ್ತಿರುವ ವೇಳೆ, ಪ್ರತಿಯೊಂದು ಸಂಸ್ಥೆಗಳಿಗೆ ಸಂವಿಧಾನ ನಿಯೋಜಿಸಿರುವ ಪಾತ್ರ ಮತ್ತು ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಪ್ರಶಂಸಿಸಲು ನಾವಿನ್ನೂ ಕಲಿತಿಲ್ಲ ಎಂದು ಸ್ವಲ್ಪ ವಿಷಾದದ ಭಾವನೆಯೊಂದಿಗೆ ಇಲ್ಲಿ ಹೇಳಬೇಕಿದೆ. ಪ್ರತಿ ಸರ್ಕಾರಿ ಕ್ರಮ ನ್ಯಾಯಾಂಗದ ಅನುಮೋದನೆಗೆ ಅರ್ಹವಾಗಿದೆ ಎಂದು ಅಧಿಕಾರದಲ್ಲಿರುವ ಪಕ್ಷ ನಂಬುತ್ತದೆ. ತಮ್ಮ ರಾಜಕೀಯ ಸ್ಥಾನ ಮತ್ತು ಉದ್ದೇಶಗಳನ್ನು ನ್ಯಾಯಾಂಗ ಮುನ್ನಡೆಸಬೇಕು ಎಂದು ವಿರೋಧಪಕ್ಷಗಳು ನಿರೀಕ್ಷಿಸುತ್ತವೆ” ಎಂದು ಸಿಜೆಐ ಹೇಳಿದರು.
ಇಂತಹ ಆಲೋಚನಾ ಪ್ರಕ್ರಿಯೆಯು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಬಗ್ಗೆ ತಿಳುವಳಿಕೆ ಇಲ್ಲದೇ ಇರುವ ಕಾರಣದಿಂದ ಉದ್ಭವಿಸುತ್ತದೆ. ಆದರೆ ಸಂವಿಧಾನಕ್ಕೆ ಮಾತ್ರ ನ್ಯಾಯಾಂಗ ಉತ್ತರದಾಯಿಯಾಗಿದೆ ಎಂದು ಅವರು ಹೇಳಿದರು.
"ನಾವು (ನ್ಯಾಯಾಂಗ) ಸಂವಿಧಾನಕ್ಕೆ ಮಾತ್ರ ಜವಾಬ್ದಾರರು ಎಂದು ನಾನು ಸ್ಪಷ್ಟಪಡಿಸುತ್ತೇನೆ. ಸಂವಿಧಾನದಲ್ಲಿ ರೂಪಿಸಲಾಗಿರುವ ಸಮತೋಲನ ಕಾಯ್ದುಕೊಳ್ಳಲು ಭಾರತದಲ್ಲಿ ಸಾಂವಿಧಾನಿಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ" ಎಂದು ಅವರು ಹೇಳಿದರು.
ಅಲ್ಲದೆ ಸಹಿಷ್ಣುತೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದರ ಪ್ರಾಮುಖ್ಯತೆ ಬಗ್ಗೆಯೂ ಅವರು ಮಾತನಾಡಿದರು. ಜೊತೆಗೆ ಅಮೆರಿಕದಲ್ಲಿರುವ ಭಾರತೀಯರು ಆರಾಮದಾಯಕ ಜೀವನ ನಡೆಸುತ್ತಿರುವಾಗ ಭಾರತದಲ್ಲಿರುವ ಅವರ ಪೋಷಕರು ದ್ವೇಷ ಮತ್ತು ಹಿಂಸಾಚಾರ ಮುಕ್ತ ಸಮಾಜದಲ್ಲಿ ಶಾಂತಿಯಿಂದ ನೆಲೆಸಬೇಕಿದೆ. 21ನೇ ಶತಮಾನದಲ್ಲಿ ಜನ ಸಂಕುಚಿತ ಮತ್ತು ವಿಚ್ಛಿದ್ರಕಾರಿ ಸಮಸ್ಯೆಗಳಿಂದಾಚೆಗೆ ಬೆಳೆಯಬೇಕು ಎಂದು ಹೇಳಿದರು.
"ಸಾಮಾಜಿಕ ಒಳಗೊಳ್ಳುವಿಕೆಯು ಸಮಾಜದ ಏಕತೆಯನ್ನು ಬಲಪಡಿಸುತ್ತದೆ. ಅಲ್ಲದೆ, ಇದುವೇ ಶಾಂತಿ ಮತ್ತು ಅಭಿವೃದ್ಧಿಯ ಮೂಲವಾಗಿದೆ. ನಾವು ನಮ್ಮನ್ನು ಒಗ್ಗೂಡಿಸುವ ವಿಷಯಗಳೆಡೆಗೆ ಗಮನ ಕೇಂದ್ರೀಕರಿಸಬೇಕೇ ಹೊರತು ನಮ್ಮನ್ನು ಒಡೆಯುವ ವಿಷಯಗಳ ಕಡೆಗಲ್ಲ," ಎಂದು ಅವರು ಖಚಿತವಾಗಿ ಹೇಳಿದರು.