ಸುಪ್ರೀಂ ತೀರ್ಪಿನ ಮೂಲಕ ರಾಜ್ಯಪಾಲರ ಸಮ್ಮತಿ ಪಡೆದಿದೆ ಎಂದು ಭಾವಿಸಲಾದ ಕಾಯಿದೆಗಳಿಗೆ ಮದ್ರಾಸ್ ಹೈಕೋರ್ಟ್ ತಡೆ

ಪ್ರಕರಣ ಇತ್ತೀಚೆಗೆ ರಾಜ್ಯ ಸರ್ಕಾರ ಸೂಚಿಸಿದ ತಿದ್ದುಪಡಿಗಳಿಗೆ ಸಂಬಂಧಿಸಿದ್ದು ವಿವಿಧ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಉಪಕುಲಪತಿಗಳನ್ನು ನೇಮಿಸುವ ರಾಜ್ಯಪಾಲರ ಅಧಿಕಾರವನ್ನು ಕಸಿದುಕೊಂಡಿತ್ತು.
Madras High Court
Madras High Court
Published on

ವಿವಿಧ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸುವ ರಾಜ್ಯಪಾಲರ ಅಧಿಕಾರ ಕಸಿದು, ಆ ಅಧಿಕಾರವನ್ನು ತನಗೆ ವಹಿಸಿಕೊಂಡು ತಮಿಳುನಾಡು ಸರ್ಕಾರ ಇತ್ತೀಚೆಗೆ ಮಾಡಿದ್ದ ತಿದ್ದುಪಡಿಗಳು ಜಾರಿಯಾಗದಂತೆ ಮದ್ರಾಸ್ ಹೈಕೋರ್ಟ್ ಬುಧವಾರ ತಡೆ ನೀಡಿದೆ.

ರಾಜ್ಯವನ್ನು ಪ್ರತಿನಿಧಿಸಿದ್ದ ಅಧಿಕಾರಿಗಳು ಯಾವುದೇ ಮಧ್ಯಂತರ ಆದೇಶವನ್ನು ನೀಡುವ ಮೊದಲು ಕನಿಷ್ಠ ಗುರುವಾರದವರೆಗೆ ಪ್ರಕರಣ ಮುಂದೂಡಬೇಕೆಂದು ಒತ್ತಾಯಿಸಿದರಾದರೂ, ನ್ಯಾಯಮೂರ್ತಿಗಳಾದ ಜಿ ಆರ್ ಸ್ವಾಮಿನಾಥನ್ ಮತ್ತು ವಿ ಲಕ್ಷ್ಮಿನಾರಾಯಣನ್ ಅವರಿದ್ದ ರಜಾಕಾಲೀನ ಪೀಠ ನ್ಯಾಯಾಲಯದ ಸಾಮಾನ್ಯ ಕಾರ್ಯಾವಧಿಯನ್ನೂ ಮೀರಿ ಸಂಜೆ 7ಗಂಟೆಗೆ ತಡೆಯಾಜ್ಞೆ ಹೊರಡಿಸಿತು.

Also Read
ರಾಜ್ಯಪಾಲ ರವಿ ಅವರಿಗೆ ನ್ಯಾಯಾಲಯದ ಬಗ್ಗೆ ಗೌರವ ಕಡಿಮೆ, ಬಾಹ್ಯ ಪರಿಗಣನೆಗಳಿಂದ ಪ್ರಭಾವಿತ: ಸುಪ್ರೀಂ ತರಾಟೆ

ಆದೇಶದ ವೇಳೆ ನ್ಯಾಯಮೂರ್ತಿಗಳ ಧ್ವನಿವರ್ಧಕವನ್ನು ನಿಷ್ಕ್ರಿಯ ಮಾಡಲಾಗಿತ್ತು. ವಿಚಾರಣೆಗಾಗಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮತ್ತು ಹಿರಿಯ ವಕೀಲ ಪಿ ವಿಲ್ಸನ್ ಅವರು ಈ ಸಮಸ್ಯೆಯನ್ನು ಪೀಠದ ಗಮನಕ್ಕೆ ತರುವ ಪ್ರಯತ್ನ ಮಾಡಿದರಾದರೂ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ.

ರಾಜ್ಯಪಾಲರ ಅಧಿಕಾರ ಕುರಿತು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ್ದ ತೀರ್ಪಿನನ್ವಯ ರಾಜ್ಯಪಾಲರು ಅಂಗೀಕರಿಸಿದ್ದಾರೆಂದು ಪರಿಗಣಿಸಲಾದ ಎಂಟು ರಾಜ್ಯ ತಿದ್ದುಪಡಿ ಕಾಯಿದೆಗಳನ್ನು ಪ್ರಶ್ನಿಸಿ ಬಿಜೆಪಿ ನಾಯಕ ಕೆ ವೆಂಕಟಾಚಲಪತಿ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ತಮಿಳುನಾಡು ಸರ್ಕಾರ ಅಧಿಕೃತ ಗೆಜೆಟ್‌ನಲ್ಲಿ ಹತ್ತು ರಾಜ್ಯ ಕಾಯಿದೆಗಳಿಗೆ ಅಧಿಸೂಚನೆ ಹೊರಡಿಸಿತ್ತು, ಆ ಕಾಯಿದೆಗಳನ್ನು ರಾಜ್ಯಪಾಲ ಆರ್ ಎನ್ ರವಿ ಅವರು "ಸಮ್ಮತಿಸಿದ್ದಾರೆಂದು ಪರಿಗಣಿಸಲಾಗಿದೆ" ಎಂದು ಸರ್ಕಾರ ಘೋಷಿಸಿತ್ತು.

ಭಾರತದಲ್ಲಿ ಸರ್ಕಾರವೊಂದು ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಒಪ್ಪಿಗೆಯಿಲ್ಲದೆ, ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಬಲದ ಮೇಲೆ ಕಾಯಿದೆ ಜಾರಿಗೊಳಿಸಿದ ಮೊದಲ ನಿದರ್ಶನ ಇದಾಗಿತ್ತು.

ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಉಪಕುಲಪತಿಗಳ ನೇಮಕಾತಿಗೆ ಸಂಬಂಧಿಸಿದ ನಿಬಂಧನೆಗಳಲ್ಲಿ "ಕುಲಪತಿ" ಎಂಬ ಪದವನ್ನು "ಸರ್ಕಾರ" ಎಂಬ ಅಭಿವ್ಯಕ್ತಿಯೊಂದಿಗೆ ಬದಲಾಯಿಸುವುದನ್ನು ಪ್ರಶ್ನಿಸಿ ವಕೀಲ ವಿ ಆರ್ ಷಣ್ಮುಗನಾಥನ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿತ್ತು.

ವಾದಗಳನ್ನು ಆಲಿಸಿದ, ನ್ಯಾಯಾಲಯ ಸಂಜೆ 6.45 ರ ಸುಮಾರಿಗೆ ಅಂತಿಮವಾಗಿ ಮಧ್ಯಂತರ ಆದೇಶ ನೀಡಿತು. ಆದರೆ ಹಾಗೆ ಮಾಡುವಾಗ ಧ್ವನಿವರ್ಧಕವನ್ನು ನಿಷ್ಕ್ರಿಯಗೊಳಿಸಿತ್ತು.

Kannada Bar & Bench
kannada.barandbench.com