
ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳನ್ನು ನಿರ್ವಹಿಸುವಾಗ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಚಲಾಯಿಸಬೇಕಾದ ಅಧಿಕಾರಗಳನ್ನು ವಿವರಿಸುವ ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಪಂಜಾಬ್ ರಾಜ್ಯಪಾಲರ ಪ್ರಕರಣದ ತೀರ್ಪಿನಲ್ಲಿ ನ್ಯಾಯಾಲಯ ನಿಗದಿಪಡಿಸಿದ ತತ್ವಗಳನ್ನು ಉಲ್ಲಂಘಿಸಿ, ರಾಜ್ಯಪಾಲರು ಹತ್ತು ಮಸೂದೆಗಳನ್ನು ಅನಗತ್ಯವಾಗಿ ದೀರ್ಘಕಾಲದವರೆಗೆ ತಮ್ಮ ಬಳಿಯೇ ಬಾಕಿ ಇರಿಸಿಕೊಂಡಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಹೇಳಿದೆ.
"ಮಸೂದೆಗಳಿಗೆ ಅಂಕಿತವನ್ನು ತಡೆಹಿಡಿಯುವ ಅಂತಿಮ ಘೋಷಣೆಗೂ ಮುನ್ನ ರಾಜ್ಯಪಾಲರು ಈ ಮಸೂದೆಗಳನ್ನು ಅನುಚಿತವಾಗಿ ಸುದೀರ್ಘಾವಧಿಯವರೆಗೆ ಬಾಕಿ ಇರಿಸಿರುವುದನ್ನು ಗಮನದಲ್ಲಿಟ್ಟುಕೊಂಡು ಹಾಗೂ ಪಂಜಾಬ್ ರಾಜ್ಯದ ಕುರಿತಾದ ಪ್ರಕರಣದಲ್ಲಿ ಈ ನ್ಯಾಯಾಲಯ ನೀಡಿರುವ ತೀರ್ಪಿಗೆ ರಾಜ್ಯಪಾಲರು ನಿಕೃಷ್ಟ ಗೌರವ ತೋರಿರುವುದು ಮತ್ತು ಅವರ ಕಾರ್ಯ ನಿರ್ವಹಣೆಯಲ್ಲಿ ನಿಶ್ಚಿತವಾಗಿ ಕಂಡು ಬಂದಿರುವ ಬಾಹ್ಯ ಪರಿಗಣನೆಗಳನ್ನು ಗಮನದಲ್ಲಿರಿಸಿಕೊಂಡು, ಈ ಹತ್ತು ಮಸೂದೆಗಳನ್ನು ರಾಜ್ಯ ಶಾಸಕಾಂಗವು ಮರುಪರಿಶೀಲಿಸಿದ ನಂತರ ರಾಜ್ಯಪಾಲರಿಗೆ ಮಂಡಿಸಿದ ದಿನಾಂಕದಂದು ಅಂದರೆ 18.11.2023 ರಂದೇ ಅನುಮೋದನೆ ನೀಡಲಾಗಿದೆ ಎಂದು ಪರಿಗಣಿಸಲಾಗಿದೆ ಎಂದು ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ನಮ್ಮ ಅಂತರ್ಗತ ಅಧಿಕಾರವನ್ನು ಚಲಾಯಿಸಿ ಘೋಷಿಸುವುದನ್ನು ಬಿಟ್ಟರೆ ಬೇರಾವ ದಾರಿಯೂ ನಮಗೆ ಉಳಿದಿಲ್ಲ" ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ನವೆಂಬರ್ 2020ರಿಂದ ಏಪ್ರಿಲ್ 2023 ರ ನಡುವೆ ತಮಿಳುನಾಡು ಶಾಸಕಾಂಗ ಅಂಗೀಕರಿಸಿದ್ದ ಹತ್ತು ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡದೆ ಇದ್ದುದರಿಂದ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಸದನಕ್ಕೆ ರಾಜ್ಯಪಾಲರು ಮರಳಿಸಿದ ಮಸೂದೆಯನ್ನು ಮರಳಿ ಶಾಸಕಾಂಗ ಅಂಗೀಕರಿಸಿದ ಬಳಿಕ ಎರಡನೇ ಸುತ್ತಿನಲ್ಲಿ ರಾಷ್ಟ್ರಪತಿಗಳ ಮುಂದೆ ರಾಜ್ಯಪಾಲರು ಮಸೂದೆ ಮಂಡಿಸಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ತಿಳಿಸಿದೆ. ಎರಡನೇ ಸುತ್ತಿನಲ್ಲಿ ಮಂಡಿಸಲಾದ ಮಸೂದೆ ಮೊದಲ ಹಂತದಲ್ಲಿ ರಾಜ್ಯಪಾಲರಿಗೆ ಮಂಡಿಸಲಾದ ಮಸೂದೆಗಿಂತ ತೀರಾ ಭಿನ್ನವಾಗಿದ್ದರೆ ಮಾತ್ರ ಹಾಗೆ ಮಂಡಿಸಬಹುದು ಎಂದು ಪೀಠ ಸ್ಪಷ್ಟಪಡಿಸಿದೆ.
ಹೀಗಾಗಿ ಎರಡನೇ ಸುತ್ತಿನಲ್ಲಿ ರಾಷ್ಟ್ರಪತಿಗಳ ಪರಿಗಣನೆಗೆ ರಾಜ್ಯಪಾಲರು 10 ಮಸೂದೆಗಳನ್ನು ಕಳಿಸಿರುವುದು ಕಾನೂನುಬಾಹಿರ ಎಂದು ಅಸಮಾಧಾನ ವ್ಯಕ್ತಪಡಿಸಿದ ಪೀಠ ರಾಜ್ಯಪಾಲ ರವಿ ಅವರು ಮಸೂದೆ ಕುರಿತಂತೆ ಕೈಗೊಂಡ ಎಲ್ಲಾ ಕ್ರಮಗಳನ್ನು ರದ್ದುಗೊಳಿಸಿತು.
ಮುಖ್ಯವಾಗಿ, ಮಸೂದೆಗಳು ರಾಜ್ಯಪಾಲರ ಬಳಿ ಬಹಳ ಸಮಯದಿಂದ ಬಾಕಿ ಉಳಿದಿದ್ದರಿಂದ ಮತ್ತು ಅವರು ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳಿಸಿ ಪ್ರಾಮಾಣಿಕವಾಗಿ ವರ್ತಿಸದ ಕಾರಣ, ರಾಜ್ಯ ಶಾಸಕಾಂಗ ಅವುಗಳನ್ನು ಮರು ಪರಿಶೀಲಿಸಿ ರಾಜ್ಯಪಾಲರೆದುರು ಮಂಡಿಸಿದ ದಿನದಿಂದಲೇ ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ ಎಂದು ಪರಿಗಣಿಸಲಾಗುತ್ತಿದೆ ಎಂದು ನ್ಯಾಯಾಲಯ ಆದೇಶಿಸಿದೆ.
ಇದೇ ವೇಳೆ ನ್ಯಾಯಾಲಯ ರಾಜ್ಯಪಾಲರು ಸಂಸದೀಯ ಪ್ರಜಾಪ್ರಭುತ್ವದ ಸ್ಥಾಪಿತ ರೂಢಿಗಳನ್ನು ಗೌರವಿಸಬೇಕು. ಶಾಸಕಾಂಗದ ಮೂಲಕ ವ್ಯಕ್ತವಾಗುವ ಜನರ ಇಚ್ಛೆಯನ್ನು ಗೌರವಿಸಬೇಕು ಎಂದು ಕೂಡ ಹೇಳಿದೆ.